ಸನ್'ರೈಸರ್ಸ್'ಗೆ ಸುಲಭ ಗುರಿ ನೀಡಿದ ರಾಜಸ್ಥಾನ

First Published 9, Apr 2018, 9:58 PM IST
RR set 126 run target for SRH
Highlights

ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ದಿಟ್ಟ ಬ್ಯಾಟಿಂಗ್ ನಡೆಸಿದ ಸಂಜು ಸ್ಯಾಮ್ಸನ್(49)ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೆಳಕ್ರಮಾಂಕದಲ್ಲಿ ಶ್ರೇಯಸ್ ಗೋಪಾಲ್ 18 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 100ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ಹೈದರಾಬಾದ್(ಏ.09): ಸನ್'ರೈಸರ್ಸ್ ಹೈದಾರಾಬಾದ್ ತಂಡದ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ ರಾಯಲ್ಸ್ ಕೇವಲ 125 ರನ್'ಗಳ ಸಾಧಾರಣ ರನ್ ಪೇರಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ ರಾಯಲ್ಸ್ ಆರಂಭದಲ್ಲೇ ಮುಗ್ಗರಿಸಿತು. ಮೊದಲ ಓವರ್'ನ ಕೊನೆಯ ಎಸೆತದಲ್ಲಿ ಡೋರ್ಸಿ ಶಾರ್ಟ್ ರನೌಟ್'ಗೆ ಬಲಿಯಾದರು. ಎರಡನೇ ವಿಕೆಟ್'ಗೆ ಸಂಜು ಸ್ಯಾಮ್ಸನ್ ಹಾಗೂ ರಹಾನೆ 46 ರನ್'ಗಳ ಜತೆಯಾಟವಾಡಿ ತಂಡಕ್ಕೆ ಆಸರೆಯಾಯಿತು. ತಂಡದ ಮೊತ್ತ 52 ರನ್'ಗಳಾಗಿದ್ದಾಗ ರಹಾನೆ 13 ರನ್ ಬಾರಿಸಿ ಪೆವಿಲಿಯನ್ ಸೇರಿದರು. ರಹಾನೆ ವಿಕೆಟ್ ಬೀಳುತ್ತಿದ್ದಂತೆ ನಾಟಕೀಯ ಕುಸಿತ ಕಂಡ ರಾಜಸ್ಥಾನ 96 ರನ್'ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಭಾರೀ ಮೊತ್ತಕ್ಕೆ ಹರಾಜಾಗಿದ್ದ ಬೆನ್ ಸ್ಟೋಕ್ಸ್ ಕೇವಲ 5 ರನ್ ಗಳಿಸಿದರೆ ಕನ್ನಡಿಗ ಕೆ. ಗೌತಮ್ ಶೂನ್ಯ ಸುತ್ತಿದರು. ಬಟ್ಲರ್ ಆಟ 6 ರನ್'ಗಳಿಗೆ ಸೀಮಿತವಾಯಿತು.

ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ದಿಟ್ಟ ಬ್ಯಾಟಿಂಗ್ ನಡೆಸಿದ ಸಂಜು ಸ್ಯಾಮ್ಸನ್(49)ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೆಳಕ್ರಮಾಂಕದಲ್ಲಿ ಶ್ರೇಯಸ್ ಗೋಪಾಲ್ 18 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 100ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ಸಂಘಟಿತ ಬೌಲಿಂಗ್ ನಡೆಸಿದ ಶಕೀಬ್ ಅಲ್ ಹಸನ್ ಹಾಗೂ ಸಿದ್ದಾರ್ಥ್ ಕೌಲ್ ತಲಾ 2 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್, ಬಿಲ್ಲಿ ಸ್ಟ್ಯಾನ್'ಲೇಕ್ ಹಾಗೂ ರಶೀದ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.  

loader