ತಮಿಳುನಾಡು ವಿರುದ್ಧ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಶತಕ ದಾಖಲಿಸುವುದರೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್‌ನ ಪದಾರ್ಪಣೆ ಪಂದ್ಯದಲ್ಲಿಯೇ ಈ ಸಾಧನೆ ಮಾಡಿದ ಇತರೆ ಮುಂಬೈ ಬ್ಯಾಟ್ಸ್‌ಮನ್‌ಗಳ ಜತೆಗೆ ಪೃಥ್ವಿ ಸೇರ್ಪಡೆಯಾದರು.

ರಾಜ್‌ಕೋಟ್(ಜ.05): ಇನ್ನೂ ಹದಿನೆಂಟು ದಾಟದ ನವೋತ್ಸಾಹಿ ತರುಣ ಪೃಥ್ವಿ ಶಾ (120) ಪದಾರ್ಪಣೆ ಪಂದ್ಯದಲ್ಲೇ ದಾಖಲಿಸಿದ ಚೊಚ್ಚಲ ಶತಕದ ನೆರವಿನೊಂದಿಗೆ ಹಾಲಿ ಚಾಂಪಿಯನ್ ಮುಂಬೈ ಪ್ರತಿಷ್ಠಿತ ರಣಜಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮತ್ತೊಮ್ಮೆ ಫೈನಲ್ ತಲುಪಿದೆ.

ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಮುಕ್ತಾಯ ಕಂಡ ಸೆಮಿಫೈನಲ್ ಪಂದ್ಯದಲ್ಲಿ ತಮಿಳುನಾಡನ್ನು 6 ವಿಕೆಟ್‌'ಗಳಿಂದ ಮಣಿಸಿದ ಮುಂಬೈ, ಭರ್ಜರಿ ಗೆಲುವಿನೊಂದಿಗೆ ದಾಖಲೆಯ 46ನೇ ಬಾರಿಗೆ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿತು. ಇದೇ 10ರಿಂದ ಇಂದೋರ್‌'ನ ಹೋಳ್ಕರ್ ಮೈದಾನದಲ್ಲಿ ನಡೆಯಲಿರುವ ಅಂತಿಮ ಸುತ್ತಿನ ಸೆಣಸಾಟದಲ್ಲಿ ಪ್ರಶಸ್ತಿಗಾಗಿ ಗುಜರಾತ್ ವಿರುದ್ಧ ಅದು ಸೆಣಸಲಿದೆ.

ಭರ್ಜರಿ ಜತೆಯಾಟ

ತಮಿಳುನಾಡು ನೀಡಿದ್ದ ಸ್ಪರ್ಧಾತ್ಮಕ ಗುರಿಯನ್ನು ಬೆಂಬತ್ತಿದ್ದ ಮುಂಬೈ ನಾಲ್ಕನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 5 ರನ್ ಗಳಿಸಿತ್ತು. ಕ್ರಮವಾಗಿ 2 ಮತ್ತು 3 ರನ್ ಗಳಿಸಿದ್ದ ಪೃಥ್ವಿ ಶಾ ಮತ್ತು ವಘೇಲಾ, ಕೊನೆಯ ದಿನದಂದು ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದರು. ಮೊದಲ ವಿಕೆಟ್‌'ಗೆ ಈ ಜೋಡಿ 90 ರನ್‌'ಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಯಿತು. ಇನ್ನಿಂಗ್ಸ್‌ನ 23ನೇ ಓವರ್‌'ನ ನಾಲ್ಕನೇ ಎಸೆತದಲ್ಲಿ ವಘೇಲಾ (36) ಬಾಬಾ ಅಪರಾಜಿತ್ ಬೌಲಿಂಗ್‌'ನಲ್ಲಿ ಶಂಕರ್‌'ಗೆ ಕ್ಯಾಚಿತ್ತು ಕ್ರೀಸ್ ತೊರೆದರೆ, ಬಳಿಕ ಬಂದ ಶ್ರೇಯಸ್ ಅಯ್ಯರ್ (40) ಕೂಡ ಪೃಥ್ವಿಗೆ ಅಮೋಘ ಸಾಥ್ ನೀಡಿದರು. ಅರ್ಧಶತಕದ ಅಂಚಿನಲ್ಲಿದ್ದ ಶ್ರೇಯಸ್ ಅಯ್ಯರ್ ಅವರನ್ನು ಶಂಕರ್ ಕ್ಲೀನ್‌'ಬೌಲ್ಡ್ ಮಾಡಿ ಮುಂಬೈಗೆ ಮತ್ತೊಂದು ಹೊಡೆತ ನೀಡಿದರು. ಎರಡನೇ ವಿಕೆಟ್‌ಗೆ ಶ್ರೇಯಸ್ ಅಯ್ಯರ್ ಜತೆಗೆ 91 ರನ್ ಜತೆಯಾಟವಾಡಿದ ಪೃಥ್ವಿ, ಅಯ್ಯರ್ ನಿರ್ಗಮನದ ಬಳಿಕ ಬಂದ ಸೂರ್ಯಕುಮಾರ್ ಯಾದವ್ (34) ಅವರೊಂದಿಗೆ 3ನೇ ವಿಕೆಟ್‌ಗೆ 57 ರನ್ ಕಲೆಹಾಕಿ ತಮಿಳುನಾಡು ಬೌಲರ್‌'ಗಳನ್ನು ಕಾಡಿದರಲ್ಲದೆ, ತಂಡವನ್ನು ಜಯದ ಅಂಚಿಗೆ ತಂದುನಿಲ್ಲಿಸಿ ಅಂತಿಮವಾಗಿ ಔಷಿಕ್ ಶ್ರೀನಿವಾಸ್ ಬೌಲಿಂಗ್‌'ನಲ್ಲಿ ನಟರಾಜನ್‌'ಗೆ ಕ್ಯಾಚಿತ್ತು ಕ್ರೀಸ್ ತೊರೆದರು. ಬಳಿಕ ನಾಯಕ ಆದಿತ್ಯ ತಾರೆ ಮತ್ತು ಸಿದ್ಧಾರ್ಥ್ ಲ್ಯಾಡ್ ಕ್ರಮವಾಗಿ 4 ಮತ್ತು 1 ರನ್ ಗಳಿಸಿ ಅಜೇಯರಾಗುಳಿದರು.

ದಾಖಲೆ ಬರೆದ ಪೃಥ್ವಿ

ತಮಿಳುನಾಡು ವಿರುದ್ಧ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಶತಕ ದಾಖಲಿಸುವುದರೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್‌ನ ಪದಾರ್ಪಣೆ ಪಂದ್ಯದಲ್ಲಿಯೇ ಈ ಸಾಧನೆ ಮಾಡಿದ ಇತರೆ ಮುಂಬೈ ಬ್ಯಾಟ್ಸ್‌ಮನ್‌ಗಳ ಜತೆಗೆ ಪೃಥ್ವಿ ಸೇರ್ಪಡೆಯಾದರು. 17 ವರ್ಷ, 57 ದಿನಗಳನ್ನು ಪೂರೈಸಿರುವ ಪೃಥ್ವಿ, ಶತಕ ಪೂರೈಸಲು 152 ಎಸೆತಗಳನ್ನು ತೆಗೆದುಕೊಂಡರು. ಇದರೊಂದಿಗೆ ಸಚಿನ್ ತೆಂಡೂಲ್ಕರ್, ಅಮೋಲ್ ಮುಜುಂದಾರ್, ಅಜಿಂಕ್ಯ ರಹಾನೆ, ಜತಿನ್ ಪರಾಂಜಪೆ ಹಾಗೂ ಸಮೀರ್ ದಿಘೆ ಅವರ ಸಾಧನೆ ಸರಿಗಟ್ಟಿದರಲ್ಲದೆ, ಪದಾರ್ಪಣೆ ಪಂದ್ಯದಲ್ಲೇ ರಣಜಿಯಲ್ಲಿ ಶತಕ ಬಾರಿಸಿದ 14ನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಸ್ಕೋರ್ ವಿವರ

ತಮಿಳುನಾಡು ಮೊದಲ ಇನ್ನಿಂಗ್ಸ್: 305

ಮುಂಬೈ ಮೊದಲ ಇನ್ನಿಂಗ್ಸ್: 411

ತಮಿಳುನಾಡು ದ್ವಿತೀಯ ಇನ್ನಿಂಗ್ಸ್: 356/6 (ಡಿಕ್ಲೇರ್)

ಮುಂಬೈ ದ್ವಿತೀಯ ಇನ್ನಿಂಗ್ಸ್: 4 ವಿಕೆಟ್‌ಗೆ 251

ಫಲಿತಾಂಶ: ಮುಂಬೈಗೆ 6 ವಿಕೆಟ್ ಗೆಲುವು

ಪಂದ್ಯಶ್ರೇಷ್ಠ: ಪೃಥ್ವಿ ಶಾ