ನಾಡಾ ಡೋಪಿಂಗ್ ಟೆಸ್ಟ್‌ ಪತ್ತೆ ಅವ್ಯವಸ್ಥೆ ಮತ್ತೆ ಬಯಲು..!

ಡೋಪಿಂಗ್‌ ಪ್ರಕರಣ ಪತ್ತೆಯಲ್ಲಿ ವೈಫಲ್ಯ ವಿಶ್ವ ಉದ್ದೀಪನ ನಿಗ್ರಹ ಘಟಕದಿಂದ ವರದಿ
ಕ್ರಿಕೆಟಿಗರ ಡೋಪ್ ಪರೀಕ್ಷೆಯಲ್ಲೂ ನಾಡಾ ವಿಫಲ
ಮಾಹಿತಿ ಹಕ್ಕು ಕಾಯ್ದೆ ಅಡಿ ಪಡೆದ ಅಂಕಿ ಅಂಶಗಳು ಬಹಿರಂಗ

RTI reveals inadequate dope test by NADA on cricketers kvn

ನವದೆಹಲಿ(ಜು.20): ಭಾರತದ ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ನಿಗ್ರಹ ಘಟಕ(ನಾಡಾ)ದ ಕಾರ್ಯವೈಖರಿಯಲ್ಲಿನ ಹಲವು ಲೋಪಗಳನ್ನು ವಿಶ್ವ ಉದ್ದೀಪನ ನಿಗ್ರಹ ಘಟಕ(ವಾಡಾ) ಬಯಲುಗೊಳಿಸಿದೆ. ಈ ಬಗ್ಗೆ ವಾಡಾದ ಸ್ವತಂತ್ರ ಗುಪ್ತಚರ ಮತ್ತು ತನಿಖಾ ಇಲಾಖೆ ಮಂಗಳವಾರ ವರದಿ ಸಲ್ಲಿಸಿದ್ದು, ನಾಡಾ ಪಾರದರ್ಶಕ ತನಿಖೆ ನಡೆಸಲು ವಿಫಲವಾಗಿದೆ ಎಂದಿದೆ.

ಇಲಾಖೆ ವರದಿಯ ಪ್ರಕಾರ, ನಾಡಾ 70 ಅಥ್ಲೀಟ್‌ಗಳಿಗೆ ಸಂಬಂಧಿಸಿದ 12 ಡೋಪಿಂಗ್ ಪ್ರಕರಣ ಹಾಗೂ 97 ಬಾರಿ ಅಥ್ಲೀಟ್‌ಗಳ ಸಂಚಾರ ಪತ್ತೆ ಮಾಡುವಲ್ಲಿ ವಿಫಲವಾಗಿದೆ ಎಂದು ಉಲ್ಲೇಖಿಸಿದೆ. ಅಲ್ಲದೇ ಕಳೆದ ವರ್ಷದ ಕಾಮನ್‌ವೆಲ್ತ್‌ ಗೇಮ್ಸ್‌ಗೂ ಮುನ್ನ 13 ಪ್ರಮುಖ ಅಥ್ಲೀಟ್‌ಗಳ ಮೇಲ್ವಿಚಾರಣೆ ನಡೆಸಿದ್ದ ವಾಡಾ, ಓರ್ವ ಅಥ್ಲೀಟ್‌ ಉದ್ದೀಪನ ಮದ್ದು ಸೇವಿಸಿದ್ದು ಪತ್ತೆ ಹಚ್ಚಿತ್ತು. 2016ರಿಂದಲೂ ಡೋಪಿಂಗ್‌ ತಡೆಗೆ ನಾಡಾ ಜೊತೆ ವಾಡಾ ಕೈ ಜೋಡಿಸಿದ್ದು, 2019ರಿಂದ ‘ಆಪರೇಶನ್‌ ಕರೋಸೆಲ್‌’ ಹೆಸರಿನಲ್ಲಿ ನಾಡಾ ಮೇಲೆ ಹದ್ದಿನ ಕಣ್ಣಿಟ್ಟಿತ್ತು. ಅಲ್ಲದೇ, 2019ರಲ್ಲಿ ಪಾರದರ್ಶಕ ತನಿಖೆ ನಡೆಸಲು ವಿಫಲವಾದ ಕಾರಣಕ್ಕೆ ನಾಡಾವನ್ನು ವಾಡಾ 6 ತಿಂಗಳ ಕಾಲ ಅಮಾನತುಗೊಳಿಸಿತ್ತು.

Ind vs WI: ಭಾರತಕ್ಕೆ ಸತತ 9ನೇ ಸರಣಿ ಜಯದ ಗುರಿ..!

ಕ್ರಿಕೆಟಿಗರ ಪರೀಕ್ಷೆಯಲ್ಲೂ ನಾಡಾ ವೈಫಲ್ಯ: ವರದಿ

ಇದೇ ವೇಳೆ ನಾಡಾ ಭಾರತೀಯ ಕ್ರಿಕೆಟಿಗರನ್ನು ಪರೀಕ್ಷಿಸುವಲ್ಲಿಯೂ ವಿಫಲವಾಗಿದೆ ಎಂದು ಪ್ರಮುಖ ಮಾಧ್ಯಮ ಸಂಸ್ಥೆಯೊಂದು ಮಾಹಿತಿ ಹಕ್ಕು ಕಾಯ್ದೆ ಅಡಿ ಪಡೆದ ಅಂಕಿ ಅಂಶಗಳನ್ನು ಬಹಿರಂಗಗೊಳಿಸಿದೆ. ಇದರ ಮಾಹಿತಿ ಪ್ರಕಾರ 2021-22ರಲ್ಲಿ ನಾಡಾ 5961 ಡೋಪಿಂಗ್‌ ಪರೀಕ್ಷೆ ನಡೆಸಿದ್ದು, ಈ ಪೈಕಿ ಕ್ರಿಕೆಟಿಗರ ಮೇಲೆ ಕೇವಲ 114 ಬಾರಿ ಮಾತ್ರ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ಭಾರತದ ನಾಯಕ ರೋಹಿತ್‌ ಶರ್ಮಾ 6 ಬಾರಿ ಪರೀಕ್ಷೆಗೆ ಒಳಗಾಗಿದ್ದು, ರಿಷಭ್‌ ಪಂತ್‌, ಸೂರ್ಯಕುಮಾರ್‌, ಪೂಜಾರ ಸೇರಿದಂತೆ ಹಲವರನ್ನು 1 ಬಾರಿ ಮಾತ್ರ ಪರೀಕ್ಷೆ ಮಾಡಲಾಗಿದೆ. ವಿರಾಟ್‌ ಕೊಹ್ಲಿ, ಹಾರ್ದಿಕ್‌, ಶಮಿ, ಶ್ರೇಯಸ್‌ ಅಯ್ಯರ್‌ ಸೇರಿದಂತೆ 12 ಮಂದಿಯನ್ನು ಒಮ್ಮೆಯೂ ಪರೀಕ್ಷೆಗೆ ಒಳಪಡಿಸಿಲ್ಲ ಎಂದು ತಿಳಿಸಿದೆ. ಆದರೆ ಮಹಿಳಾ ತಂಡದ ಎಲ್ಲರನ್ನೂ ಪರೀಕ್ಷೆ ನಡೆಸಿದೆ ಎಂದು ಉಲ್ಲೇಖಿಸಿದೆ.

ವಿನೇಶ್‌ ಫೋಗಟ್‌, ಭಜರಂಗ್ ಪೂನಿಯಾ ನೇರ ಆಯ್ಕೆ ಪ್ರಶ್ನಿಸಿ ರೆಸ್ಲರ್ಸ್‌ ಕೋರ್ಟ್‌ ಮೊರೆ..!

2026ರ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಅಹಮದಾಬಾದ್‌ ಬಿಡ್‌ ಸಲ್ಲಿಸಲ್ಲ: ಗುಜರಾತ್‌

ಅಹಮದಾಬಾದ್‌: ಖರ್ಚು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 2026ರ ಕಾಮನ್‌ವೆಲ್ತ್‌ ಗೇಮ್ಸ್‌ ಆತಿಥ್ಯದಿಂದ ಆಸ್ಟ್ರೇಲಿಯಾ ಹಿಂದೆ ಸರಿದ ಬೆನ್ನಲ್ಲೇ, ಗುಜರಾತ್‌ನ ಅಹಮದಾಬಾದ್‌ ಕ್ರೀಡಾಕೂಟದ ಆತಿಥ್ಯ ಹಕ್ಕಿಗೆ ಬಿಡ್‌ ಸಲ್ಲಿಸುವ ಸಾಧ್ಯತೆ ಇದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಇದನ್ನು ಬುಧವಾರ ಗುಜರಾತ್‌ ಸರ್ಕಾರ ಅಲ್ಲಗಳೆದಿದ್ದು, ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯದ ಯಾವುದೇ ಚಿಂತನೆ ಇಲ್ಲ ಎಂದಿದೆ. ಅಲ್ಲದೇ, 2026ರ ಒಲಿಂಪಿಕ್ಸ್ ಆತಿಥ್ಯ ಹಕ್ಕು ಪಡೆಯುವುದು ನಮ್ಮ ಮುಂದಿರುವ ಗುರಿ ಎಂದು ಸ್ಪಷ್ಟಪಡಿಸಿದೆ. ಒಲಿಂಪಿಕ್ಸ್‌ ಆತಿಥ್ಯಕ್ಕೂ ಮುನ್ನ ಕಾಮನ್‌ವೆಲ್ತ್ ಗೇಮ್ಸ್ ಆಯೋಜಿಸಿ ರಿಹರ್ಸಲ್ ನಡೆಸಲು ಗುಜರಾತ್‌ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ಸುದ್ದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಗುಜರಾತ್‌ ಸರ್ಕಾರ ಸ್ಪಷ್ಟನೆ ನೀಡಿದೆ.

ಕೊರಿಯಾ ಓಪನ್‌: ಸಿಂಧು, ಶ್ರೀಕಾಂತ್‌ಗೆ ಸೋಲಿನ ಶಾಕ್‌

ಸೋಲ್‌(ಕೊರಿಯಾ): ಈ ವರ್ಷದ ಮೊದಲ ಪ್ರಶಸ್ತಿ ಗೆಲ್ಲುವ ಭಾರತದ ಅಗ್ರ ಶಟ್ಲರ್‌ಗಳಾದ ಪಿ.ವಿ. ಸಿಂಧು, ಕಿದಂಬಿ ಶ್ರೀಕಾಂತ್‌ರ ಕನಸು ಮತ್ತೊಮ್ಮೆ ಭಗ್ನಗೊಂಡಿದ್ದು, ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಮೊದಲ ಸುತ್ತಲ್ಲೇ ಹೊರಬಿದ್ದಿದ್ದಾರೆ. ಸಿಂಧು, ಚೈನೀಸ್‌ ತೈಪೆಯ ಪೈ ಯುಪೊ ವಿರುದ್ಧ 18-21, 21-10, 13-21ರಲ್ಲಿ ಸೋತರೆ, ಶ್ರೀಕಾಂತ್‌ ಜಪಾನ್‌ನ ಕೆಂಟೊ ಮೊಮೊಟಾ ವಿರುದ್ಧ 21-12, 22-24, 17-21ರಲ್ಲಿ ಪರಾಭವಗೊಂಡರು. ಇದು ಶ್ರೀಕಾಂತ್‌ಗೆ 2 ಬಾರಿ ವಿಶ್ವ ಚಾಂಪಿಯನ್‌ ಮೊಮೊಟಾ ವಿರುದ್ಧ ಸತತ 12ನೇ ಸೋಲು. ಇದೇ ವೇಳೆ ಎಚ್‌.ಎಸ್‌.ಪ್ರಣಯ್‌, ಪ್ರಿಯಾನ್ಶು ರಾಜಾವತ್‌ 2ನೇ ಸುತ್ತು ಪ್ರವೇಶಿಸಿದರು.
 

Latest Videos
Follow Us:
Download App:
  • android
  • ios