PKL7: ಪಾಟ್ನಾ ಲೆಕ್ಕಾಚಾರ ಉಲ್ಟಾ; ಯು ಮುಂಬಾಗೆ ಗೆಲುವಿನ ಕಿರೀಟ!
ಪ್ರೊ ಕಬಡ್ಡಿ 7ನೇ ಆವೃತ್ತಿ ಪ್ರತಿ ಪಂದ್ಯ ಕೂಡ ಮಹತ್ವ ಪಡೆದುಕೊಳ್ಳುತ್ತಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲು ತಂಡಗಳ ಹೋರಾಟ ತೀವ್ರಗೊಳ್ಳುತ್ತಿದೆ. ಪಾಟ್ನಾ ಪೈರೇಟ್ಸ್ ವಿರುದ್ದದ ರೋಚಕ ಹೋರಾಟದಲ್ಲಿ ಯು ಮುಂಬಾ ಗೆಲುವಿನ ನಗೆ ಬೀರೋ ಮೂಲಕ ಕಳೆದ ಪಂದ್ಯದ ಸೋಲಿನಿಂದ ಹೊರಬಂದಿದೆ.
ಅಹಮ್ಮದಾಬಾದ್(ಆ.16): ಪಾಟ್ನಾ ಪೈರೇಟ್ಸ್ ಹಾಗೂ ಯು ಮುಂಬಾ ನಡುವಿನ ಹೋರಾಟ ಪ್ರತಿ ಬಾರಿ ಅಭಿಮಾನಿಗಳ ಕುತೂಹಲವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದೀಗ 7ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ಪಂದ್ಯದ 43ನೇ ಪಂದ್ಯ ಕೂಡ ಇದಕ್ಕೆ ಹೊರತಾಗಿಲ್ಲ. ಪಾಟ್ನಾ ಪೈರೇಟ್ಸ್ ವಿರುದ್ಧ ರೋಚಕ ಹೋರಾಟದಲ್ಲಿ ಯು ಮುಂಬಾ 34-30 ಅಂಕಗಳಿಂದ ಗೆಲುವು ಸಾಧಿಸಿದೆ.
ಇದನ್ನೂ ಓದಿ: ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ !
ಜಯದೀಪ್ ಟ್ಯಾಕಲ್ ಹಾಗೂ ಪ್ರದೀಪ್ ನರ್ವಾಲ್ ರೈಡ್‌ನಿಂದ ಪಾಟ್ನಾ ಪೈರೇಟ್ಸ್ ಮೊದಲಾರ್ಧದಲ್ಲಿ ಶುಭಾರಂಭ ಮಾಡಿತು. ಮೊದಲ ನಿಮಿಷದಲ್ಲಿ ಯು ಮುಂಬಾ ಯಾವುದೇ ಅಂಕ ಪಡೆಯಲಿಲ್ಲ. ರೋಹಿತ್ ಬಲಿಯಾನ್ ಮೂಲಕ ಯು ಮುಂಬಾ ಮೊದಲ ಅಂಕ ಸಂಪಾದಿಸಿತು. ಆರಂಭಿಕ 3 ನಿಮಿಷಗಳ ವರೆಗೆ ಪಾಟ್ನಾ ಪೈರೇಟ್ಸ್ ಮುನ್ನಡೆ ಸಾಧಿಸಿತು. ಆದರೆ 4 ನಿಮಿಷದಲ್ಲಿ ಯು ಮುಂಬಾ 5-5 ಅಂಕಗಳಿಂದ ಸಮಬಲ ಮಾಡಿಕೊಂಡಿತು.
ಇದನ್ನೂ ಓದಿ: ಪ್ರೊ ಕಬಡ್ಡಿ 7ನೇ ಆವೃತ್ತಿ ಹಾಗೂ ವಿಶೇಷತೆ!
ಯು ಮುಂಬಾ ಆಕ್ರಮಣಕಾರಿ ಆಟಕ್ಕೆ ಮುಂದಾಗುತ್ತಿದ್ದಂತೆ, ಪಾಟ್ನಾ ಅಂಕ ಬೇಟೆಗೆ ಬ್ರೇಕ್ ಬಿತ್ತು. ಮುಂಬಾ ಮುನ್ನಡೆ ಅಂತರ ಹೆಚ್ಚಾಯಿತು. ಪಾಟ್ನಾ ಇನ್ನಿಲ್ಲದ ಕಸರತ್ತು ನಡೆಸಿದರೂ ಪ್ರಯೋಜನವಾಗಲಿಲ್ಲ. ಸಂಪೂರ್ಣ ಮೇಲುಗೈ ಸಾಧಿಸಿದ ಯು ಮುಂಬಾ 22-9 ಅಂಕಗಳ ಅಂತರದಲ್ಲಿ ಮೊದಲಾರ್ಧ ಅಂತ್ಯಗೊಳಿಸಿತು.
ದ್ವಿತಿಯಾರ್ಧದಲ್ಲೂ ಯು ಮುಂಬಾ ಮುನ್ನಡೆ ಕಾಯ್ದುಕೊಂಡಿತು. ಆದರೆ ಪಾಟ್ನಾ ಪೈರೇಟ್ಸ್ ಕೂಡ ತಿರುಗೇಟು ನೀಡೋ ಪ್ರಯತ್ನ ಮಾಡಿತು. ಮಿಂಚಿನ ವೇಗದಲ್ಲಿ ಅಂಕ ಕಲೆಹಾಕಿತು. ಸೆಕೆಂಡ್ ಹಾಫ್ ಅಂತ್ಯದ ವೇಳೆಗೆ ಅಂತರ ಕಡಿಮೆಯಾಯಿತು. ಗೇರ್ ಬದಲಾಯಿಸಿದ ಪಾಟ್ನಾ, ಯು ಮುಂಬಾಗೆ ಶಾಕ್ ನೀಡಿತು. 19 ನೇ ನಿಮಿಷದಲ್ಲಿ ಪಾಟ್ನಾ 29-30 ಅಂಕ ಸಂಪಾದಿಸಿತು. ಈ ಮೂಲಕ 1 ಅಂಕ ಮಾತ್ರ ಹಿನ್ನಡೆಯಲ್ಲಿತ್ತು. ಅಂತಿಮ ನಿಮಿಷದಲ್ಲಿ ರೋಹಿತ್ ಬಲಿಯಾನ್ ಸೂಪರ್ ರೈಡ್ ಮೂಲಕ ಯು ಮುಂಬಾ 34-30 ಅಂಕಗಳ ಅಂತರದಲ್ಲಿ ಪಂದ್ಯ ಗೆದ್ದುಕೊಂಡಿತು.