ಸದ್ಯ ಟಾಮ್‌ ಮೂಡಿ, ರಿಚರ್ಡ್‌ ಪೈಬಸ್‌, ವೀರೇಂದ್ರ ಸೆಹ್ವಾಗ್‌, ಲಾಲ್‌'ಚಂದ್‌ ರಜ್‌'ಪೂತ್‌ ಹಾಗೂ ದೊಡ್ಡ ಗಣೇಶ್‌ ಅವರೊಂದಿಗೆ ಶಾಸ್ತ್ರಿ ಕೋಚ್‌ ಸ್ಥಾನಕ್ಕೆ ಸ್ಪರ್ಧಿಯಲ್ಲಿದ್ದಾರೆ.

ಮುಂಬೈ(ಜೂ.29): ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಲು ಆಸಕ್ತಿ ತೋರಿರುವ ರವಿಶಾಸ್ತ್ರಿಗೆ ಅರ್ಜಿಸಲ್ಲಿಸುವಂತೆ ಮನವೊಲಿಸಿದ್ದು, ಮಾಜಿ ಕ್ರಿಕೆಟಿಗ ಹಾಗೂ ಬಿಸಿಸಿಐ ಸಲಹಾ ಸಮಿತಿ ಸದಸ್ಯ ಸಚಿನ್ ತೆಂಡೂಲ್ಕರ್ ಎನ್ನುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಅನಿಲ್‌ ಕುಂಬ್ಳೆ ರಾಜೀನಾಮೆಯಿಂದ ತೆರವುಗೊಂಡಿರುವ ಕೋಚ್‌ ಸ್ಥಾನವನ್ನು ತುಂಬಲು ಶಾಸ್ತ್ರಿಯೇ ಸರಿಯಾದ ವ್ಯಕ್ತಿ ಎಂದು ನಂಬಿರುವ ಸಚಿನ್‌, ಇತ್ತೀಚೆಗೆ ರಜೆ ಮೇಲೆ ಲಂಡನ್‌'ನಲ್ಲಿರುವ ರವಿಶಾಸ್ತ್ರಿ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಾಸ್ತ್ರಿ ಹಾಗೂ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ನಡುವೆ ಉತ್ತಮ ಬಾಂಧವ್ಯವಿದ್ದು, ಇಬ್ಬರು ಒಬ್ಬರಿಗೊಬ್ಬರು ಹೊಂದಿಕೊಂಡು ಹೋಗಲಿದ್ದಾರೆ ಎನ್ನುವುದನ್ನು ಮನಗಂಡಿರುವ ಸಚಿನ್‌, ಕೋಚ್‌ ಹುಡುಕಾಟದಲ್ಲಿ ಹೆಚ್ಚಿಗೆ ಸಮಯ ವ್ಯರ್ಥ ಮಾಡುವುದು ಬೇಡ ಎಂದು ನಿರ್ಧರಿಸಿದ್ದಾರೆ ಎನ್ನಲಾಗಿದೆ. 2016ರಲ್ಲೂ ರವಿಶಾಸ್ತ್ರಿ ಕೋಚ್‌ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು, ಈ ವೇಳೆ ಶಾಸ್ತ್ರಿ ನೇಮಕಕ್ಕೆ ಸಚಿನ್‌ ಇಚ್ಛಿಸಿದ್ದರು. ಆದರೆ ಸೌರವ್‌ ಗಂಗೂಲಿ, ಅನಿಲ್‌ ಕುಂಬ್ಳೆ ಅವರನ್ನು ಕೋಚ್‌ ಮಾಡಬೇಕು ಎಂದು ಅಭಿಪ್ರಾಯಪಟ್ಟಾಗ ಕೊನೆಗೆ ವಿವಿಎಸ್‌ ಲಕ್ಷ್ಮಣ್‌ ಯಾರ ಪರ ಒಲವು ತೋರುತ್ತಾರೋ ಅವರನ್ನು ನೇಮಿಸುವುದಾಗಿ ಬಿಸಿಸಿಐ ತಿಳಿಸಿತ್ತು. ಲಕ್ಷ್ಮಣ್‌, ಗಂಗೂಲಿಯನ್ನು ಬೆಂಬಲಿಸಿದ ಕಾರಣ ಶಾಸ್ತ್ರಿ ಬದಲಿಗೆ ಕುಂಬ್ಳೆ ಕೋಚ್‌ ಸ್ಥಾನ ಅಲಂಕರಿಸಿದ್ದರು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಸದ್ಯ ಟಾಮ್‌ ಮೂಡಿ, ರಿಚರ್ಡ್‌ ಪೈಬಸ್‌, ವೀರೇಂದ್ರ ಸೆಹ್ವಾಗ್‌, ಲಾಲ್‌'ಚಂದ್‌ ರಜ್‌'ಪೂತ್‌ ಹಾಗೂ ದೊಡ್ಡ ಗಣೇಶ್‌ ಅವರೊಂದಿಗೆ ಶಾಸ್ತ್ರಿ ಕೋಚ್‌ ಸ್ಥಾನಕ್ಕೆ ಸ್ಪರ್ಧಿಯಲ್ಲಿದ್ದಾರೆ.