ಇಂದಿನಿಂದ ಖೇಲೋ ಇಂಡಿಯಾ ಆರಂಭ
ಇಲ್ಲಿನ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ದೇಶದಲ್ಲಿ ಕ್ರೀಡಾ ಕ್ರಾಂತಿ ನಡೆಸಲು ಖೇಲೋ ಇಂಡಿಯಾ ಆರಂಭಿಸಲಾಗುತ್ತಿದ್ದು, ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ 1000 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗುತ್ತದೆ.
ನವದೆಹಲಿ(ಜ.31): ತೆರೆಮರೆಯಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರ ಕೈಗೊಂಡಿರುವ ಮಹತ್ವಾಕಾಂಕ್ಷಿ ಯೋಜನೆ ‘ಖೇಲೋ ಇಂಡಿಯಾ’ದ ಚೊಚ್ಚಲ ಆವೃತ್ತಿ ಬುಧವಾರದಿಂದ ಆರಂಭಗೊಳ್ಳಲಿದೆ. ಫೆ.8ರ ವರೆಗೂ ನಡೆಯಲಿರುವ ಅಂಡರ್-17 ಕ್ರೀಡಾಕೂಟದಲ್ಲಿ ದೇಶದ ವಿವಿಧ ರಾಜ್ಯಗಳ ಸುಮಾರು 5000 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದು, 16 ಕ್ರೀಡೆಗಳ ವಿವಿಧ ವಿಭಾಗಗಳಲ್ಲಿ ತಮ್ಮ ಪ್ರತಿಭಾ ಪ್ರದರ್ಶನ ತೋರಲಿರುವ ಕ್ರೀಡಾಪಟುಗಳಿಗೆ ಒಟ್ಟು 650ಕ್ಕೂ ಹೆಚ್ಚಿನ ಪದಕಗಳನ್ನು ಗೆಲ್ಲುವ ಅವಕಾಶವಿದೆ.
ಇಲ್ಲಿನ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ದೇಶದಲ್ಲಿ ಕ್ರೀಡಾ ಕ್ರಾಂತಿ ನಡೆಸಲು ಖೇಲೋ ಇಂಡಿಯಾ ಆರಂಭಿಸಲಾಗುತ್ತಿದ್ದು, ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ 1000 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಕ್ರೀಡಾಪಟುಗಳಿಗೆ ಕೇಂದ್ರ ಸರ್ಕಾರ 8 ವರ್ಷಗಳ ಕಾಲ ವಾರ್ಷಿಕ ₹5 ಲಕ್ಷ ಆರ್ಥಿಕ ನೆರವು ನೀಡಲಿದ್ದು, ಮುಂದಿನ ವರ್ಷದಿಂದ ಮತ್ತಷ್ಟು ಕ್ರೀಡಾ ಪಟುಗಳು ಈ ಯೋಜನೆಯಡಿ ಸೇರ್ಪಡೆಗೊಳ್ಳಲಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಕ್ರೀಡಾಪಟುಗಳಿಗೆ ಹೆಚ್ಚಿನ ಆರ್ಥಿಕ ನೆರವು ನೀಡುವುದಾಗಿಯೂ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
16 ಕ್ರೀಡೆಗಳು ಯಾವ್ಯಾವು?
ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಈಜು, ಶೂಟಿಂಗ್, ಬಾಸ್ಕೆಟ್'ಬಾಲ್, ಫುಟ್ಬಾಲ್, ಹಾಕಿ, ಕಬಡ್ಡಿ, ಖೋ-ಖೋ, ವಾಲಿಬಾಲ್, ಕುಸ್ತಿ, ವೇಟ್'ಲಿಫ್ಟಿಂಗ್, ಜುಡೋ ಹಾಗೂ ಜಿಮ್ನಾಸ್ಟಿಕ್ಸ್.
ನಾಡಾದಿಂದ ಡೋಪಿಂಗ್ ಪರೀಕ್ಷೆ
ಶಾಲಾ ಮಟ್ಟದಲ್ಲೇ ಉದ್ದೀಪನಾ ಸೇವನೆಗೆ ತಡೆಯೊಡ್ಡಲು ಕೇಂದ್ರ ಕ್ರೀಡಾ ಇಲಾಖೆ ಮುಂದಾಗಿದ್ದು, ರಾಷ್ಟ್ರೀಯ ಉದ್ದೀಪನಾ ಸೇವನೆ ನಿಗ್ರಹ ಘಟಕ (ನಾಡಾ) ಇದಕ್ಕೆ ಸಹಕರಿಸಲಿದೆ. ‘ಖೇಲೋ ಇಂಡಿಯಾ’ ಕ್ರೀಡಾಕೂಟದ ವೇಳೆ ನಾಡಾ ಕನಿಷ್ಠ 500 ಕ್ರೀಡಾಪಟುಗಳನ್ನು ಡೋಪಿಂಗ್ ಪರೀಕ್ಷೆಗೆ ಒಳಪಡಿಸಲಿದೆ. ಇದರೊಂದಿಗೆ ಉದ್ದೀಪನಾ ಸೇವನೆಯಿಂದ ಎದುರಾಗುವ ಸಮಸ್ಯೆಗಳು, ಕ್ರೀಡಾ ಔಷಧಿಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಬಗ್ಗೆ ಜಾಗೃತಿ ಮೂಡಿಸಲಿದೆ.