ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ಸೈನಾ 14-12, 11-7 ಎರಡು ನೇರ ಗೇಮ್‌'ಗಳಿಂದ ನಿಟ್ಚೌನ್ ಜಿಂದಪಾಲ್ ಎದುರು ಗೆಲುವು ಸಾಧಿಸಿದರು.
ಲಖನೌ(ಜ.05): ಅವಧ್ ವಾರಿಯರ್ಸ್'ನ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್, ಎರಡನೇ ಆವೃತ್ತಿಯ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಟೂರ್ನಿಯಲ್ಲಿ ದೆಹಲಿ ಏಸರ್ಸ್ ತಂಡದ ನಿಟ್ಚೌನ್ ಜಿಂದಪಾಲ್ ಎದುರು ಗೆಲುವು ಪಡೆದಿದ್ದಾರೆ. ಇದರೊಂದಿಗೆ ಅವಧ್ ತಂಡಕ್ಕೆ 3-0 ಮುನ್ನಡೆ ತಂದುಕೊಟ್ಟರು.
ಇಲ್ಲಿನ ಬ್ಯಾಡ್ಮಿಂಟನ್ ಕೋರ್ಟ್ನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ಸೈನಾ 14-12, 11-7 ಎರಡು ನೇರ ಗೇಮ್'ಗಳಿಂದ ನಿಟ್ಚೌನ್ ಜಿಂದಪಾಲ್ ಎದುರು ಗೆಲುವು ಸಾಧಿಸಿದರು. ಪಂದ್ಯದ ಆರಂಭದಿಂದಲೂ ನಡೆದ ರೋಚಕ ಹೋರಾಟದಲ್ಲಿ ಸೈನಾ, ಎದುರಾಳಿ ಆಟಗಾರ್ತಿ ನಿಟ್ಚೌನ್ ಅವರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾದರು. ಎರಡು ಗೇಮ್'ಗಳ ಪಂದ್ಯದಲ್ಲಿ ಸೈನಾ ಕ್ರಮವಾಗಿ 2 ಮತ್ತು 4 ಪಾಯಿಂಟ್ಸ್ಗಳ ಅಂತರದಲ್ಲಿ ಪಂದ್ಯ ಜಯಿಸಿದರು.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ವಾರಿಯರ್ಸ್ನ ಕೆ. ಶ್ರೀಕಾಂತ್ 11-9, 11-13, 11-9 ಗೇಮ್'ಗಳಿಂದ ದೆಹಲಿಯ ಜಾನ್ ಓ ಜೊರ್ಗೆನ್ಸನ್ ಎದುರು ಜಯ ದಾಖಲಿಸಿದರು. ಇದರೊಂದಿಗೆ ವಾರಿಯರ್ಸ್ ತಂಡದ ಮುನ್ನಡೆಗೆ ಕಾರಣರಾದರು. ಮೊದಲ ಗೇಮ್'ನಲ್ಲಿ ಶ್ರೀಕಾಂತ್, ಎದುರಾಳಿ ಆಟಗಾರನಿಗೆ ಬಿಸಿ ಮುಟ್ಟಿಸಿದರು. ಪ್ರಭಾವಿ ಸ್ಮಾಶ್'ಗಳಿಂದ ಜೊರ್ಗೆನ್ಸನ್ ಅವರನ್ನು ದಂಗಬಡಿಸಿದ ಶ್ರೀಕಾಂತ್, ಮೊದಲ ಗೇಮ್'ನಲ್ಲಿ 2 ಪಾಯಿಂಟ್ಸ್ ಮುನ್ನಡೆ ಪಡೆದರು. ಎರಡನೇ ಗೇಮ್'ನಲ್ಲಿ ಕೊಂಚ ವಿಚಲಿತರಾದಂತೆ ಕಂಡ ಶ್ರೀಕಾಂತ್ಗೆ, ದೆಹಲಿ ತಂಡದ ಆಟಗಾರ ಜೊರ್ಗೆನ್ಸನ್ ತಿರುಗೇಟು ನೀಡುವಲ್ಲಿ ಸಫಲರಾದರು. ನಂತರದ ನಿರ್ಣಾಯಕ ಗೇಮ್ನಲ್ಲಿ ಮತ್ತದೇ 2 ಅಂಕಗಳ ಅಂತರ ಕಾಯ್ದುಕೊಂಡ ಶ್ರೀಕಾಂತ್ ಪಂದ್ಯ ಜಯಿಸಿದರು.
