ಪ್ರೊ ಕಬಡ್ಡಿ ಟೂರ್ನಿ ದಿನದಿಂದ ದಿನಕ್ಕೆ ರೋಚಕ ಘಟ್ಟದತ್ತ ಸಾಗುತ್ತಿದೆ. ಬೆಂಗಾಲ್ ವಾರಿಯರ್ಸ್ ಹಾಗೂ ಯುಪಿ ಯೋಧಾ 2ನೇ ಬಾರಿಗೆ ಪಂದ್ಯವನ್ನ ಟೈ ಮಾಡಿಕೊಂಡರೆ, ಗುಜರಾತ್ ಸತತ 5ನೇ ಗೆಲುವು ಸಾಧಿಸಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್.
ಗ್ರೇಟರ್ ನೋಯ್ಡಾ(ನ.05): ಗುಜರಾತ್ ಫಾರ್ಚೂನ್ ಜೈಂಟ್ಸ್, ಪ್ರೊ ಕಬಡ್ಡಿ 6ನೇ ಆವೃತ್ತಿಯಲ್ಲಿ ಸತತ 5ನೇ ಗೆಲುವು ದಾಖಲಿಸಿದೆ. ಅತ್ತ ಡೆಲ್ಲಿ ಹ್ಯಾಟ್ರಿಕ್ ಸೋಲುಂಡು ನಿರಾಸೆ ಹೊಂದಿದೆ. ಇಲ್ಲಿನ ಶಾಹಿದ್ ವಿಜಯ್ ಸಿಂಗ್ ಕ್ರೀಡಾ ಸಮುಚ್ಛಯದಲ್ಲಿ ಭಾನುವಾರ ನಡೆದ ‘ಎ’ ವಲಯದ ಪಂದ್ಯದಲ್ಲಿ ಗುಜರಾತ್ ಫಾರ್ಚೂನ್ ಜೈಂಟ್ಸ್, ದಬಾಂಗ್ ಡೆಲ್ಲಿ ವಿರುದ್ಧ 45-38 ಅಂಕಗಳಿಂದ ಗೆಲುವು ಸಾಧಿಸಿತು.
ರೈಡರ್‌ಗಳ ಪ್ರಾಬಲ್ಯ: ಆರಂಭದಲ್ಲಿ ಆಕ್ರಮಣಾಕಾರಿ ಆಟಕ್ಕೆ ಮುಂದಾದ ಗುಜರಾತ್, ಡೆಲ್ಲಿ ಆಟಗಾರರ ಮೇಲೆ ಸವಾರಿ ಮಾಡಿತು. ಗುಜರಾತ್ ರೈಡರ್‌ಗಳ ಪ್ರಾಬಲ್ಯದಿಂದಾಗಿ ಡೆಲ್ಲಿ 4ನೇ ನಿಮಿಷದಲ್ಲಿ ಆಲೌಟ್ ಆಯಿತು. ಗುಜರಾತ್ 11-3ರಿಂದ ಮುನ್ನಡೆ ಸಾಧಿಸಿತು. ಬಳಿಕ ಎಚ್ಚೆತ್ತುಕೊಂಡ ಡೆಲ್ಲಿ, ಗುಜರಾತ್ ರೈಡರ್‌ಗಳನ್ನು ನಿಯಂತ್ರಿಸಲು ವಿಭಿನ್ನ ತಂತ್ರಗಾರಿಕೆ ಹೆಣೆದು ಅಂಕಗಳನ್ನು ಹೆಕ್ಕುವಲ್ಲಿ ಸಫಲವಾಯಿತು. 14ನೇ ನಿಮಿಷದಲ್ಲಿ ಗುಜರಾತ್ ತಂಡವನ್ನು ಆಲೌಟ್ ಮಾಡಿದ ಡೆಲ್ಲಿ ಅಂತರವನ್ನು 15-18ಕ್ಕೆ ಇಳಿಸಿಕೊಂಡಿತು. ಬಳಿಕ ಡಾಂಗ್ ಲೀ ಅದ್ಭುತ ಆಟದ ನೆರವಿನಿಂದ ಮೊದಲಾರ್ಧದ ಮುಕ್ತಾಯಕ್ಕೆ 1 ನಿಮಿಷ ಬಾಕಿ ಇದ್ದಾಗ ಡೆಲ್ಲಿಯನ್ನು 2ನೇ ಬಾರಿ ಆಲೌಟ್ ಮಾಡಿದ ಗುಜರಾತ್ ಮೊದಲಾರ್ಧದ ಮುಕ್ತಾಯಕ್ಕೆ 27-18ರಿಂದ ಭಾರೀ ಮುನ್ನಡೆ ಸಾಧಿಸಿತು.
ದ್ವಿತೀಯಾರ್ಧದಲ್ಲಿ ಸ್ವಲ್ಪ ಸುಧಾರಿತ ಪ್ರದರ್ಶನ ತೋರಿದ ಡೆಲ್ಲಿ 29ನೇ ನಿಮಿಷದಲ್ಲಿ ಗುಜರಾತ್ ತಂಡವನ್ನು 2ನೇ ಬಾರಿ ಆಲೌಟ್ ಮಾಡಿತು. ಆದರೆ ನಂತರದಲ್ಲಿ ಇದೇ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ಡೆಲ್ಲಿ ತಂಡ ವಿಫಲವಾಯಿತು. ಆಟದ ವೇಗವನ್ನು ನಿಯಂತ್ರಿಸಿದ ಗುಜರಾತ್, ಡೆಲ್ಲಿಗೆ ಅನವಶ್ಯಕವಾಗಿ ಅಂಕಗಳನ್ನು ಬಿಟ್ಟುಕೊಡಲಿಲ್ಲ. ಇದರ ಪರಿಣಾಮವಾಗಿ 7 ಅಂಕಗಳ ಅಂತರದ ಗೆಲುವು ಗುಜರಾತ್ ಪಾಲಾಯಿತು. 7 ಪಂದ್ಯಗಳಲ್ಲಿ 5 ಗೆಲುವು, 1 ಟೈನೊಂದಿಗೆ 29 ಅಂಕ ಪಡೆದಿರುವ ಗುಜರಾತ್, ‘ಎ’ ವಲಯದಲ್ಲಿ 3ನೇ ಸ್ಥಾನ ಪಡೆದರೆ, 7 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದಿರುವ ಡೆಲ್ಲಿ 17 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ.
ಟರ್ನಿಂಗ್ ಪಾಯಿಂಟ್: ಮೊದಲಾರ್ಧದಲ್ಲಿ 2 ಬಾರಿ ಆಲೌಟ್‌ಗೆ ಗುರಿಯಾದ ಡೆಲ್ಲಿ ತಂಡ ಮೊದಲ ಅವಧಿಯ ಅಂತ್ಯಕ್ಕೆ 9 ಅಂಕಗಳ ಹಿನ್ನಡೆ ಸಾಧಿಸಿತು. ಇದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಅಲ್ಲದೇ ಡಿಫೆಂಡರ್‌ಗಳಿಂದ ನಿರೀಕ್ಷಿತ ಪ್ರದರ್ಶನ ಹೊರಬರದೆ ಇರುವುದು ಸಹ ಡೆಲ್ಲಿಗೆ ಹಿನ್ನಡೆ ಉಂಟು ಮಾಡಿತು.
ಇನ್ನು ಬೆಂಗಾಲ್ ವಾರಿಯರ್ಸ್ ಹಾಗೂ ಯು.ಪಿ.ಯೋಧಾ ನಡುವೆ ಭಾನುವಾರ ನಡೆದ ಪಂದ್ಯ 30-30ರಲ್ಲಿ ಟೈಗೊಂಡಿತು. ಈ ಎರಡು ತಂಡಗಳ ನಡುವೆ ಅ.20ರಂದು ಪುಣೆಯಲ್ಲಿ ನಡೆದಿದ್ದ ಪಂದ್ಯ 40-40ರಲ್ಲಿ ಟೈಗೊಂಡಿತ್ತು. ಒಂದೇ ಆವೃತ್ತಿಯಲ್ಲಿ ಸತತ 2 ಬಾರಿ ಉಭಯ ತಂಡಗಳ ಮುಖಾಮುಖಿ ಟೈನಲ್ಲಿ ಅಂತ್ಯಗೊಂಡಿರುವುದು ವಿಶೇಷ.
ಮೊದಲಾರ್ಧದಲ್ಲಿ 12-11ರಿಂದ ಮುಂದಿದ್ದ ಬೆಂಗಾಲ್, 27ನೇ ನಿಮಿಷದಲ್ಲಿ ಆಲೌಟ್ ಆಗಿ 17-21ರ ಹಿನ್ನಡೆ ಅನುಭವಿಸಿತು. ಆದರೆ 33ನೇ ನಿಮಿಷದಲ್ಲಿ ಯೋಧಾ ಪಡೆಯನ್ನು ಆಲೌಟ್ ಮಾಡಿ ಬೆಂಗಾಲ್ ತಿರುಗಿಬಿತ್ತು.
ಧನಂಜಯ ಎಸ್. ಹಕಾರಿ
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 5, 2018, 9:37 AM IST