ಗೆಲುವಿನ ಓಟ ಮುಂದುವರಿಸಿದ ಡೆಲ್ಲಿ, ಪ್ಯಾಂಥರ್ಸ್ ಹಾಗೂ ಬೆಂಗಾಲ್ ತಂಡಕ್ಕೂ ಸ್ವೀಟ್ ಜೆಲ್ಲಿ!
ದಬಾಂಗ್ ಡೆಲ್ಲಿ ಸತತ 4ನೇ ಗೆಲುವು ದಾಖಲಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಇನ್ನು ಜೈಪುರ ಹಾಗೂ ಬೆಂಗಾಲ್ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದಿದೆ. ಶನಿವಾರದ ಮೂರು ಪಂದ್ಯಗಳ ಹೈಲೈಟ್ಸ್ ಇಲ್ಲಿದೆ.
ಬೆಂಗಳೂರು(ಅ.15): ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್, ದಬಾಂಗ್ ಡೆಲ್ಲಿ ಕೆಸಿ ಹಾಗೂ ಬೆಂಗಾಲ್ ವಾರಿಯರ್ಸ್ ತಂಡಗಳು ಗೆಲುವಿನ ಸಿಹಿ ಕಂಡಿದೆ. ದಿನದ ಮೊದಲ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಗುಜರಾತ್ ಜಯಂಟ್ಸ್ ವಿರುದ್ಧ 25-18, ದಬಾಂಗ್ ಡೆಲ್ಲಿ ಎದುರಾಳಿ ತೆಲುಗು ಟೈಟಾನ್ಸ್ ವಿರುದ್ಧ 46-26 ಅಂತರದಲ್ಲಿ ಹಾಗೂ ದಿನದ ಮೂರನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ 54-26 ಅಂತರದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ ಜಯ ಗಳಿಸಿದವು.
ಬೆಂಗಾಲ್ ವಾರಿಯರ್ಸ್‌ಗೆ ದಾಖಲೆಯ ಜಯ: ನಾಯಮ ಮಹೇಂದ್ರ ಸಿಂಗ್ (12) ಹಾಗೂ ಶ್ರೀಕಾಂತ್ ಯಾದವ್ (9) ಅವರ ರೈಡಿಂಗ್ ಅಂಕಗಳ ನೆರವಿನಿಂದ ಬೆಂಗಾಲ್ ವಾರಿಯರ್ಸ್ 54-26 ಅಂಕಗಳ ಅಂತರದಲ್ಲಿ ಭರ್ಜರಿ ಜಯ ಗಳಿಸಿತು. ಇದು ಪ್ರಸಕ್ತ ಋತುವಿನಲ್ಲಿ ತಂಡವೊಂದು ಗಳಿಸಿದ ಗರಿಷ್ಠ ಅಂಕವಾಗಿದೆ. ಪಾಟ್ನಾ ಪೈರೇಟ್ಸ್ ಪರ ಸಚಿನ್ 12 ಅಂಕಗಳನ್ನು ಗಳಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.
ಯು ಮುಂಬಾ, ಜೈಪುರ ಪಿಂಕ್ ಪ್ಯಾಂಥರ್ಸ್‌ಗೆ ಸತತ 2ನೇ ಜಯ
ಬೆಂಗಾಲ್ ವಾರಿಯರ್ಸ್ ಮುನ್ನಡೆ:
ನಾಯಕ ಮಣಿಂದರ್ ಸಿಂಗ್ (8) ಹಾಗೂ ಶ್ರೀಕಾಂತ್ ಜಾದವ್ (6) ಅವರ ಅದ್ಭುತ ರೈಡಿಂಗ್ ನೆರವಿನಿಂದ ಪಾಟ್ನಾ ಪೈರೇಟ್ಸ್ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ ಬೆಂಗಾಲ್ ವಾರಿಯರ್ಸ್ 26-11 ಅಂತರದಲ್ಲಿ ಮುನ್ನಡೆ ಕಂಡಿದೆ, ರೈಡಿಂಗ್ ಹಾಗೂ ಟ್ಯಾಕಲ್ ವಿಭಾಗದಲ್ಲಿ ಕಳೆಗುಂದಿದ ಪಾಟ್ನಾ ಪೈರೇಟ್ಸ್ ಮತ್ತೊಂದು ಸೋಲಿಗೆ ಮುನ್ನಡಿ ಬರೆಯಿತು.
ಅಗ್ರ ಸ್ಥಾನಕ್ಕೇರಿದ ದಬಾಂಗ್ ಡೆಲ್ಲಿ:
ನಾಯಕ ನವೀನ್ ಎಕ್ಸ್‌ಪ್ರೆಸ್ ರೈಡಿಂಗ್‌ನಲ್ಲಿ 46ನೇ ಬಾರಿಗೆ ಸೂಪರ್ 10 ಸಾಧನೆ ಮಾಡುವುದರೊಂದಿಗೆ ದಬಾಂಗ್ ಡೆಲ್ಲಿ ಕೆಸಿ ತಂಡ ತೆಲುಗು ಟೈಟಾನ್ಸ್ ವಿರುದ್ಧ 46-26 ಅಂಕಗಳ ಅಂತರದಲ್ಲಿ ಜಯಗಳಿಸಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು. ನವೀನ್ 12 ಅಂಕಗಳನ್ನು ಗಳಿಸಿ ಸೋಲಿಲ್ಲದ ಸರದಾರರೆನಿಸಿದರು. ಆಡಿದ ನಾಲ್ಕೂ ಪಂದ್ಯಗಳಲ್ಲೂ ಡೆಲ್ಲಿ ಪ್ರಭುತ್ವ ಸಾಧಿಸಿ ತಾನು ನೈಜ ಚಾಂಪಿಯನ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿತು. ರೈಡಿಂಗ್‌ನಲ್ಲಿ ಮಂಜಿತ್ 9 ಅಂಕಗಳನ್ನು ಗಳಿಸಿ ಬೃಹತ್ ಅಂತರದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ತೆಲುಗು ಟೈಟಾನ್ಸ್ ಪರ ವಿನಯ್ ರೈಡಿಂಗ್‌ನಲ್ಲಿ 10 ಅಂಕಗಳನ್ನು ಗಳಿಸಿದ್ದು ಜಯದ ಅಂತರವನ್ನು ಮಾತ್ರ ಕಡಿಮೆ ಮಾಡಿತು. ಹಿಂದಿನ ಪಂದ್ಯದಲ್ಲಿ ಜಯ ಗಳಿಸಿದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ಅಗ್ರ ಸ್ಥಾನ ಕೇವಲ 40 ನಿಮಿಷಕ್ಕೇ ಸೀಮಿತವಾಯಿತು.
ನರಗುಂದದಲ್ಲಿ Pro Kabaddi ನೆನಪಿಸಿದ ಪಂದ್ಯಾವಳಿ..!
ದಬಾಂಗ್ ಡೆಲ್ಲಿಗೆ ಬೃಹತ್ ಮುನ್ನಡೆ:
ಪಂದ್ಯ ಆರಂಭಗೊಂಡ ಆರೇ ನಿಮಿಷಗಳಲ್ಲಿ ತೆಲುಗು ಟೈಟಾನ್ಸ್ ತಂಡ ಆಲೌಟ್. ಡೆಲ್ಲಿಯ ನಾಯಕ ನವೀನ್ ಕುಮಾರ್ 9 ರೈಡಿಂಗ್ ಅಂಕ, ಮಂಜಿತ್ 4 ಅಂಕಗಳನ್ನು ಗಳಿಸುವುದರೊಂದಿಗೆ ತಂಡ ಪ್ರಥಮಾರ್ಧದಲ್ಲಿ 24-10 ಅಂಕಗಳ ಅಂತರದಲ್ಲಿ ಮುನ್ನಡೆದಿದೆ. ದಬಾಂಗ್ ಡೆಲ್ಲಿ ತಂಡದ ಪ್ರತಿಯೊಬ್ಬ ಆಟಗಾರರೂ ಅಂಕ ಗಳಿಸಿರುವುದು ವಿಶೇಷವಾಗಿತ್ತು.ತೆಲುಗು ಟೈಟಾನ್ಸ್ ಪರ ಮನು ಗೊಯತ್ 3 ಅಂಕಗಳನ್ನು ಗಳಿಸಿ ತಂಡದ ಗೌರವ ಕಾಪಾಡಿದರು. ಟ್ಯಾಕಲ್‌ನಲ್ಲಿ ನಾಯಕ ಸುರ್ಜಿತ್ ಸಿಂಗ್ 2 ಅಂಕಗಳನ್ನು ಗಳಿಸಿದರು.
ಜೈಪುರ ಜಯದ ನಡೆ:
ಗುಜರಾತ್ ಜಯಂಟ್ಸ್ ವಿರುದ್ಧ 25-18 ಅಂತರದಲ್ಲಿ ಜಯ ಗಳಿಸಿದ ಮಾಜಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ವಿವೋ ಪ್ರೋ ಕಬಡ್ಡಿ ಲೀಗ್‌ನಲ್ಲಿ ಯಶಸ್ಸಿನ ಓಟವನ್ನು ಮುಂದುವರಿಸಿದೆ. ಭವಾನಿ ರಜಪೂತ್ (5), ರಾಹುಲ್ ಚೌಧರಿ (5) ಹಾಗೂ ಅರ್ಜುನ್ ದೇಶ್ವಾಲ್ (4) ರೈಡಿಂಗ್‌ನಲ್ಲಿ ಗಳಿಸಿದ ಅಂಕ ಜೈಪುರಕ್ಕೆ ಜಯದ ಯಶಸ್ಸು ನೀಡಿತು. ಸಾಹುಲ್ ಕುಮಾರ್ ಹಾಗೂ ನಾಯಕ ಸುನಿಲ್ ಕುಮಾರ್ ಟ್ಯಾಕಲ್‌ನಲ್ಲಿ ತಲಾ 2 ಅಂಕಗಳನ್ನು ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ನಾಲ್ಕು ಪಂದ್ಯಗಳಲ್ಲಿ ಮೂರು ಜಯ ಗಳಿಸಿದ ಜೈಪುರ ಪಿಂಕ್ ಪ್ಯಾಂಥರ್ಸ್ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಜಿಗಿಯಿತು. ಎರಡನೇ ಸೋಲುಂಡ ಗುಜರಾತ್ ಜಯಂಟ್ಸ್ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಕುಸಿಯಿತು.
ಪ್ರಥಮಾರ್ಧದಲ್ಲಿ ಪಿಂಕ್ ಪ್ಯಾಂಥರ್ಸ್ ಮುನ್ನಡೆ: ರೈಡಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಗುಜರಾತ್ ಜಯಂಟ್ಸ್ ವಿರುದ್ಧ 12-9 ಅಂಕಗಳ ಅಂತರದಲ್ಲಿ ಮುನ್ನಡಯಿತು. ಅಂಕುಶ್ ಟ್ಯಾಕಲ್‌ನಲ್ಲಿ ಹಾಗೂ ರಾಹುಲ್ ಚೌಧಕರಿ ರೈಡಿಂಗ್‌ನಲ್ಲಿ ಮಿಂಚಿ ತಂಡದ ಮುನ್ನಡೆಗೆ ನೆರವಾದರು. ಶುಕ್ರವಾರದ ಪಂದ್ಯದಲ್ಲಿ ಜಯ ಗಳಿಸಿದ ಜೈಪುರ ತಂಡ ಅತ್ಯಂತ ಆತ್ಮವಿಶ್ವಾಸದಲ್ಲೇ ಪ್ರಥಮಾರ್ಧದಲ್ಲಿ ಯಶಸ್ಸು ಕಂಡಿತು.