ಕಿರಿಯರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಭಾರತ ಒಟ್ಟು 13 ಪದಕ ಗೆದ್ದು ಸಾಧನೆ ಮಾಡಿತ್ತು. ಇದೀಗ ತವರಿಗೆ ಆಗಮಿಸಿರುವ ಯೂಥ್ ಒಲಿಂಪಿಕ್ಸ್ ಪದಕ ವಿಜೇತರನ್ನ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ.
ನವದೆಹಲಿ(ಅ.22): ಭಾರತದ ಪ್ರಧಾನಿ ನರೇಂದ್ರ ಮೋದಿ, ಭಾನುವಾರ ಯೂತ್ ಒಲಿಂಪಿಕ್ ಗೇಮ್ಸ್ ಪದಕ ವಿಜೇತ ಅಥ್ಲೀಟ್‌ಗಳನ್ನು ಭೇಟಿಯಾಗಿ, ಸಂವಾದ ನಡೆಸಿದರು. ಯೂತ್ ಒಲಿಂಪಿಕ್ಸ್ ಪದಕ ವಿಜೇತ ಶೂಟರ್ 16 ವರ್ಷದ ಮನು ಭಾಕರ್ ಮತ್ತು ಬೆಳ್ಳಿ ಗೆದ್ದ ಪುರುಷ ಮತ್ತು ಮಹಿಳಾ ಹಾಕಿ ಪಟುಗಳೊಂದಿಗೆ ತೆಗೆದುಕೊಂಡಿರುವ ಫೋಟೋವನ್ನು ಪ್ರಧಾನಿ ಮೋದಿ, ತಮ್ಮ ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
‘ನಮ್ಮ ಯುವ ಶಕ್ತಿಯಿಂದ ಹೆಮ್ಮೆ ಎನಿಸುತ್ತಿದೆ. ಇತ್ತೀಚೆಗಷ್ಟೇ ಬ್ಯೂನಸ್ ಐರಿಸ್‌ನಲ್ಲಿ ನಡೆದ ಯೂತ್ ಒಲಿಂಪಿಕ್ ಗೇಮ್ಸ್‌ನಲ್ಲಿ ಪದಕ ಗೆದ್ದ ಅಥ್ಲೀಟ್‌ಗಳೊಂದಿಗೆ ಸಂವಾದ ನಡೆಸಲಾಯಿತು’ ಎಂದು ಮೋದಿ ಶೀರ್ಷಿಕೆ ಹಾಕಿದ್ದಾರೆ.
ಯೂತ್ ಒಲಿಂಪಿಕ್ ಗೇಮ್ಸ್ ಆರಂಭವಾಗಿದ್ದು 2010 ರಲ್ಲಿ. ಆದರೆ ಭಾರತ ಇದೇ ಮೊದಲ ಬಾರಿಗೆ 13 ಪದಕಗಳನ್ನು ಜಯಿಸಿದ್ದು, ಇದರಲ್ಲಿ 3 ಚಿನ್ನ, 9
ಬೆಳ್ಳಿ ಮತ್ತು 1 ಕಂಚಿನ ಪದಕಗಳಿವೆ. ಯೂತ್ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಇದು ಭಾರತದ ಶ್ರೇಷ್ಠ ಪ್ರದರ್ಶನವಾಗಿದೆ.
