ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ಚಾಂಪಿಯನ್

ಮದಗಜಗಳ ಕಾದಾಟದಂತಿದ್ದ, ತೀವ್ರ ಜಿದ್ದಾನಿಂದ ಕೂಡಿದ್ದ ಪ್ರೊ ಕಬಡ್ಡಿ ಆರನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬೆಂಗಳೂರು ಬುಲ್ಸ್ 38-33 ಅಂಕಗಳಿಂದ ಗುಜರಾತ್ ಫಾರ್ಚ್ಯೂನ್’ಜೈಂಟ್ಸ್ ತಂಡವನ್ನು ಮಣಿಸಿತು. 

Pro Kabaddi Final Bengaluru Bulls Beat Gujarat Fortunegiants

ಮುಂಬೈ[ಜ.05]: ಮದಗಜಗಳ ಕಾದಾಟದಂತಿದ್ದ, ತೀವ್ರ ಜಿದ್ದಾನಿಂದ ಕೂಡಿದ್ದ ಪ್ರೊ ಕಬಡ್ಡಿ ಆರನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಬೆಂಗಳೂರು ಬುಲ್ಸ್ 38-33 ಅಂಕಗಳಿಂದ ಗುಜರಾತ್ ಫಾರ್ಚ್ಯೂನ್’ಜೈಂಟ್ಸ್ ತಂಡವನ್ನು ಮಣಿಸಿತು. ಈ ಮೂಲಕ ರೋಹಿತ್ ಕುಮಾರ್ ನೇತೃತ್ವದ ಬೆಂಗಳೂರು ಬುಲ್ಸ್ ಚೊಚ್ಚಲ ಪ್ರಶಸ್ತಿ ಎತ್ತಿಹಿಡಿದು ಸಂಭ್ರಮಿಸಿತು. ಪವನ್ ಕುಮಾರ್ ಶೆರಾವತ್ 25 ಅಂಕ ಕಲೆಹಾಕುವ ಮೂಲಕ ಬುಲ್ಸ್ ಗೆಲುವಿನ ರೂವಾರಿ ಎನಿಸಿದರು.

ಸತತ 5 ಆವೃತ್ತಿಗಳಿಂದಲೂ ಪ್ರಶಸ್ತಿಯ ಕನವರಿಕೆಯಲ್ಲಿದ್ದ ಬುಲ್ಸ್ ಕೊನೆಗೂ ತನ್ನ ಪ್ರಶಸ್ತಿಯ ಕನಸನ್ನು ನೀಗಿಸಿಕೊಂಡಿದೆ. ಪಂದ್ಯದುದ್ದಕ್ಕೂ ಏಕಾಂಗಿ ಹೋರಾಟ ನಡೆಸಿದ ಪವನ್ ಶೆರಾವತ್ ಬುಲ್ಸ್’ಗೆ ಗೆಲುವಿನ ಸಿಂಚನ ಮಾಡಿಸಿದರು.

ಬೆಂಗಳೂರು ಬುಲ್ಸ್ ಟಾಸ್ ಗೆದ್ದು ಕೋರ್ಟ್ ಆಯ್ದುಕೊಂಡಿತು. ಗುಜರಾತ್’ನ ಸಚಿನ್ ಅವರನ್ನು ಟ್ಯಾಕಲ್ ಮಾಡುವ ಮೂಲಕ ಬುಲ್ಸ್ ಅಂಕಗಳ ಖಾತೆ ತೆರೆಯಿತು. ಮೊದಲಾರ್ಧದ 9ನೇ ನಿಮಿಷದಲ್ಲಿ ಉಭಯ ತಂಡಗಳು 6-6 ರ ಸಮಬಲ ಸಾಧಿಸಿದ್ದವು. ಆಬಳಿಕ ನಿರಂತರ ಅಂಕ ಹೆಚ್ಚಿಸಿಕೊಳ್ಳುತ್ತಾ ಸಾಗಿದ ಗುಜರಾತ್ ಮೊದಲಾರ್ಧ ಮುಕ್ತಾಯಕ್ಕೆ ಕೊನೆಯ 2 ನಿಮಿಷಗಳಿದ್ದಾಗ ಬುಲ್ಸ್ ತಂಡವನ್ನು ಆಲೌಟ್ ಮಾಡಿ 15-9 ಅಂಕಗಳ ಮುನ್ನಡೆ ಸಾಧಿಸಿತು. ಮೊದಲಾರ್ಧ ಮುಕ್ತಾಯದ ವೇಳೆಗೆ ಗುಜರಾತ್ 17-9 ಅಂಕಗಳ ಭಾರೀ ಮುನ್ನಡೆ ಸಾಧಿಸಿತ್ತು. 

ಪವನ್ ಆರ್ಭಟಕ್ಕೆ ಗುಜರಾತ್ ತತ್ತರ: ಮೊದಲಾರ್ಧದ ಹಿನ್ನಡೆಯನ್ನು ಮೆಟ್ಟಿ ನಿಲ್ಲುವಲ್ಲಿ ಬುಲ್ಸ್ ಕೊನೆಗೂ ಯಶಸ್ವಿಯಾಯಿತು. ಮಿಂಚಿನ ದಾಳಿ ನಡೆಸಿದ ಪವನ್ ಶೆರಾವತ್ ಮೇಲಿಂದ ಮೇಲೆ ಅಂಕ ಕಲೆ ಹಾಕುವ ಮೂಲಕ ಬುಲ್ಸ್ ತಂಡ ಸಮಬಲ ಸಾಧಿಸಲು ನೆರವಾದರು. ದ್ವಿತಿಯಾರ್ಧದ 10ನೇ ನಿಮಿಷದಲ್ಲಿ ಸೂಪರ್ ರೈಡ್ ನಡೆಸಿದ ಶೆರಾವತ್ ಮೂರು ಅಂಕ ತಂದಿತ್ತರು. ಈ ಮೂಲಕ ಮೊದಲ ಬಾರಿಗೆ ಬುಲ್ಸ್ 23-22 ಅಂಕಗಳಿಂದ ಮುನ್ನಡೆಯಿತು. ಆ ಬಳಿಕವೂ ಉಭಯ ತಂಡಗಳಿಂದ ಸಮಬಲದ ಹೋರಾಟ ಕಂಡು ಬಂತು. ಕೊನೆಯ ನಾಲ್ಕು ನಿಮಿಷಗಳಿದ್ದಾಗ ಇತ್ತಂಡಗಳು 29-29 ಅಂಕಗಳಿಂದ ಸಮಬಲ ಸಾಧಿಸಿದ್ದವು. ಆದರೆ ಕೊನೆಯ ಎರಡು ನಿಮಿಷಗಳಿದ್ದಾಗ ಪವನ್ ಶೆರಾವತ್ ಗುಜರಾತ್ ತಂಡವನ್ನು ಮತ್ತೊಮ್ಮೆ ಆಲೌಟ್ ಮಾಡಿ ಬುಲ್ಸ್’ಗೆ ಸ್ಪಷ್ಟ ಮುನ್ನಡೆ ಒದಗಿಸಿಕೊಟ್ಟರು. ಕೊನೆಯಲ್ಲಿ ಗುಜರಾತ್ ಚುರುಕಿನ ದಾಳಿ ನಡೆಸಿತಾದರೂ ಗೆಲುವಿನ ಸನಿಹ ಬರಲು ಸಾಧ್ಯವಾಗಲಿಲ್ಲ.
ಇದರೊಂದಿಗೆ ಮತ್ತೊಮ್ಮೆ ಗುಜರಾತ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. 5ನೇ ಆವೃತ್ತಿಯಲ್ಲೂ ಗುಜರಾತ್ ಫೈನಲ್ ಎಡವಿತ್ತು.  

Latest Videos
Follow Us:
Download App:
  • android
  • ios