Wrestlers Protest: ಮತ್ತೆ ಆಖಾಡಕ್ಕೆ ಮರಳಿದ ಕುಸ್ತಿಪಟುಗಳು!
ಏಷ್ಯನ್ ಗೇಮ್ಸ್ ಟ್ರಯಲ್ಸ್ಗಾಗಿ ಡೆಲ್ಲಿಯ ಪ್ರತಿಭಟನಾ ಸ್ಥಳದಲ್ಲೇ ಅಭ್ಯಾಸ ಶುರು
ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಿರತರಾಗಿರುವ ಕುಸ್ತಿಪಟುಗಳು
ಬ್ರಿಜ್ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು
ನವದೆಹಲಿ(ಮೇ.10): ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಭಾರತದ ಅಗ್ರ ಕುಸ್ತಿಪಟುಗಳು 15 ದಿನಗಳ ಬಳಿಕ ಮತ್ತೆ ಕುಸ್ತಿ ಅಭ್ಯಾಸ ಆರಂಭಿಸಿದ್ದು, ಮುಂಬರುವ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಲ್ಲಿದ್ದಾರೆ.
ಚೀನಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ಗಾಗಿ ಜೂನ್ನಲ್ಲಿ ಡಬ್ಲ್ಯುಎಫ್ಐ ಆಯ್ಕೆ ಟ್ರಯಲ್ಸ್ ನಡೆಸಲಿದ್ದು, ಇದಕ್ಕಾಗಿ ಕುಸ್ತಿಪಟುಗಳು ಸೋಮವಾರ ಜಂತರ್ಮಂತರ್ನ ಪ್ರತಿಭಟನಾ ಸ್ಥಳದಲ್ಲೇ ತರಬೇತಿ ನಡೆಸಿದರು. ಭಜರಂಗ್, ವಿನೇಶ್ ಫೋಗಾಟ್ ಜನವರಿಯಿಂದ ಯಾವುದೇ ಅಂತಾರಾಷ್ಟ್ರೀಯ ಕೂಟಗಳಲ್ಲಿ ಪಾಲ್ಗೊಂಡಿಲ್ಲ. ಬ್ರಿಜ್ರನ್ನು ಬಂಧಿಸುವವರೆಗೆ ಯಾವುದೇ ಕೂಟ, ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪಟ್ಟುಹಿಡಿದಿದ್ದರು. ಆದರೆ ತಮ್ಮ ಪಟ್ಟು ಸಡಿಲಿಸಿದಂತಿರುವ ಕುಸ್ತಿಪಟುಗಳು ಮುಂದಿನ ಟೂರ್ನಿಗಳಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ಡಬ್ಲ್ಯುಎಫ್ಐ ಮೇಲ್ವಿಚಾರಣೆಗೆ ನೇಮಿಸಲಾಗಿರುವ ಸಮಿತಿಯು ಆಯ್ಕೆ ಟ್ರಯಲ್ಸ್ನಲ್ಲಿ ಪಾಲ್ಗೊಳ್ಳಲು ಬೇಕಾಗಿರುವ ಮಾನದಂಡಗಳನ್ನು ಬದಲಾಯಿಸುವ ಸಾಧ್ಯತೆ ಇದೆ. ಈ ಮೊದಲು ರಾಷ್ಟ್ರೀಯ, ಅಂತಾರಾಷ್ಟ್ರೀಯ ಕೂಟ, ಫೆಡರೇಶನ್ ಕಪ್ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ಪದಕ ಗೆದ್ದ ಕುಸ್ತಿಪಟುಗಳಿಗೆ ಮಾತ್ರ ಟ್ರಯಲ್ಸ್ನಲ್ಲಿ ಪಾಲ್ಗೊಳ್ಳುವ ಅವಕಾಶವಿತ್ತು. ಆದರೆ ಈ ಬಾರಿ ಆಯಾಯಾ ರಾಜ್ಯ ಸಂಸ್ಥೆಗಳೇ ಕುಸ್ತಿಪಟುಗಳನ್ನು ಆಯ್ಕೆಮಾಡಿ ಟ್ರಯಲ್ಸ್ಗೆ ಕಳುಹಿಸುವ ಅವಕಾಶ ನೀಡಬಹುದು ಎನ್ನಲಾಗುತ್ತಿದೆ.
ಪ್ರತಿಭಟನೆ ಬೆಂಬಲಿಸಿದ ಮೂವರ ಅಮಾನತು!
ಕುಸ್ತಿಪಟುಗಳ ಪ್ರತಿಭಟನೆ ಬೆಂಬಲಿಸಿದ್ದಾರೆಂಬ ಕಾರಣಕ್ಕೆ ಹರ್ಯಾಣ ಅಮೆಚೂರ್ ಕುಸ್ತಿ ಸಂಸ್ಥೆ(ಎಚ್ಎಡಬ್ಲ್ಯುಎ)ಯು 3 ಜಿಲ್ಲೆಗಳ ಕಾರ್ಯದರ್ಶಿಗಳನ್ನು ಅಮಾನತುಗೊಳಿಸಿ ಆದೇಶಿಸಿದೆ. ಪ್ರತಿಭಟನೆ ಬೆಂಬಲಿಸಿರುವುದು ಡಬ್ಲ್ಯುಎಫ್ಐ ನಿಯಮಕ್ಕೆ ವಿರುದ್ಧ ಎಂದು ಜಜ್ಜಾರ್, ಹಿಸಾರ್, ಮೇವತ್ ಜಿಲ್ಲೆಗಳ ಮೂವರನ್ನು ಎಚ್ಎಡಬ್ಲ್ಯುಎ ಅಮಾನತು ಮಾಡಿದೆ.
ಬಾಕ್ಸಿಂಗ್: ದೀಪಕ್, ನಿಶಾಂತ್ ಕ್ವಾರ್ಟರ್ಗೆ
ತಾಷ್ಕೆಂಟ್: ಪುರುಷರ ಬಾಕ್ಸಿಂಗ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತದ ಮತ್ತಿಬ್ಬರು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಮಂಗಳವಾರ 51 ಕೆ.ಜಿ. ವಿಭಾಗದಲ್ಲಿ ದೀಪಕ್ ಹಾಗೂ 71 ಕೆ.ಜಿ. ವಿಭಾಗದಲ್ಲಿ ನಿಶಾಂತ್ ದೇವ್ ಅಂತಿಮ 8ರ ಘಟ್ಟ ಪ್ರವೇಶಿಸಿದ್ದಾರೆ. ಪ್ರಿ ಕ್ವಾರ್ಟರ್ನಲ್ಲಿ ದೀಪಕ್ ಚೀನಾದ ಝಾಂಗ್ ಜಿಯಾಮೊ ವಿರುದ್ಧ 5-0 ಅಂತರದಲ್ಲಿ ಜಯಭೇರಿ ಬಾರಿಸಿದರೆ, ನಿಶಾಂತ್ ಪ್ಯಾಲೆಸ್ತೀನಿನ ಫೆಕಾಹ ನಿದಾಲ್ರನ್ನು ಮಣಿಸಿದರು.
Wrestlers Protest ಕುಸ್ತಿಪಟುಗಳ ಹೋರಾಟಕ್ಕೆ ಮತ್ತೊಂದು ಟ್ವಿಸ್ಟ್: ಈಗ ರೈತರ ಸಾಥ್!
ಆದರೆ 2021ರ ವಿಶ್ವ ಯುವ ಚಾಂಪಿಯನ್ಶಿಪ್ ವಿಜೇತ ಸಚಿನ್ 54 ಕೆ.ಜಿ. ವಿಭಾಗದ ಪ್ರಿ ಕ್ವಾರ್ಟರ್ನಲ್ಲಿ ಕಜಕಸ್ತಾನದ ಸಬೀರ್ಖಾನ್ ವಿರುದ್ಧ 0-5 ಅಂತರದಲ್ಲಿ ಪರಾಭವಗೊಂಡರೆ, 67 ಕೆ.ಜಿ. ವಿಭಾಗದಲ್ಲಿ ಆಕಾಶ್ ಕಜಕಸ್ತಾನದ ಬೆಕಬೋವ್ ದುಲಾತ್ ವಿರುದ್ಧ 0-5 ಅಂತರದಲ್ಲಿ ಸೋತುಹೊರಬಿದ್ದರು.
ಮೆಸ್ಸಿ ಸೌದಿ ಕ್ಲಬ್ ಸೇರ್ಪಡೆ?
ಪ್ಯಾರಿಸ್: ಅರ್ಜೆಂಟೀನಾದ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಮುಂದಿನ ಋುತುವಿನಲ್ಲಿ ಸೌದಿ ಅರೇಬಿಯಾದ ಲೀಗ್ನಲ್ಲಿ ಆಡುವುದು ಬಹುತೇಕ ಖಚಿತವಾಗಿದೆ ಎನ್ನಲಾಗಿದ್ದು, ಅಲ್ ಹಿಲಾಲ್ ಕ್ಲಬ್ ಜೊತೆ ಮಾತುಕತೆ ಪೂರ್ಣಗೊಳಿಸಿದ್ದಾರೆ ಎಂದು ಮಾಧ್ಯಗಳಲ್ಲಿ ವರದಿಯಾಗಿದೆ.
ಕ್ಲಬ್ ಮೆಸ್ಸಿಗೆ ವಾರ್ಷಿಕ 400 ಮಿಲಿಯನ್ ಯುರೋ (ಅಂದಾಜು 3611 ಕೋಟಿ ರು.) ಆಫರ್ ನೀಡಿದೆ ಎಂದು ಕಳೆದ ತಿಂಗಳು ವರದಿಯಾಗಿತ್ತು. ಸದ್ಯ ಅವರು ಫ್ರಾನ್ಸ್ನ ಫುಟ್ಬಾಲ್ ಕ್ಲಬ್ ಪ್ಯಾರಿಸ್ ಸೇಂಟ್ ಜರ್ಮೈನ್(ಪಿಎಸ್ಜಿ) ಪರ ಆಡುತ್ತಿದ್ದು, ಈ ಋುತುವಿನಲ್ಲಿ ಅವರ ಒಪ್ಪಂದ ಅಂತ್ಯಗೊಳ್ಳಲಿದೆ. ಅವರ ಒಪ್ಪಂದ ನವೀಕರಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.