ಹೈದರಾಬಾದ್(ಜು.22): ಪ್ರೋ ಕಬಡ್ಡಿ 7ನೇ ಆವೃತ್ತಿಯಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಶುಭಾರಂಭ ಮಾಡಿದೆ. ಬಲಿಷ್ಠ ಯು ಮುಂಬಾ ವಿರುದ್ಧ 42-23 ಅಂಕಗಳ ಅಂತರದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಗೆಲುವು ಸಾಧಿಸಿದೆ. ಈ ಸೋಲಿನೊಂದಿಗೆ ಯು ಮುಂಬಾ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿದರೆ, ಭರ್ಜರಿ ಗೆಲುವು ಸಾಧಿಸಿದ ಜೈಪುರ ಮೊದಲ ಸ್ಥಾನಕ್ಕೇರಿದೆ.

ಮೊದಲಾರ್ಧದ ಮೊದಲ ರೈಡ್‌ನಲ್ಲೇ 2 ಅಂಕ ಪಡೆದ ಜೈಪುರ ಭರ್ಜರಿಯಾಗಿ ಅಭಿಯಾನ ಆರಂಭಿಸಿತು. ಆರಂಭಿಕ 3 ನಿಮಿಷಗಳ ವರೆಗೆ ಅಂಕಕ್ಕಾಗಿ ಪರದಾಡಿದ ಯು ಮುಂಬಾ ಆರ್ಭಟಿಸಲಿಲ್ಲ. .ಯು ಮುಂಬಾ ಅಂಕಕ್ಕಾಗಿ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಮೊದಲಾರ್ಧದಲ್ಲಿ ಯು ಮುಂಬಾ ಗಳಿಸಿದ್ದು ಕೇವಲ 4 ಅಂಕ ಮಾತ್ರ.

ಫಸ್ಟ್ ಹಾಫ್ ಮುಕ್ತಾಯಕ್ಕೆ ಯು ಮುಂಬಾ 4-14 ಅಂಕಗಳ ಹಿನ್ನಡೆ ಅನುಭವಿಸಿತು. ದ್ವಿತಿಯಾರ್ಧದಲ್ಲೂ ಯು ಮುಂಬಾ ನಿರಾಸೆ ಅನುಭವಿಸಿತು. ಜೈಪುರ್ ಪಿಂಕ್ ಪ್ಯಾಂಥರ್ಸ್ ರೈಡ್ ಹಾಗೂ ಟ್ಯಾಕಲ್ ಮೂಲಕ ಹೆಚ್ಚು ಅಂಕಗಳಿಸಿತು. ಹೀಗಾಗಿ ಜೈಪುರ ಪಿಂಕ್ ಪ್ಯಾಂಥರ್ಸ್ 42-23 ಅಂಕಗಳ ಭರ್ಜರಿ ಗೆಲುವು ಸಾಧಿಸಿತು.