ಇಲ್ಲಿನ ಲಾಲ್ ಭಾಯ್ ಕಾಂಟ್ರಾಕ್ಟರ್ ಕ್ರೀಡಾಂಗಣದಲ್ಲಿ 3ನೇ ದಿನವಾದ ಭಾನುವಾರ ಎಲೈಟ್ ‘ಎ’ ಗುಂಪಿನ ಪಂದ್ಯದಲ್ಲಿ ಗುಜರಾತ್ 2ನೇ ಇನಿಂಗ್ಸ್ ಆರಂಭಿಸಿದ್ದು ದಿನದಂತ್ಯಕ್ಕೆ 3 ವಿಕೆಟ್‌ಗೆ 187 ರನ್‌ಗಳಿಸಿದ್ದು, 14 ರನ್‌ಗಳ ಅಲ್ಪ ಮುನ್ನಡೆ ಪಡೆದಿದೆ. 

ಸೂರತ್(ಡಿ.17): 2018-19ರ ರಣಜಿ ಋತುವಿನಲ್ಲಿ ಕರ್ನಾಟಕ ಮತ್ತೊಂದು ಜಯದ ವಿಶ್ವಾಸದಲ್ಲಿದೆ. ಮೊದಲ ಇನಿಂಗ್ಸ್‌ನಲ್ಲಿ 173 ರನ್‌ಗಳ ಮುನ್ನಡೆ ಪಡೆದಿರುವ ಕರ್ನಾಟಕ, ಆತಿಥೇಯ ಗುಜರಾತ್ ವಿರುದ್ಧ ಮೇಲುಗೈ ಸಾಧಿಸಿದೆ. 

ಇಲ್ಲಿನ ಲಾಲ್ ಭಾಯ್ ಕಾಂಟ್ರಾಕ್ಟರ್ ಕ್ರೀಡಾಂಗಣದಲ್ಲಿ 3ನೇ ದಿನವಾದ ಭಾನುವಾರ ಎಲೈಟ್ ‘ಎ’ ಗುಂಪಿನ ಪಂದ್ಯದಲ್ಲಿ ಗುಜರಾತ್ 2ನೇ ಇನಿಂಗ್ಸ್ ಆರಂಭಿಸಿದ್ದು ದಿನದಂತ್ಯಕ್ಕೆ 3 ವಿಕೆಟ್‌ಗೆ 187 ರನ್‌ಗಳಿಸಿದ್ದು, 14 ರನ್‌ಗಳ ಅಲ್ಪ ಮುನ್ನಡೆ ಪಡೆದಿದೆ. ರುಜುಲ್ ಭಟ್ (84), ಜುನೇಜಾ (21) ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಆರಂಭಿಕ ಆಘಾತ: ವಿಶ್ವಾಸದಿಂದಲೇ 2ನೇ ಇನ್ನಿಂಗ್ಸ್ ಆರಂಭಿಸಿದ ಗುಜರಾತ್‌ಗೆ, ರಾಜ್ಯದ ವೇಗಿಗಳಾದ ಪ್ರತೀಕ್ ಜೈನ್ ಮತ್ತು ಆಲ್ರೌಂಡರ್ ಕೆ.ಗೌತಮ್ ಆರಂಭಿಕ ಆಘಾತ ನೀಡಿದರು. ಪ್ರತೀಕ್, ಕತನ್ ಪಟೇಲ್‌ರನ್ನು ಡಕೌಟ್ ಮಾಡಿದರೆ, ಪ್ರಿಯಾಂಕ್ ಪಂಚಾಲ್(3)ರನ್ನು ಗೌತಮ್ ಎಲ್‌ಬಿ ಬಲೆಗೆ ಬೀಳಿಸಿದರು. 6 ರನ್ ಗಳಿಸುವಷ್ಟರಲ್ಲಿ ಆರಂಭಿಕ 2 ವಿಕೆಟ್‌ಗಳನ್ನು ಕಳೆದುಕೊಂಡ ಗುಜರಾತ್ ಸಂಕಷ್ಟಕ್ಕೆ ಸಿಲುಕಿತು.

ಭಾರ್ಗವ್-ಭಟ್ ಆಸರೆ: 3ನೇ ವಿಕೆಟ್‌ಗೆ ಭಾರ್ಗವ್ ಮೇರಾಯ್ ಜತೆಯಾದ ರುಜುಲ್ ಭಟ್ ರಾಜ್ಯದ ಬೌಲರ್ ಗಳನ್ನು ಕಾಡಿದರು. ಇಬ್ಬರೂ ಸೇರಿ 3ನೇ ವಿಕೆಟ್‌ಗೆ 134 ರನ್ ಜತೆಯಾಟ ನಡೆಸಿ ತಂಡವನ್ನು ಶೀಘ್ರ ಕುಸಿತದಿಂದ ಪಾರು ಮಾಡಿದರು. ಇದೇ ವೇಳೆ ಉತ್ತಮ ಪ್ರದರ್ಶನ ತೋರುತ್ತಿದ್ದ(74) ಭಾರ್ಗವ್‌ರ ವಿಕೆಟ್ ಪಡೆಯುವ ಮೂಲಕ ರೋನಿತ್ ಮೋರೆ ಜೋಡಿಯನ್ನು ಮುರಿದರು. ಉತ್ತಮ ಪ್ರದರ್ಶನ ತೋರುವ ಮೂಲಕ ರುಜುಲ್ ಭಟ್(82) ಮತ್ತು ಮನ್‌ಪ್ರೀತ್ ಜುನೇಜಾ(21) ಸದ್ಯ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇದಕ್ಕೂ ಮುನ್ನ ಉಳಿದ 7 ವಿಕೆಟ್‌ಗಳನ್ನು ಕರ್ನಾಟಕ ಬೇಗನೆ ಉರುಳಿಸಿದರೆ, ಟೂರ್ನಿಯಲ್ಲಿ ಮತ್ತೊಂದು ಜಯ ಸಾಧಿಸಲಿದ್ದು ನಾಕೌಟ್ ಹಂತಕ್ಕೆ ಸಮೀಪಗೊಳ್ಳಲಿದೆ. ಒಂದೊಮ್ಮೆ ಪಂದ್ಯ ಡ್ರಾದಲ್ಲಿ ಅಂತ್ಯವಾದರೆ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿರುವ ಕರ್ನಾಟಕ ಈಗಾಗಲೇ 3 ಅಂಕ ಬಾಚಿಕೊಳ್ಳುವ ವಿಶ್ವಾಸದಲ್ಲಿದೆ. ಇನ್ನೂ ಗುಜರಾತ್‌ನ್ನು ಬೇಗನೆ ಕಟ್ಟಿಹಾಕಿ ಮತ್ತೆ ವಿನಯ್ ಪಡೆ ಜಯ ಸಾಧಿಸಿದ್ದೆ ಆದಲ್ಲಿ 6 ಅಂಕ ಗಳಿಸಿ ನಾಕೌಟ್ ಹಂತಕ್ಕೆ ಇನ್ನಷ್ಟು ಸಮೀಪಗೊಳ್ಳುವ ಇಚ್ಛೆ ವಿನಯ್ ಪಡೆಯದ್ದಾಗಿದೆ.

ವಿನಯ್ ಅರ್ಧಶತಕ: 7 ವಿಕೆಟ್‌ಗೆ 348 ರನ್‌ಗಳಿಂದ ಮೊದಲ ಇನ್ನಿಂಗ್ಸ್ ಮುಂದುವರಿಸಿದ ಕರ್ನಾಟಕ 389 ರನ್‌ಗಳಿಗೆ ಆಲೌಟ್ ಆಯಿತು. ನಾಯಕ ವಿನಯ್ ಕುಮಾರ್ (51) ಅರ್ಧ ಶತಕದ ಕಾಣಿಕೆ ನೀಡಿದರು. ಆದರೆ ಚೊಚ್ಚಲ ರಣಜಿ ಪಂದ್ಯವನ್ನಾಡುತ್ತಿರುವ ಶರತ್ ಶ್ರೀನಿವಾಸ್ (47) ರನ್‌ಗೆ ಔಟಾದರು. ಗುಜರಾತ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ವಿನಯ್, 5 ಬೌಂಡರಿ, 1 ಸಿಕ್ಸರ್ ಬಾರಿಸಿದರು. ಬಳಿಕ ರೋನಿತ್ ಮೋರೆ (6), ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. ಗುಜರಾತ್ ಪರ ಉತ್ತಮ ಬೌಲಿಂಗ್ ಮಾಡಿದ ಪಿಯೂಷ್ ಚಾವ್ಲಾ 4, ಅಕ್ಷರ್ ಪಟೇಲ್ ಮತ್ತು ಅರ್ಜನ್ ತಲಾ 3 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್: 
ಗುಜರಾತ್ 216/10 ಹಾಗೂ 187/3,
ಕರ್ನಾಟಕ 389/10