ಭಾರತ ತಂಡದ ಮುಂದಾಳತ್ವ ವಹಿಸಿರುವ ರಿಯೋ ಒಲಿಂಪಿಕ್‌'ನ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ನಿರೀಕ್ಷೆಯಂತೆಯೇ ಮೊದಲ ಪಂದ್ಯದಲ್ಲಿ ಜಯಭೇರಿ ಬಾರಿಸಿದರು.
ವುಹಾನ್(ಏ.26): ಪ್ರಸಕ್ತ ಸಾಲಿನ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್'ನಲ್ಲಿ ಭಾರತಕ್ಕೆ ಮಿಶ್ರಫಲ ಸಿಕ್ಕಿದೆ. ಮಹಿಳೆಯ ಸಿಂಗಲ್ಸ್ನಲ್ಲಿ ಪಿ.ವಿ.ಸಿಂಧು ಶುಭಾರಂಭ ಮಾಡಿದ್ದರೆ, ಸೈನಾ ಮೊದಲ ಸುತ್ತಿನಲ್ಲೇ ಮುಗ್ಗರಿಸಿ ನಿರಾಸೆ ಮೂಡಿಸಿದ್ದಾರೆ. ಇನ್ನು ಪುರುಷರ ಸಿಂಗಲ್ಸ್'ನಲ್ಲಿ ಅಜಯ್ ಜಯರಾಮ್ 2ನೇ ಸುತ್ತು ಪ್ರವೇಶಿಸಿಸುವಲ್ಲಿ ಸಫಲರಾಗಿದ್ದಾರೆ.
ಭಾರತ ತಂಡದ ಮುಂದಾಳತ್ವ ವಹಿಸಿರುವ ರಿಯೋ ಒಲಿಂಪಿಕ್'ನ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ನಿರೀಕ್ಷೆಯಂತೆಯೇ ಮೊದಲ ಪಂದ್ಯದಲ್ಲಿ ಜಯಭೇರಿ ಬಾರಿಸಿದರು. ಇಂಡೋನೇಷ್ಯಾದ ದಿನಾರ್ ಡ್ಯಾಹ್ ಆಯುಸ್ಟೈನ್ ವಿರುದ್ಧ ಚುರುಕಿನ ಆಟವಾಡಿದ 21 ವರ್ಷದ ಸಿಂಧು, 21-8, 21- 18 ನೇರ ಸೆಟ್'ಗಳಿಂದ ಎದುರಾಳಿಯನ್ನು ಅನಾಯಾಸವಾಗಿ ಸೋಲಿಸಿ 2ನೇ ಸುತ್ತಿಗೆ ಲಗ್ಗೆಯಿಟ್ಟರು.
ಇನ್ನು ಗಾಯದ ಸಮಸ್ಯೆಯಿಂದ ಇತ್ತೀಚೆಗಷ್ಟೇ ಚೇತರಿಸಿಕೊಂಡಿರುವ ಸೈನಾ ನೆಹ್ವಾಲ್ ಪ್ರಬಲ ಪೈಪೋಟಿ ನೀಡಿದರೂ ಜಪಾನ್'ನ ಸಯಾಕಾ ಸಾಟೋ ವಿರುದ್ಧ 19-21, 21-16, 21-18 ಗೇಮ್'ನಿಂದ ಪರಾಭವಗೊಂಡರು. ಸುಮಾರು 1 ಗಂಟೆಗೂ ಹೆಚ್ಚುಕಾಲ ನಡೆದ ರೋಚಕ ಕಾದಾಟದಲ್ಲಿ 21- 19 ಅಂಕಗಳೊಂದಿಗೆ ಮೊದಲ ಸುತ್ತಿನಲ್ಲಿ ಗೆಲುವಿನ ನಗೆ ಬೀರಿದ್ದ ಸೈನಾ, ಬಳಿಕ ಸಯಾಕಾ ಎದುರು ಕೊಂಚ ಮಂಕಾದಂತೆ ಕಂಡರು. ಬಳಿಕ 16-21 ಹಾಗೂ 18- 21 ಅಂತರದಿಂದ ಸೆಟ್'ಗಳನ್ನು ಪಂದ್ಯವನ್ನು ಜಪಾನ್ ಆಟಗಾರ್ತಿಗೆ ಬಿಟ್ಟುಕೊಡುವ ಮೂಲಕ ಸೋಲೊಪ್ಪಿಕೊಂಡರು.
ಇನ್ನು ಪುರುಷರ ಸಿಂಗಲ್ಸ್ನಲ್ಲಿ ಅಜಯ್ ಜಯರಾಮ್ 21-18, 18-21, 21-19ರಲ್ಲಿ ವಿಶ್ವದ 5ನೇ ಶ್ರೇಯಾಂಕಿತ ಚೀನಾದ ತಿಯಾನ್ ಹೌವಿಯನ್ನು ಮಣಿಸಿ, 2ನೇ ಸುತ್ತಿಗೆ ಲಗ್ಗೆಯಿಟ್ಟರು. ಮಿಶ್ರ ಡಬಲ್ಸ್ನಲ್ಲಿ ಪ್ರಣವ್ ಜೆರ್ರಿ ಚೋಪ್ರಾ ಮತ್ತು ಎನ್. ಸಿಕ್ಕಿ ರೆಡ್ಡಿ 15-21, 21-14, 16-21 ಸೆಟ್'ಗಳಿಂದ ಚೀನಾದ ಅಗ್ರ ಶ್ರೇಯಾಂಕಿತ ಜೋಡಿ ಸಿವೆ ಝೆಂಗ್ ಮತ್ತು ಕ್ವಿಂಗ್ಚೆನ್ ಚೆನ್ ವಿರುದ್ಧ ಸೋಲನುಭವಿಸಿದರು.
