ಜೈಪುರ[ಮೇ.09]: ಮಿಥಾಲಿ ರಾಜ್ ನೇತೃತ್ವದ ವೆಲಾಸಿಟಿ ತಂಡವು ಹರ್ಮನ್’ಪ್ರೀತ್ ಕೌರ್ ನೇತೃತ್ವದ ಸೂಪರ್’ನೋವಾ ತಂಡದೆದುರು 12 ರನ್’ಗಳ ಸೋಲು ಅನುಭವಿಸಿದೆ. 
ಇದೀಗ ಈ ಎರಡು ತಂಡಗಳೇ ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ.

ಮೊದಲು ಬ್ಯಾಟ್ ಮಾಡಿದ್ದ ಸೂಪರ್’ನೋವಾ 3 ವಿಕೆಟ್ ಕಳೆದುಕೊಂಡು 142 ರನ್ ಬಾರಿಸಿತ್ತು. ಸವಾಲಿನ ಗುರಿ ಬೆನ್ನತ್ತಿದ ಮಿಥಾಲಿ ಪಡೆ 21 ರನ್’ಗಳನ್ನು ಬಾರಿಸುವಷ್ಟರಲ್ಲಿ ಆರಂಭಿಕ ಆಟಗಾರ್ತಿಯರಿಬ್ಬರು ಪೆವಿಲಿಯನ್ ಸೇರಿದ್ದರು. ಆ ಬಳಿಕ ಡೇನಿಯಲ್ ವ್ಯಾಟ್[43] ಅಬ್ಬರದ ಬ್ಯಾಟಿಂಗ್ ನಡೆಸಿದರಾದರೂ ಪೂನಂ ಯಾದವ್ ಬೌಲಿಂಗ್’ನಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಕೊನೆಯಲ್ಲಿ ನಾಯಕಿ ಮಿಥಾಲಿ ರಾಜ್[40] ಹಾಗೂ ಕನ್ನಡತಿ ವೇಧಾ ಕೃಷ್ಣಮೂರ್ತಿ[30] ಉತ್ತಮ ಜತೆಯಾಟವಾಡಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು. 

ಸೂಪರ್’ನೋವಾ ಪರ ರಾಧಾ ಯಾದವ್, ಪೂನಂ ಯಾದವ್ ಹಾಗೂ ಅನುಜಾ ಪಾಟೀಲ್ ತಲಾ ಒಂದೊಂದು ವಿಕೆಟ್ ಪಡೆದರು. ಇನ್ನು ಸೂಪರ್’ನೋವಾ ಪರ ಅಜೇಯ 77 ರನ್ ಬಾರಿಸಿದ್ದ ರೋಡ್ರಿಗರ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.