ವೈಯುಕ್ತಿಕ ಕಾರಣಗಳಿಂದ ಕಳೆದ ಆವೃತ್ತಿಯಲ್ಲಿ ರಾಬಿನ್ ಉತ್ತಪ್ಪ ಪಾಲ್ಗೊಂಡಿರಲಿಲ್ಲ. ಕರ್ನಾಟಕ ರಾಜ್ಯ ರಣಜಿ ತಂಡವನ್ನು ತೊರೆದು ಸೌರಾಷ್ಟ್ರ ತಂಡವನ್ನು ಸೇರಿಕೊಂಡಿರುವ ರಾಬಿನ್ ಉತ್ತಪ್ಪ ಅವರಿಗೆ ಕೆಪಿಎಲ್ ಆಡಲು ಕೆಎಸ್’ಸಿಎ ಅವಕಾಶ ನೀಡಿದೆ.
ಬೆಂಗಳೂರು[ಜು.20]: ಏಳನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್’ನಲ್ಲಿ ಖ್ಯಾತ ಕ್ರಿಕೆಟಿಗ ರಾಬಿನ್ ಉತ್ತಪ್ಪ ಪಾಲ್ಗೊಳ್ಳುವುದು ಖಚಿತವಾಗಿದೆ. ಕರುಣ್ ನಾಯರ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದಾರೆ. ಅವರ ಬದಲು ರಾಬಿನ್ ಉತ್ತಪ್ಪ ಕೆಪಿಎಲ್ ಆಡುವುದು ಬಹುತೇಕ ಸ್ಪಷ್ಟವಾಗಿದೆ.
ವೈಯುಕ್ತಿಕ ಕಾರಣಗಳಿಂದ ಕಳೆದ ಆವೃತ್ತಿಯಲ್ಲಿ ರಾಬಿನ್ ಉತ್ತಪ್ಪ ಪಾಲ್ಗೊಂಡಿರಲಿಲ್ಲ. ಕರ್ನಾಟಕ ರಾಜ್ಯ ರಣಜಿ ತಂಡವನ್ನು ತೊರೆದು ಸೌರಾಷ್ಟ್ರ ತಂಡವನ್ನು ಸೇರಿಕೊಂಡಿರುವ ರಾಬಿನ್ ಉತ್ತಪ್ಪ ಅವರಿಗೆ ಕೆಪಿಎಲ್ ಆಡಲು ಕೆಎಸ್’ಸಿಎ ಅವಕಾಶ ನೀಡಿದೆ. ಕೆಕೆಆರ್ ತಂಡದ ಸ್ಟಾರ್ ಬ್ಯಾಟ್ಸ್’ಮನ್ ಆಗಿರುವ ಉತ್ತಪ್ಪ 2015ರ ಆವೃತ್ತಿಯ ಕೆಪಿಎಲ್’ನಲ್ಲಿ ಬಿಜಾಪುರ ಬುಲ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಸುಮಾರು ಒಂದೂವರೆ ವರ್ಷಗಳ ಬಳಿಕ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದ ಕರುಣ್ ನಾಯರ್ ಆಪ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಸ್ಥಾನ ಪಡೆದಿದ್ದರು. ಆದರೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದೀಗ ಇಂಗ್ಲೆಂಡ್ ವಿರುದ್ಧದ ಮೊದಲ ಮೂರು ಪಂದ್ಯಗಳ ಸರಣಿಗೆ ತಂಡದಲ್ಲಿ ಅವಕಾಶಗಿಟ್ಟಿಸಿಕೊಂಡಿರುವ ಕರುಣ್ ಉತ್ತಮ ಪ್ರದರ್ಶನ ತೋರುವ ಉತ್ಸಾಹದಲ್ಲಿದ್ದಾರೆ.
ಇನ್ನು ಏಳನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯು ಆಗಸ್ಟ್ 15ರಿಂದ ಆರಂಭವಾಗಲಿದ್ದು, ಬೆಂಗಳೂರು, ಹುಬ್ಬಳ್ಳಿ ಹಾಗೂ ಮೈಸೂರಿನಲ್ಲಿ ಪಂದ್ಯಗಳು ಜರುಗಲಿವೆ.
