Asianet Suvarna News Asianet Suvarna News

Commonwealth Games ಸಾಧಕರಿಗಿಂದು ಪ್ರಧಾನಿ ಮೋದಿ ಔತಣ

ಕಾಮನ್‌ವೆಲ್ತ್ ಗೇಮ್ಸ್ ಪದಕ ಸಾಧಕರೊಂದಿಗೆ ಪ್ರಧಾನಿ ಮೋದಿ ಸಮಾಲೋಚನೆ
ತಮ್ಮದೇ ನಿವಾಸದಲ್ಲಿ ಸಾಧಕರನ್ನು ಭೇಟಿ ಮಾಡಲಿರುವ ಪ್ರಧಾನಿ ಮೋದಿ
ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನ ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದ ಭಾರತ

PM Narendra Modi to interact with India Commonwealth Games 2022 contingent on August 13 kvn
Author
Bengaluru, First Published Aug 13, 2022, 10:56 AM IST

ನವದೆಹಲಿ(ಆ.13): ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಸಾಧನೆ ಮಾಡಿದ ಭಾರತೀಯ ಕ್ರೀಡಾಪಟುಗಳಿಗೆ ಶನಿವಾರವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಔತಣಕೂಟ ಏರ್ಪಡಿಸಿದ್ದಾರೆ. ಈ ಕುರಿತಂತೆ ಪ್ರಧಾನಿ ಮೋದಿ ಶುಕ್ರವಾರ ಟ್ವೀಟ್ ಮಾಡಿದ್ದು, 'ಕ್ರೀಡಾಕೂಟದಲ್ಲಿ ನಮ್ಮ ಅಥ್ಲೀಟ್‌ಗಳ ಸಾಧನೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಶನಿವಾರ 11 ಗಂಟೆಗೆ ನನ್ನ ನಿವಾಸದಲ್ಲಿ ಕ್ರೀಡಾಪಟುಗಳ ಜತೆ ಸಮಾಲೋಚನೆ ನಡೆಸಲಿದ್ದೇನೆ ಎಂದು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಮುಕ್ತಾಯವಾದ ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಭಾರತ 22 ಚಿನ್ನ ಸೇರಿದಂತೆ ಒಟ್ಟು 61 ಪದಕಗಳನ್ನು ಗೆದ್ದು, ಒಟ್ಟಾರೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು. ಈ ಮೊದಲು ಭಾರತದ ಪ್ರತಿಯೊಬ್ಬ ಪದಕ ವಿಜೇತರನ್ನು ಮೋದಿಯವರು ಟ್ವೀಟ್‌ ಮಾಡಿ ಅಭಿನಂದಿಸಿದ್ದರು. ಈ ಹಿಂದೆ ಪ್ರಧಾನಿ ಮೋದಿ ಟೋಕಿಯೋ ಒಲಿಂಪಿಕ್ಸ್‌ ಹಾಗೂ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಕ್ರೀಡಾಪಟುಗಳನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿ ಔತಣ ನೀಡಿದ್ದರು.

ಈ ಹಿಂದೆ ಒಲಿಂಪಿಯನ್‌ಗಳು ಮೋದಿಯವರಿಗೆ ನೆನಪಿನ ಕಾಣಿಕೆ ನೀಡಿದ್ದರು. ಇನ್ನು ಶನಿವಾರದ ಕಾರ್ಯಕ್ರಮದ ವೇಳೆಯಲ್ಲಿಯೂ ಕೆಲ ಕ್ರೀಡಾಪಟುಗಳು ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ತಾವು ಉಪಯೋಗಿಸಿದ ಪರಿಕರಗಳನ್ನು ನೆನಪಿನ ಕಾಣಿಕೆಯಾಗಿ ಪ್ರಧಾನಿಗೆ ನೀಡುವ ನಿರೀಕ್ಷೆಯಿದೆ.

ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್‌: ಮಂಡ್ಯ ಬುಲ್ಸ್‌ ಶುಭಾರಂಭ

ಬೆಂಗಳೂರು: ಚೊಚ್ಚಲ ಆವೃತ್ತಿಯ ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್‌ ಲೀಗ್‌ಗೆ ಶುಕ್ರವಾರ ನಗರದ ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆಯಲ್ಲಿ ಚಾಲನೆ ದೊರೆಯಿತು. ರಾಜ್ಯ ಸರ್ಕಾರದ ಐಟಿ, ಬಿಟಿ ಸಚಿವ ಅಶ್ವಥ್‌ ನಾರಾಯಣ್‌ ಅವರು ಬ್ಯಾಡ್ಮಿಂಟನ್‌ ಆಡುವ ಮೂಲಕ ಟೂರ್ನಿಗೆ ಚಾಲನೆ ನೀಡಿದರು.

ರೇಸಿಂಗ್‌ ಟ್ರ್ಯಾಕ್‌ನ ಹೊಸ ಭರವಸೆ ಅನೀಶ್ ಶೆಟ್ಟಿ

ಉದ್ಘಾಟನಾ ಪಂದ್ಯದಲ್ಲಿ ಮಂಡ್ಯ ಬುಲ್ಸ್‌ ತಂಡ ಬಂಡೀಪುರ ಟಸ್ಕ​ರ್‍ಸ್ ವಿರುದ್ಧ 7-0 ಅಂತರದಲ್ಲಿ ಗೆಲುವು ಸಾಧಿಸಿತು. ಮಹಿಳಾ ಸಿಂಗಲ್ಸ್‌ನಲ್ಲಿ ಬಂಡೀಪುರ ಗೆದ್ದರೂ, ಬಳಿಕ ಪುರುಷರ ಡಬಲ್ಸ್‌, ಪುರುಷರ ಸಿಂಗಲ್ಸ್‌, ಮಿಶ್ರ ಡಬಲ್ಸ್‌ ಹಾಗೂ ಸೂಪರ್‌ ಮ್ಯಾಚ್‌ನಲ್ಲಿ ಮಂಡ್ಯದ ಶಟ್ಲರ್‌ಗಳು ಗೆಲುವು ಸಾಧಿಸಿದರು. ಮಂಡ್ಯ ಮಹಿಳಾ ಸಿಂಗಲ್ಸ್‌ನಲ್ಲಿ ಗಳಿಸಿದ್ದ 1 ಅಂಕ ಟ್ರಂಪ್‌ ಪಂದ್ಯದಲ್ಲಿ ಸೋಲುವ ಮೂಲಕ ಕಳೆದುಕೊಂಡಿತು.

ರಾಷ್ಟ್ರೀಯ ಗೇಮ್ಸ್‌ ಟೆನಿಸ್‌: ಕರ್ನಾಟಕ ತಂಡ ಪ್ರಕಟ

ಬೆಂಗಳೂರು: ಸೆ.27ಕ್ಕೆ ಗುಜರಾತ್‌ನಲ್ಲಿ ಆರಂಭವಾಗಲಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಕರ್ನಾಟಕ ಟೆನಿಸ್‌ ತಂಡ ಪ್ರಕಟಗೊಂಡಿದೆ. ಪುರುಷರ ತಂಡಕ್ಕೆ ಪ್ರಜ್ವಲ್‌ ದೇವ್‌, ರಿಶಿ ರೆಡ್ಡಿ, ಆದಿಲ್‌ ಕಲ್ಯಾಣ್‌ಪುರ, ಮನೀಶ್‌, ರಶೀನ್‌ ಸ್ಯಾಮುಯೆಲ್‌ ಆಯ್ಕೆಯಾಗಿದ್ದು, ಸೂರಜ್‌ ಪ್ರಬೋಧ್‌, ತಥಾಗತ್‌ ಚರಂತಿಮಠ ಮೀಸಲು ಆಟಗಾರರಾಗಿ ತಂಡದ ಜೊತೆಗಿರಲಿದ್ದಾರೆ. ಮಹಿಳಾ ತಂಡದಲ್ಲಿ ಶರ್ಮದಾ ಬಾಲು, ಸೋಹಾ ಸಾದಿಕ್‌, ವಿದುಲಾ ಅಮರ್‌, ವನ್ಶಿತಾ ಪಠಾನಿಯಾ, ರೇಶ್ಮಾ ಮರೂರಿ ಇದ್ದು, ಪ್ರತಿಭಾ ಪ್ರಸಾದ್‌, ಶ್ರೀನಿಧಿ ಮೀಸಲು ಆಟಗಾರ್ತಿಯರಾಗಿ ಆಯ್ಕೆಯಾಗಿದ್ದಾರೆ.

Follow Us:
Download App:
  • android
  • ios