ದುಬೈ(ಸೆ.24): ನಿನ್ನೆದುಬೈನಲ್ಲಿ ನಡೆದ ಏಷ್ಯಾ ಕಪ್ 2018 ಟೂರ್ನಿಯ ಸೂಪರ್ 4 ಹಂತದ ಪಂದ್ಯದಲ್ಲಿ, ಪಾಕಿಸ್ತಾನದ ವಿರುದ್ಧ ಭಾರತ ತಂಡ 9 ವಿಕೆಟ್ ಗಳ ಅಂತರದ ಭರ್ಜರಿ ಜಯ ದಾಖಲಿಸಿದೆ. ಕ್ರಿಕೆಟ್ ಇತಿಹಾಸದಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಸಿಕ್ಕ ದೊಡ್ಡ ಗೆಲುವು ಇದಾಗಿದೆ.

ನಿನ್ನೆಯ ಪಂದ್ಯ ಭಾರತಕ್ಕೆ ಪಾಕ್ ವಿರುದ್ಧ ಸಿಕ್ಕ ಅತ್ಯಂತ ದೊಡ್ಡ ಗೆಲುವು ಎನ್ನಲು ಮತ್ತೊಂದು ಕಾರಣ ಎಂದರೆ ಭಾರತ 9 ವಿಕೆಟ್ ಗಳಿಂದ ಮಾತ್ರವಲ್ಲದೇ ಇನ್ನೂ 63 ಎಸೆತಗಳು ಬಾಕಿ ಇರುವಂತೆ ಜಯ ತನ್ನದಾಗಿಸಿಕೊಂಡಿತ್ತು.

ಈ ಮಧ್ಯೆ ಭಾರತದ ಆಟಗಾರರು ವೈಯಕ್ತಿಕ ದಾಖಲೆಗಳನ್ನು ಕೂಡ ಬರೆದಿದ್ದು, ಪ್ರಮುಖವಾಗಿ ನಾಯಕ ರೋಹಿತ್ ಶರ್ಮಾ ಇದೊಂದೆ ಪಂದ್ಯದಲ್ಲಿ ಹಲವು ದಾಖಲೆ ಬರೆದಿದ್ದಾರೆ. ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶತಕ ಬಾರಿಸಿದ ಮೊದಲನೇ ಭಾರತೀಯ ನಾಯಕ ಎಂಬ ಕೀರ್ತಿಗೆ ರೋಹಿತ್ ಭಾಜನರಾಗಿದ್ದಾರೆ.

ಅಲ್ಲದೇ ಪಾಕ್ ವಿರುದ್ಧ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶತಕ ಸಿಡಿಸಿದ ಏಕೈಕ ನಾಯಕ ಎಂಬ ಕೀರ್ತಿಯೂ ರೋಹಿತ್ ಪಾಲಿಗೆ ಸೇರಿದೆ. ಈ ಹಿಂದೆ ದಕ್ಷಿಣ ಆಫ್ರಿಕಾದ ಸ್ಮಿತ್ ಪಾಕ್ ವಿರದ್ದ ಇದೇ ಕ್ರೀಡಾಂಗಣದಲ್ಲಿ 92 ರನ್ ಗಳಿಸಿದ್ದರು.

ಇಷ್ಟೇ ಅಲ್ಲದೇ ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ನಾಯಕನಾಗಿ ಶತಕ ಸಿಡಿಸಿದ ಮೂರನೇ ಮತ್ತು ಪಾಕ್ ವಿರುದ್ಧ ಅತ್ಯಧಿಕ ರನ್ ಸಿಡಿಸಿದ ಎರಡನೇ ನಾಯಕನಾಗಿಯೂ ರೋಹಿತ್ ಶರ್ಮಾ ದಾಖಲೆ ಮಾಡಿದ್ದಾರೆ. ಈ ಹಿಂದೆ ಎಂ.ಎಸ್. ಧೋನಿ ನಾಯಕನಾಗಿ ಪಾಕ್ ವಿರುದ್ಧ 113 ರನ್ ಗಳಿಸಿದ್ದರು. 

ಸದ್ಯ ರೋಹಿತ್ ವಿಕೆಟ್ ಒಪ್ಪಿಸದೆ 111 ರನ್ ಗಳಿಸಿದ್ದಾರೆ. ಈ ಹಿಂದೆ ಮಾಜಿ ಕ್ಯಾಪ್ಟನ್ ಮೊಹ್ಮದ್ ಅಜರುದ್ದೀನ್ ಪಾಕ್ ವಿರುದ್ಧ 1998 ರಲ್ಲಿ ಎರಡು ಬಾರಿ ಶತಕ ಸಿಡಿಸಿದ್ದರು. ಅದರಂತೆ ಸಚಿನ್ ತೆಂಡೂಲ್ಕರ್ ನಾಯಕನಾಗಿ ಪಾಕ್ ವಿರುದ್ಧ 93 ರನ್ ಗಳಿಸಿದ್ದರು.