ಪತ್ನಿ ಜೊತೆಗಿನ ಕಿತ್ತಾಟದಿಂದ ಮಾನಸಿಕವಾಗಿ ನೊಂದಿರುವ ಟೀಮ್ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ, ಬಿಸಿಸಿಐ ಆಯ್ಕೆ ಸಮಿತಿ ಶಾಕ್ ನೀಡಿದೆ. ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದ ಶಮಿಗೆ ಇದೀಗ ಬಾರಿ ಹಿನ್ನಡೆಯಾಗಿದೆ.
ಬೆಂಗಳೂರು(ಜೂನ್.11): ವೈಯುಕ್ತಿ ಕಾರಣಗಳಿಂದ ಮಾನಸಿಕವಾಗಿ ನೊಂದಿರುವ ಟೀಮ್ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ಮತ್ತೊಂದು ಆಘಾತ ಎದುರಾಗಿದೆ. ಜೂನ್.14 ರಿಂದ ಆರಂಭಗೊಳ್ಳಲಿರುವ ಅಫ್ಘಾನಿಸ್ತಾನ ವಿರುದ್ಧಧ ಏಕೈಕ ಟೆಸ್ಟ್ ಪಂದ್ಯದಿಂದ ಮೊಹಮ್ಮದ್ ಶಮಿಯನ್ನ ಕೈಬಿಡಲಾಗಿದೆ.
ತಂಡಕ್ಕೆ ಆಯ್ಕೆಯಾಗೋ ಕ್ರಿಕೆಟಿಗರು ಯೋ-ಯೋ ಫಿಟ್ನೆಸ್ ಟೆಸ್ಟ್ ಪಾಸ್ ಆಗಲೇಬೇಕಿದೆ. ಆದರೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಯೋ-ಯೋ ಫಿಟ್ನೆಸ್ ಟೆಸ್ಟ್‌ನಲ್ಲಿ ಶಮಿ ಪಾಸ್ ಆಗಿಲ್ಲ. ಹೀಗಾಗಿ ಅನುಭವಿ ವೇಗಿ ಶಮಿಯನ್ನ ಟೀಮ್ಇಂಡಿಯಾ ಆಯ್ಕೆ ಸಮಿತಿ ಕೈಬಿಟ್ಟಿದೆ.
ಮೊಹಮ್ಮದ್ ಶಮಿ ಸ್ಥಾನಕ್ಕೆ ದೆಹಲಿ ವೇಗಿ ನವದೀಪ್ ಸೈನಿ ಆಯ್ಕೆಯಾಗಿದ್ದಾರೆ. 2017-18ರ ರಣಜಿ ಟ್ರೋಫಿಯಲ್ಲಿ ನವದೀಪ್ ಸೈನಿ 8 ಪಂದ್ಯದಲ್ಲಿ 34 ವಿಕೆಟ್ ಕಬಳಿಸಿ ಮಿಂಚಿದ್ದರು. ಸೈನಿ ಜೊತೆಗೆ ಹೈದರಾಬಾದ್ ವೇಗಿ ಮೊಹಮ್ಮದ್ ಸಿರಾಜ್ ಹಾಗೂ ವಿದರ್ಭ ವೇಗಿ ರಜನೀಶ್ ಗುರ್ಬಾನಿ ಟೀಮ್ಇಂಡಿಯಾ ಟ್ರೈನಿಂಗ್ ಸೆಶನ್‌ನಲ್ಲಿ ಪಾಲ್ಗೊಳ್ಳಲು ಬಿಸಿಸಿಐ ಸೂಚಿಸಿದೆ.
