‘ಜಗತ್ತಿನಲ್ಲಿ ಎಲ್ಲರಿಗೂ ಇಂಥ ಅದೃಷ್ಟ ಸಿಗುವುದಿಲ್ಲ. ಕೆಲವರಿಗೆ ಮಾತ್ರ ಮುಕ್ತ ಜೀವನ ಸಿಗುತ್ತದೆ. ಹೊಟ್ಟೆ ಉರಿದುಕೊಳ್ಳುವವರು ಉರಿದುಕೊಳ್ಳಲಿ’’. ಟೀಕಾಕಾರರ ವಿರುದ್ಧ ಮೊಹಮ್ಮದ್ ಶಮಿ ಅವರು ತಮ್ಮ ಟೀಕಾಕಾರರ ವಿರುದ್ಧ ಒಂದೇ ಸಾಲಿನ ಬಿರುಸಿನ ಉತ್ತರವಿದು.

ನವದೆಹಲಿ (ಡಿ.26):‘‘ಜಗತ್ತಿನಲ್ಲಿ ಎಲ್ಲರಿಗೂ ಇಂಥ ಅದೃಷ್ಟ ಸಿಗುವುದಿಲ್ಲ. ಕೆಲವರಿಗೆ ಮಾತ್ರ ಮುಕ್ತ ಜೀವನ ಸಿಗುತ್ತದೆ. ಹೊಟ್ಟೆ ಉರಿದುಕೊಳ್ಳುವವರು ಉರಿದುಕೊಳ್ಳಲಿ’’. ಟೀಕಾಕಾರರ ವಿರುದ್ಧ ಮೊಹಮ್ಮದ್ ಶಮಿ ಅವರು ತಮ್ಮ ಟೀಕಾಕಾರರ ವಿರುದ್ಧ ಒಂದೇ ಸಾಲಿನ ಬಿರುಸಿನ ಉತ್ತರವಿದು.

ತಮ್ಮ ಪತ್ನಿ ಹಸೀನ್ ಜಹಾನ್ ಹಾಗೂ ತಮ್ಮ ಮಗುವಿನೊಂದಿಗೆ ಇರುವ ಭಾವಚಿತ್ರವನ್ನು ಅವರು ಇತ್ತೀಚೆಗೆ ಫೇಸ್‌ಬುಕ್ ಪೇಜ್‌ನಲ್ಲಿ ಹಾಕಿಕೊಂಡಿದ್ದರು. ಫೋಟೋದಲ್ಲಿ ಶಮಿ ಪತ್ನಿ ಸ್ಲೀವ್‌ಲೆಸ್ ಟಾಪ್ ಧರಿಸಿದ್ದು ಇಸ್ಲಾಂ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಕಾರಣವಾಗಿತ್ತು. ಫೋಟೋ ನೋಡಿದ ಕೂಡಲೇ ತಡಮಾಡದೇ ಟೀಕಾಸ್ತ್ರ ಪ್ರಯೋಗಿಸಿದ್ದ ಇಂಥವರು, ಹಸೀನ್ ಜಹಾನ್ ಧರಿಸಿರುವ ಉಡುಪು ಇಸ್ಲಾಂ ಧರ್ಮ ವಿರೋಧಿಯಾಗಿದ್ದು, ಹಿಜಾಬ್ ಧರಿಸದೇ ಇರುವ ಕ್ರಮ ಸರಿಯಲ್ಲ ಎಂದು ಕಮೆಂಟ್‌ಗಳನ್ನು ಹಾಕಿದ್ದರು.

ಇದು ಶಮಿ ಅವರನ್ನು ಕೋಪಕ್ಕೆ ಕಾರಣವಾಗಿತ್ತು. ಟೀಂ ಇಂಡಿಯಾದಲ್ಲಿ ರಿವರ್ಸ್ ಸ್ವಿಂಗ್‌ಗೆ ಹೆಸರುವಾಸಿಯಾಗಿರುವ ಅವರು, ಅದೇ ರೀತಿಯಲ್ಲೇ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ತಮ್ಮ ಮಾತುಗಳನ್ನು ಮುಂದುವರಿಸಿ, ‘‘ಈ ಇಬ್ಬರೂ (ಪತ್ನಿ ಮತ್ತು ಪುತ್ರಿ) ನನ್ನ ಜೀವನದ ಅವಿಭಾಜ್ಯ ಅಂಗಗಳು. ಇವರನ್ನು ಹೇಗಿಡಬೇಕೆಂಬುದು ನನಗೆ ಚೆನ್ನಾಗಿ ಗೊತ್ತಿದೆ. ಟೀಕೆ ಮಾಡುವವರು ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಲಿ’’ ಎಂದು ಕುಟುಕಿದ್ದಾರೆ.

ಶಮಿ ಬೆಂಬಲಕ್ಕೆ ನಿಂತ ಕೈಫ್, ವಿಜಿ: ಕಾಮೆಂಟ್‌ಗಳ ಯುದ್ಧದ ನಡುವೆ ಟೀಕಾಕಾರರಿಗೆ ಖಡಕ್ ಉತ್ತರ ನೀಡುವ ಮೂಲಕ ಟೀಂ ಇಂಡಿಯಾದ ಮತ್ತೊಬ್ಬ ಆಟಗಾರ ಮೊಹಮ್ಮದ್ ಕೈಫ್, ಶಮಿ ಬೆಂಬಲಕ್ಕೆ ಬಂದಿದ್ದಾರೆ. ‘‘ಶಮಿಯವರ ಪತ್ನಿಯ ಬಗ್ಗೆ ಬಂದಿರುವ ಕೆಲ ಅಭಿಪ್ರಾಯಗಳು ನಿಜಕ್ಕೂ ನಾಚಿಕೆಗೇಡಿನ ವಿಚಾರ. ಶಮಿಯವರನ್ನು ನಾವು ಬೆಂಬಲಿಸಬೇಕು. ದೇಶದಲ್ಲಿ ಚರ್ಚೆ ಮಾಡಲು ಅನೇಕ ದೊಡ್ಡ ಸಮಸ್ಯೆಗಳಿವೆ. ಅದನ್ನು ಬಿಟ್ಟು ಕೇವಲ ಇಂಥ ಕ್ಷುಲ್ಲಕ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದು ಸರಿಯಲ್ಲ. ಜ್ಞಾನ ಇರುವವರು ಇದನ್ನು ಅರ್ಥ ಮಾಡಿಕೊಳ್ಳಲಿ’’ ಎಂದಿದ್ದಾರೆ. ಅತ್ತ, ಪ್ರೊ ಬಾಕ್ಸರ್ ವಿಜೇಂದರ್ ಸಿಂಗ್ ಸಹ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಶಮಿ ಫೋಟೋಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದವರ ನಡೆಯನ್ನು ಖಂಡಿಸಿದ್ದಾರೆ.

ಕ್ರೀಡಾಪಟುಗಳಿಗೆ ಸಂಪ್ರದಾಯವಾದಿಗಳ ಕಾಟ ತಪ್ಪಿದ್ದಲ್ಲ. ಈ ಹಿಂದೆ ಸಾನಿಯಾ ಮಿರ್ಜಾ ಅವರು ಟೆನಿಸ್ ಆಡುವಾಗ ಶಾರ್ಟ್ಸ್ ಧರಿಸಕೂಡದೆಂದು ಕೆಲ ಇಸ್ಲಾಂ ಸಂಘಟನೆಗಳು ಫತ್ವಾ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.