ಟೀಮ್ಇಂಡಿಯಾ ಸೇರಿಕೊಂಡ ಹಾಕಿ ಮಾಜಿ ನಾಯಕ ಸರ್ದಾರ್ ಸಿಂಗ್

Sardar Singh back in India men’s hockey team for Champions Trophy
Highlights

ಮುಂದಿನ ತಿಂಗಳು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಗೆ ಭಾರತ ತಂಡವನ್ನ ಪ್ರಕಟಿಸಲಾಗಿದೆ. ಮಾಜಿ ನಾಯಕ ಸರ್ದಾರ್ ಸಿಂಗ್ ಮತ್ತೆ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 

ನವದೆಹಲಿ(ಮೇ.31)  ಮುಂಬರುವ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಗೆ ಭಾರತದ ಪುರುಷರ ತಂಡವನ್ನ ಪ್ರಕಟಿಸಲಾಗಿದೆ. 18 ಹಾಕಿ ಪಟುಗಳನ್ನ ಆಯ್ಕೆ ಮಾಡಿರುವ ತಂಡದಲ್ಲಿ ಮಾಜಿ ನಾಯಕ ಸರ್ದಾರ್ ಸಿಂಗ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕಳೆದ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ ಕೂಟದಿಂದ ಹೊರಗುಳಿದಿದ್ದ ಸರ್ದಾರ್ ಸಿಂಗ್ ಇದೀಗ ತಂಡಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಕನ್ನಡಿಗ ಎಸ್ ವಿ ಸುನೀಲ್ ತಂಡದಲ್ಲಿ ಸ್ಥಾನ ಕಾಪಾಡಿಕೊಂಡಿದ್ದಾರೆ. ಡಿಫೆಂಡರ್ ರೂಪಿಂದರ್ ಸಿಂಗ್, ಕೊತಜಿತ್ ಸಿಂಗ್ ಹಾಗೂ ಗುರಿಂದರ್ ಸಿಂಗ್ ಅವರನ್ನ ಕೈಬಿಡಲಾಗಿದೆ. ಇವರ ಬದಲು ಜರ್ಮನ್‌ಪ್ರೀತ್ ಸಿಂಗ್ ಹಾಗೂ ಸುರೇಂದ್ರ ಕುಮಾರ್‌ಗೆ ಅವಕಾಶ ಕಲ್ಪಿಸಲಾಗಿದೆ.  

ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್ ಕೂಟದಲ್ಲಿ ಸರ್ದಾರ್ ಸಿಂಗ್ ಅನುಪಸ್ಥಿತಿಯಲ್ಲಿ ಭಾರತ ಹಾಕಿ ತಂಡವನ್ನ ಗೋಲು ಕೀಪರ್ ಶ್ರೀಜೇಶ್ ಮುನ್ನಡೆಸಿದ್ದರು. ಆದರೆ ಭಾರತ ತಂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಇದೀಗ ಬಲಿಷ್ಠ ತಂಡವನ್ನ ಕಣಕ್ಕಿಳಿಸಿರುವ ಹಾಕಿ ಇಂಡಿಯಾ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಜೂನ್ 23 ರಂದು ಚಾಂಪಿಯನ್ ಟ್ರೋಫಿ ಹಾಕಿ ಟೂರ್ನಿ ಆರಂಭಗೊಳ್ಳಲಿದೆ. ಮೊದಲ ಪಂದ್ಯದಲ್ಲಿ ಭಾರತ ಬದ್ಧವೈರಿ ಪಾಕಿಸ್ತಾನ ತಂಡವನ್ನ ಎದುರಿಸಲಿದೆ.

ಜೂನ್ 23 ರಿಂದು ಜುಲೈ 1 ರವರಗೆ ನಡೆಯಲಿರುವ 37ನೇ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಗೆ ನೆದರ್ಲೆಂಡ್ ಆತಿಥ್ಯವಹಿಸಿದೆ. ಭಾರತ, ಪಾಕಿಸ್ತಾನ, ಅರ್ಜಂಟಿನಾ, ಆಸ್ಟ್ರೇಲಿಯಾ, ಬೆಲ್ಜಿಯಂ ಹಾಗೂ ನೆದರ್ಲೆಂಡ್ ತಂಡಗಳು ಚಾಂಪಿಯನ್ಸ್ ಟ್ರೋಫಿ ಕೂಟದಲ್ಲಿ ಪಾಲ್ಗೊಳ್ಳಲಿದೆ. 

ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾದ ಭಾರತ ತಂಡ:
ಗೋಲುಕೀಪರ್ : ಶ್ರೀಜೇಶ್, ಕೃಷನ್ ಬಹದ್ದೂರ್ ಪಾತಕ್
ಡಿಫೆಂಡರ್: ಹರ್ಮನ್‌ಪ್ರೀತ್ ಸಿಂಗ್, ವರುಣ್ ಕುಮಾರ್, ಜರ್ಮನ್‌ಪ್ರೀತ್ ಸಿಂಗ್, ಸುರೇಂದ್ರ ಕುಮಾರ್, ಬೀರೇಂದ್ರ ಲಕ್ರಾ ಹಾಗೂ ಅಮಿತ್ ರೋಹಿದಾಸ್
ಮಿಡ್‌ಫೀಲ್ಡರ್: ಮನ್‌ಪ್ರೀತ್ ಸಿಂಗ್, ಚಿಂಗಲ್‌ಸೇನಾ ಸಿಂಗ್ ಕಂಜೂಜಮ್, ಸರ್ದಾರ್ ಸಿಂಗ್ ಹಾಗೂ ವಿವೇಕ್ ಸಾಗರ್ ಪ್ರಸಾದ್
ಫಾರ್ವಡ್: ಎಸ್ ವಿ ಸುನಿಲ್, ರಾಮ್‌ದೀಪ್ ಸಿಂಗ್ ಮನದೀಪ್ ಸಿಂಗ್, ಸುಮಿತ್ ಕುಮಾರ್, ಅಕ್ಷದೀಪ್ ಸಿಂಗ್ ಹಾಗೂ ದಿಲ್‌ಪ್ರೀತ್ ಸಿಂಗ್
 

loader