ಬೆಂಗಳೂರು[ಜ.27]: ಶ್ರೇಯಸ್‌ ಗೋಪಾಲ್‌ ಹಾಗೂ ಅಭಿಮನ್ಯು ಮಿಥುನ್‌ ಹೋರಾಟದ ಫಲವಾಗಿ, 2018-19ರ ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಕರ್ನಾಟಕ, ಸೌರಾಷ್ಟ್ರ ಮೇಲೆ ಪ್ರಾಬಲ್ಯ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಸೌರಾಷ್ಟ್ರವನ್ನು 236 ರನ್‌ಗೆ ಆಲೌಟ್‌ ಮಾಡಿದ ರಾಜ್ಯ ತಂಡ, 39 ರನ್‌ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿ 3ನೇ ದಿನದ ಅಂತ್ಯಕ್ಕೆ 8 ವಿಕೆಟ್‌ ನಷ್ಟಕ್ಕೆ 237 ರನ್‌ ಗಳಿಸಿದೆ. ಇದರೊಂದಿಗೆ ತಂಡದ ಒಟ್ಟು ಮುನ್ನಡೆ 276 ರನ್‌ಗೇರಿದ್ದು, ಸೌರಾಷ್ಟ್ರಕ್ಕೆ ಬೃಹತ್‌ ಗುರಿ ನೀಡುವ ವಿಶ್ವಾಸದಲ್ಲಿದೆ.

ಮುರಿಯದ 9ನೇ ವಿಕೆಟ್‌ಗೆ ಶ್ರೇಯಸ್‌ ಹಾಗೂ ಮಿಥುನ್‌ 61 ರನ್‌ ಜೊತೆಯಾಟವಾಡಿದ್ದು, ಸೌರಾಷ್ಟ್ರಕ್ಕೆ ತಲೆಬಿಸಿ ಹೆಚ್ಚಿಸಿದ್ದಾರೆ. ಪಂದ್ಯದಲ್ಲಿ ಇನ್ನೂ 2 ದಿನ ಬಾಕಿ ಇದ್ದು, ಚೇತೇಶ್ವರ್‌ ಪೂಜಾರ ಉಪಸ್ಥಿತಿ ಕರ್ನಾಟಕವನ್ನು ದೊಡ್ಡ ಮೊತ್ತದತ್ತ ಕಣ್ಣಿಡುವಂತೆ ಮಾಡಿದೆ. ಕ್ವಾರ್ಟರ್‌ ಫೈನಲ್‌ನಲ್ಲಿ ಸೌರಾಷ್ಟ್ರ ದಾಖಲೆಯ 372 ರನ್‌ ಗುರಿ ಬೆನ್ನತ್ತಿ ಗೆದ್ದಿದ್ದು ಕರ್ನಾಟಕದ ಆತಂಕ ಹೆಚ್ಚಿಸಿದ್ದು, 4ನೇ ದಿನವಾದ ಭಾನುವಾರ ಕನಿಷ್ಠ 50ರಿಂದ 60 ರನ್‌ ದಾಖಲಿಸುವ ಲೆಕ್ಕಾಚಾರದಲ್ಲಿದೆ.

2ನೇ ದಿನದಂತ್ಯಕ್ಕೆ 7 ವಿಕೆಟ್‌ ನಷ್ಟಕ್ಕೆ 227 ರನ್‌ ಗಳಿಸಿದ್ದ ಸೌರಾಷ್ಟ್ರ, 3ನೇ ದಿನವಾದ ಶನಿವಾರ ಆ ಮೊತ್ತಕ್ಕೆ ಕೇವಲ 9 ರನ್‌ ಸೇರಿಸಲಷ್ಟೇ ಶಕ್ತವಾಯಿತು. ಧರ್ಮೇಂದ್ರ ಜಡೇಜಾ (3) ಹಾಗೂ ಜಯ್‌ದೇವ್‌ ಉನಾದ್ಕತ್‌ (0)ಗೆ ಮಿಥುನ್‌ ಪೆವಿಲಿಯನ್‌ ದಾರಿ ತೋರಿಸಿದರೆ, ಅರ್ಪಿತ್‌ ವಾಸವಾದ (30) ರೋನಿತ್‌ ಮೋರೆಗೆ ಬಲಿಯಾದರು. 60 ರನ್‌ಗೆ 6 ವಿಕೆಟ್‌ ಕಿತ್ತ ರೋನಿತ್‌, ತಮ್ಮ ವೃತ್ತಿಬದುಕಿನ ಶ್ರೇಷ್ಠ ಸಾಧನೆಗೈದರು.

ಆರಂಭಿಕ ಆಘಾತ: 2ನೇ ಇನ್ನಿಂಗ್ಸ್‌ ಬ್ಯಾಟಿಂಗ್‌ಗಿಳಿದ ಕರ್ನಾಟಕ 3ನೇ ಓವರ್‌ನಲ್ಲೇ ಆರ್‌.ಸಮರ್ಥ್[5) ವಿಕೆಟ್‌ ಕಳೆದುಕೊಂಡಿತು. ಕೆ.ವಿ.ಸಿದ್ಧಾರ್ಥ್  (8) ಹಾಗೂ ಕರುಣ್‌ ನಾಯರ್‌ (15) ವಿಕೆಟ್‌ ಕಿತ್ತ ಪ್ರೇರಕ್‌ ಮಂಕಡ್‌, ಕರ್ನಾಟಕವನ್ನು ಸಂಕಷ್ಟಕ್ಕೆ ದೂಡಿದರು. 52 ರನ್‌ಗೆ 3 ವಿಕೆಟ್‌ ಕಳೆದುಕೊಂಡಿದ್ದ ಕರ್ನಾಟಕಕ್ಕೆ ನಾಯಕ ಮನೀಶ್‌ ಪಾಂಡೆ (26) ಹಾಗೂ ಮಯಾಂಕ್‌ ಅಗರ್‌ವಾಲ್‌(46) ಆಸರೆಯಾದರು. ಆದರೂ ಕರ್ನಾಟಕ 176 ರನ್‌ ಗಳಿಸುವಷ್ಟರಲ್ಲಿ 8 ವಿಕೆಟ್‌ ಕಳೆದುಕೊಂಡಿತು.

ಬಳಿಕ ಕ್ರೀಸ್‌ ಹಂಚಿಕೊಂಡ ಶ್ರೇಯಸ್‌ ಗೋಪಾಲ್‌ ಹಾಗೂ ಮಿಥುನ್‌ ತಂಡ, ದಿನದಂತ್ಯದ ವರೆಗೂ ವಿಕೆಟ್‌ ಕಳೆದುಕೊಳ್ಳದಂತೆ ಎಚ್ಚರ ವಹಿಸಿದರು. 134 ಎಸೆತ ಎದುರಿಸಿರುವ ಶ್ರೇಯಸ್‌ 1 ಬೌಂಡರಿ, 2 ಸಿಕ್ಸರ್‌ ಬಾರಿಸಿದರೆ, 87 ಎಸೆತ ಎದುರಿಸಿರುವ ಮಿಥುನ್‌ 4 ಬೌಂಡರಿ ಗಳಿಸಿದ್ದಾರೆ.

ಸ್ಕೋರ್‌: ಕರ್ನಾಟಕ 275 ಹಾಗೂ 237/8 (ಶ್ರೇಯಸ್‌ ಅಜೇಯ 61, ಮಯಾಂಕ್‌ 46, ಮಿಥುನ್‌ ಅಜೇಯ 35, ಜಡೇಜಾ 3-77)