ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ತಮ್ಮ ಮದುವೆ ದಿನಾಂಕವನ್ನ ಮಾರ್ಮಿಕವಾಗಿ ಬಹಿರಂಗಪಡಿಸಿದ್ದಾರೆ. ಭಾರತದ ಬ್ಯಾಡ್ಮಿಂಟನ್ ತಾರೆ ಪಾರುಪಳ್ಳಿ ಕಶ್ಯಪ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲು ಮುಂದಾಗಿರುವ ಸೈನಾ, ಮದುವೆ ದಿನಾಂಕದ ಕುರಿತು ಹೇಳಿದ್ದೇನು? ಇಲ್ಲಿದೆ.

ನವದೆಹಲಿ(ಅ.09): ಕಳೆದ 10 ವರ್ಷಗಳಿಂದ ಪರುಪಳ್ಳಿ ಕಶ್ಯಪ್ ಪ್ರೇಮ ಪಾಶದಲ್ಲಿ ಬಿದ್ದಿರುವ ಸೈನಾ ನೆಹ್ವಾಲ್ ಈ ವರ್ಷದ ಡಿ. 16 ರಂದು ಮಾತ್ರ ಯಾವುದೇ ಕೆಲಸ ಇಲ್ಲದೆ ಇರುವುದಾಗಿ ಪುಣೆಯಲ್ಲಿ ಹೇಳಿದ್ದಾರೆ. ಈ ಮೂಲಕ ತಮ್ಮ ಮದುವೆ ದಿನಾಂಕ ಅದೇ ದಿನ ಎಂದು ಸೈನಾ ಮಾರ್ಮಿಕವಾಗಿ ಖಚಿತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಮದುವೆಯಾಗುವುದಕ್ಕೆ ಇದು ಅತ್ಯಂತ ಸೂಕ್ತ ಸಮಯವಾಗಿದೆ. ಆದರೆ ಬೇರೆ ದಿನ ನನಗೆ ಬಿಡುವಿಲ್ಲದ ಕೆಲಸ ಕಾರ್ಯಗಳು ಇವೆ. ಡಿ. 20 ರಿಂದ ಪ್ರೀಮಿಯರ್ ಬ್ಯಾಡ್ಮಿಂಟನ್‌ನಲ್ಲಿ ಆಡಲಿದ್ದೇನೆ ಎಂದು ಒಲಿಂಪಿಕ್ಸ್ ಕಂಚು ವಿಜೇತೆ ಸೈನಾ ನೆಹ್ವಾಲ್ ಹೇಳಿದ್ದಾರೆ.

ಸೈನಾ ಹಾಗೂ ಪರುಪಳ್ಳಿ ಕಶ್ಯಪ್ ಇಬ್ಬರೂ ಕೂಡ ಪುಲ್ಲೇಲ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಬೆಳೆದ ಪ್ರತಿಭೆಗಳು. ಹೀಗಾಗಿ ತಮ್ಮ ಅಭ್ಯಾಸದ ದಿನಗಳಿಂದ ಪರಿಚಿತರಾಗಿದ್ದ ಈ ಜೋಡಿ ಇದೀಗ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ.

ಮೂಲಗಳ ಪ್ರಕಾರ ಡಿಸೆಂಬರ್ 16 ರಂದು ಎರಡು ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ಸೈನಾ ಹಾಗೂ ಪರುಪಳ್ಳಿ ಕಶ್ಯಪ್ ವಿವಾಹ ನಡೆಯಲಿದೆ. ಬಳಿಕ ಡಿಸೆಂಬರ್ 21 ರಂದು ಅದ್ಧೂರಿ ಆರತಕ್ಷತೆ ನಡೆಯಲಿದೆ.