ಮುಂಬೈ(ಸೆ.29): ಬಿಸಿಸಿಐನಲ್ಲೀಗ ಸ್ವಹಿತಾಸಕ್ತಿ ಸಂಘರ್ಷ(Conflict of Interest) ಜೋರಾಗಿದೆ. ಇತ್ತೀಚೆಗಷ್ಟೇ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ ಮುಖ್ಯಸ್ಥ ರಾಹುಲ್ ದ್ರಾವಿಡ್‌ಗೂ ಸ್ವಹಿತಾಸಕ್ತಿ ನೊಟೀಸ್ ನೀಡಿದ ಬೆನ್ನಲ್ಲೇ, ಇದೀಗ ಕಪಿಲ್ ದೇವ್ ನೇತೃತ್ವದ ಸಲಹಾ ಸಮಿತಿಗೂ ಬಿಸಿಸಿಐ ಸ್ವಹಿತಾಸಕ್ತಿ ಸಂಘರ್ಷ ನೊಟೀಸ್ ನೀಡಿದೆ. ನೊಟೀಸ್‌ಗೆ ಉತ್ತರಿಸೋ ಮೊದಲೇ ಸಲಹಾ ಸಮಿತಿ ಸದಸ್ಯೆ ಶಾಂತಾ ರಂಗಸ್ವಾಮಿ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ.

ಇದನ್ನೂ ಓದಿ: ಶಾಸ್ತ್ರಿ ಎದುರಾಗಿದೆ ಸಂಕಷ್ಟ; ಹೊಸದಾಗಿ ನಡೆಯುತ್ತಾ ಕೋಚ್ ಆಯ್ಕೆ?

ಸ್ವಹಿತಾಸಕ್ತಿ ಸಂಘರ್ಷದ ಕುರಿತು ಹಲವರು ಮಾತನಾಡಿದ್ದಾರೆ. ಟೀಕೆ ವ್ಯಕ್ತಪಡಿಸಿದ್ದಾರೆ. ಆದರೆ ಪ್ರತಿಯೊಬ್ಬರ ಮಾತನ್ನು ಕೇಳಿ ಬಿಸಿಸಿಐ ಎಥಿಕ್ಸ್ ಅಧಿಕಾರಿ ಡಿಕೆ ಜೈನ್ ನೊಟೀಸ್ ಕಳುಹಿಸುತ್ತಿದ್ದರೆ ಆಡಳಿತ  ನಡೆಸಲು ಸಾಧ್ಯವಿಲ್ಲ. ಇದು ನನಗೆ ನೋವಾಗಿದೆ. ಹೀಗಾಗಿ ಕ್ರಿಕೆಟ್ ಸಲಹಾ ಸಮಿತಿ ಹಾಗೂ ಕ್ರಿಕೆಟರ್ಸ್ ಆಸೋಸಿಯೇಶನ್‌ಗೂ ರಾಜೀನಾಮೆ ನೀಡಿದ್ದೇನೆ ಎಂದು ಶಾಂತ ರಂಗಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: ಎಲ್ಲಾ ವೃತ್ತಿಗೂ ಹಿತಾಸಕ್ತಿ ಸಂಘರ್ಷವಿದೆ: ಕುಂಬ್ಳೆ

ಬಿಸಿಸಿಐ ನೊಟೀಸ್ ಬಂದ ಮೇಲೆ ಹುದ್ದೆಯಲ್ಲಿ ಮುಂದುವರಿಯುವುದು ಸೂಕ್ತ ಎಂದೆನಿಸುತ್ತಿಲ್ಲ. ಜವಾಬ್ದಾರಿ ನೀಡುವಾಗ ಬಿಸಿಸಿಐ ಸ್ವಹಿತಾಸಕ್ತಿ ಕುರಿತು ಗಮನ ವಹಿಸಲಿ. ಇಷ್ಟೇ ಅಲ್ಲ ಸ್ವಹಿತಾಸಕ್ತಿ ಕುರಿತು ಬಿಸಿಸಿಐ ಸ್ಪಷ್ಟ ಮಾಹಿತಿ ನೀಡಲಿ ಎಂದು ರಂಗಸ್ವಾಮಿ ಹೇಳಿದ್ದಾರೆ.