ಐಪಿಎಲ್‌'ಗೂ ಬೆಟ್ಟಿಂಗಿಗೂ ಅವಿನಾಭಾವ ಸಂಬಂಧ. ಐಪಿಎಲ್ ಸ್ಟಾರ್ಟ್ ಆದ್ರೆ ಸಾಕು ಹಣದ ಹೊಳೆಯೇ ಇಲ್ಲಿ ಹರಿಯುತ್ತೆ. ಈ ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲುವ ಬುಕ್ಕಿಗಳ ನೆಚ್ಚಿನ ತಂಡ ಯಾವುದು. ಯಾವ ಯಾವ ತಂಡಕ್ಕೆ ಎಷ್ಟೇಎಷ್ಟು ರೇಟ್ ಫಿಕ್ಸ್ ಮಾಡಿದ್ದಾರೆ ಅನ್ನುವುದರ ಸಂಪೂರ್ಣ ಮಾಹಿತಿ ಇಲ್ಲದೆ ನೋಡಿ...
ಬೆಂಗಳೂರು: ಮತ್ತೆ ಐಪಿಎಲ್ ಬಂದಿದೆ. ಐಪಿಎಲ್ 10ನೇ ಆವೃತ್ತಿ ಇವತ್ತಿನಿಂದ ಸ್ಟಾರ್ಟ್ ಆಗಲಿದೆ. ಆಟಗಾರರ ಸಕತ್ ಬೆವರಿಳಿಸುತ್ತಿದ್ದಾರೆ. ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ತಂಡವನ್ನು ಹುರಿದುಂಬಿಸಲು ಸಜ್ಜಾಗಿದ್ದಾರೆ. ಅದೇ ರೀತಿ ಬುಕ್ಕಿಗಳು ಬೆಟ್ಟಿಂಗ್ ಆರಂಭಿಸಲು ಸಿದ್ಧರಾಗಿದ್ದಾರೆ. ಹಣ ಲೂಟಿ ಮಾಡಲು ತಮ್ಮ ನೆಚ್ಚಿನ ತಂಡವನ್ನು ಈಗಾಗಲೇ ಸೆಲೆಕ್ಟ್ ಮಾಡಿಕೊಂಡಿದ್ದಾರೆ.
ಬುಕ್ಕಿಗಳ ಹಾಟ್ ಫೇವರಿಟ್ ಆರ್ಸಿಬಿ:
ಆರ್'ಸಿಬಿ ತಂಡ ಗಾಯಾಳುಗಳ ಸಮಸ್ಯೆಯಿಂದ ಬಳಲುತ್ತಿದೆ. ಕನ್ನಡಿಗ ಕೆ.ಎಲ್.ರಾಹುಲ್ ಅಲಭ್ಯತೆ. ನಾಯಕ ವಿರಾಟ್ ಕೊಹ್ಲಿ ಆರಂಭಿಕ ಪಂದ್ಯಗಳಿಗೆ ಗೈರಾಗುವ ಹಿನ್ನಡೆ. ಡಿವಿಲಿಯರ್ಸ್ ಫಿಟ್ನೆಸ್ ಬಗೆಗಿನ ಗೊಂದಲಗಳ ನಡುವೆಯೂ ಆರ್'ಸಿಬಿ ತಂಡವೇ ಬುಕ್ಕಿಗಳ ಪಾಲಿನ ಫೇವರಿಟ್ ಎನಿಸಿದೆ.
ಹೇಗಿದೆ ಬುಕ್ಕಿಗಳ ಬೆಟ್ಟಿಂಗ್ ಲೆಕ್ಕಾಚಾರ?
ಐಪಿಎಲ್ ಟ್ರೋಫಿ ಗೆಲ್ಲುವ ಬುಕ್ಕಿಗಳ ಫೇವರಿಟ್ ತಂಡ ಆರ್ಸಿಬಿ. ಹಾಲಿ ಬೆಟ್ಟಿಂಗ್ ರೇಟ್'ನ ಪ್ರಕಾರ RCB ಮೇಲೆ ನೀವು ಬೆಟ್ಟಿಂಗ್ ಕಟ್ಟಿದ್ರೆ 100 ರೂಪಾಯಿಗೆ ನಿಮಗೆ 375 ರೂಪಾಯಿ ಸಿಗಲಿದೆ. ಇನ್ನು, ರೈಸಿಂಗ್ ಪುಣೆ ಸೂಪರ್'ಜೈಂಟ್ ಪರ ಬೆಟ್ಟಿಂಗ್ ಆಡಿದರೆ 100 ರೂಪಾಯಿಗೆ 610 ರೂಪಾಯಿ. ಅದೇ ರೀತಿ ನೀವು ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಲಿದೆ ಅಂತ 100 ರೂಪಾಯಿ ಕಟ್ಟಿದ್ರೆ ನಿಮಗೆ 630 ರೂಪಾಯಿ ಬಹುಮಾನ ಸಿಗಲಿದೆ. ಇನ್ನು, ಗುಜರಾತ್ ಲಯನ್ಸ್'ಗೆ 640 ರೂಪಾಯಿ, ಸನ್ ರೈಸರ್ಸ್ 720, ಡೇರ್ ಡೆವಿಲ್ಸ್ಗೆ 760, ಕೆಕೆಆರ್ಗೆ 100ಕ್ಕೆ 800 ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ಗೆ 100 ರೂಪಾಯಿಗೆ 1100 ರೂಪಾಯಿ ಸಿಗಲಿದೆ.
ಬೆಟ್ಟಿಂಗ್'ಗೆ ಬುಕ್ಕಿಗಳ ಹೊಸ ಮಾರ್ಗ:
ಇನ್ನೂ 47 ದಿನಗಳ ನಡೆಯಲಿರುವ ಈ ಚುಟುಕು ಕದನದಲ್ಲಿ 2 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಬೆಟ್ಟಿಂಗ್ ದಂಧೆ ನಡೆಯುವ ನಿರೀಕ್ಷೆಯಿದೆ ಎಂದು ಅಂದಾಜಿಸಲಾಗಿದೆ. ಪೊಲೀಸರ ಕಣ್ತಪ್ಪಿಸಿ ಅಕ್ರಮ ವ್ಯವಹಾರ ನಡೆಸಲು ಹೊಸ ಮಾರ್ಗವನ್ನು ಬುಕ್ಕಿಗಳು ಕಂಡುಕೊಂಡಿದ್ದಾರೆ. ಬೆಟ್ಟಿಂಗ್'ಗಾಗಿಯೇ ಸುಮಾರು 35 ಆ್ಯಪ್'ಗಳನ್ನು ಬಳಸಿಕೊಳ್ಳಲು ಸಿದ್ಧರಾಗಿದ್ದಾರೆ. ಈ ಆ್ಯಪ್'ಗಳ ಮೂಲಕ ಬುಕ್ಕಿಗಳು ಸುಲಭವಾಗಿ ದಂಧೆ ನಡೆಸಬಹುದಾಗಿದೆ. ಆದರೆ, ಪೊಲೀಸರೂ ಕೂಡ ಇಂಥದ್ದನು ಪೂರ್ವದಲ್ಲೇ ಅಂದಾಜಿಸಿದ್ದು, ಅಕ್ರಮ ತಡೆಗಟ್ಟಲು ಸಕಲ ರೀತಿಯಲ್ಲಿ ಸಜ್ಜಾಗಿದ್ದಾರೆ.
ಇದೇ ವೇಳೆ, ದೊಡ್ಡ ಮುಖಬೆಲೆಯ ನೋಟು ರದ್ದತಿಯಿಂದ ನಗದು ವಹಿವಾಟಿಗೆ ಹಿನ್ನಡೆಯಾಗಿದ್ದು, ಈ ಬಾರಿ ಚಿನ್ನ ಮತ್ತು ಸ್ವತ್ತುಗಳ ಮೂಲಕವೂ ವ್ಯವಹಾರ ನಡೆಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಒಟ್ಟಾರೆ ಅದೇನೆ ಇರಲಿ. ಬುಕ್ಕಿಗಳ ಆಮಿಷಕ್ಕೆ ಬಲಿಯಾಗಿ ಮನೆ ಮಠವನ್ನು ಕಳೆದುಕೊಳ್ಳದಿರಿ ಎನ್ನುವುದೇ ನಮ್ಮ ಆಶಯ.
- ಪರಮೇಶ್ ಆರ್., ಸ್ಪೋರ್ಟ್ಸ್ ಬ್ಯೂರೋ, ಸುವರ್ಣನ್ಯೂಸ್
