ಜಪಾನ್ನ ಏಷ್ಯನ್ ಗೇಮ್ಸ್ನಲ್ಲಿ 85 ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳನ್ನು ಪ್ರಧಾನಿ ನರೇಂದ್ರ ಮೋದಿ ನವದೆಹಲಿಯಲ್ಲಿ ಸನ್ಮಾನಿಸಿದರು. ಮಹಿಳಾ ಕ್ರೀಡಾಪಟುಗಳ ಸಾಧನೆಯನ್ನು ವಿಶೇಷವಾಗಿ ಶ್ಲಾಘಿಸಿದ ಅವರು, 2036ರ ಒಲಿಂಪಿಕ್ಸ್ ಆಯೋಜನೆಗೆ ಭಾರತ ಬಿಡ್ ಸಲ್ಲಿಸುವ ಸಂಕಲ್ಪವನ್ನು ಪ್ರಕಟಿಸಿದರು.
ನವದೆಹಲಿ: ಇತ್ತೀಚೆಗಷ್ಟೇ ಜಪಾನ್ನ ಏಷ್ಯನ್ ಗೇಮ್ಸ್ನಲ್ಲಿ ಪದಕ ಸಾಧನೆ ಮಾಡಿದ ಭಾರತೀಯ ಕ್ರೀಡಾಪಟುಗಳನ್ನು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ಮೇಜರ್ ಧ್ಯಾನಚಂದ್ ಸ್ಟೇಡಿಯಂನಲ್ಲಿ ಭೇಟಿಯಾದರು. ಭಾರತದ ಹೆಮ್ಮೆಯ ಕ್ರೀಡಾಪಟುಗಳನ್ನು ಸನ್ಮಾನಿಸಿದ ಮೋದಿ, ಅವರ ಸಾಧನೆಯನ್ನು ಕೊಂಡಾಡಿದರು. ಅವರ ಜೊತೆ ಕೆಲಕಾಲ ಸಂವಾದವನ್ನೂ ನಡೆಸಿದರು.
ಭಾರತವು ಜಪಾನ್ನ ಐಚಿ-ನಗೋಯಾ ಗೇಮ್ಸ್ನಲ್ಲಿ 21 ಚಿನ್ನ, 27 ಬೆಳ್ಳಿ, 37 ಕಂಚು ಸೇರಿ ಒಟ್ಟು 85 ಪದಕ ಗೆದ್ದು ನಾಲ್ಕನೇ ಸ್ಥಾನ ಪಡೆದಿತ್ತು. ಕಳೆದ ಏಷ್ಯಾಡ್ನಲ್ಲಿ ಭಾರತಕ್ಕೆ 107 ಪದಕ ಲಭಿಸಿತ್ತು. ಈ ಬಾರಿ ಪದಕ ಕಮ್ಮಿಯಾದರೂ ಹಲವು ಐತಿಹಾಸಿಕ ಸಾಧನೆಗಳನ್ನು ಭಾರತೀಯರು ಮಾಡಿದ್ದರು. ಈ ಬಗ್ಗೆ ಕೊಂಡಾಡಿದ ಮೋದಿ, ‘ನೀವು 140 ಕೋಟಿ ಭಾರತೀಯರನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ. ಅತ್ಯಂತ ದೊಡ್ಡ ಯಶಸ್ಸು ಎಂದರೆ ತ್ರಿವರ್ಣ ಧ್ವಜವನ್ನು ಎತ್ತರಕ್ಕೆ ಹಾರಿಸುವುದು. ಆದ್ದರಿಂದ ನಿಮ್ಮ ಯಶಸ್ಸು ನಿಮ್ಮದಷ್ಟೇ ಅಲ್ಲ, ಕೋಟ್ಯಂತರ ದೇಶಬಾಂಧವರದ್ದು. ಇಡೀ ದೇಶದ ಪರವಾಗಿ ನಾನು ನಿಮಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ’ ಎಂದರು.
‘ಇಷ್ಟೊಂದು ಪದಕ ವಿಜೇತರ ಮಧ್ಯೆ ಇರುವುದು ನನಗೆ ಶಕ್ತಿ ತುಂಬುತ್ತದೆ. ನಮ್ಮ ಮಹಿಳಾ ಕ್ರೀಡಾಪಟುಗಳನ್ನು ನಾನು ವಿಶೇಷವಾಗಿ ಅಭಿನಂದಿಸಲು ಬಯಸುತ್ತೇನೆ. ಭಾರತ ಗೆದ್ದ 85 ಪದಕಗಳಲ್ಲಿ 38 ಪದಕಗಳನ್ನು ಮಹಿಳೆಯರು ಗೆದ್ದಿದ್ದಾರೆ. ಅದರಲ್ಲಿ 11 ಚಿನ್ನದ ಪದಕಗಳೂ ಸೇರಿವೆ. ಈ ಪದಕಗಳು ಕೇವಲ ಸಂಖ್ಯೆಗಳಲ್ಲ. ಇವು ನವ ಭಾರತದ ಪ್ರಬಲ ಚಿತ್ರಣ’ ಎಂದು ಶ್ಲಾಘನೆ ವ್ಯಕ್ತಪಡಿಸಿದರು. ಅಲ್ಲದೆ, ಮಹಿಳಾ ಹಾಕಿ ತಂಡಕ್ಕೆ 44 ವರ್ಷಗಳ ಬಳಿಕ ಚಿನ್ನ, ಕೆಲ ಹೊಸ ಕ್ರೀಡೆಗಳಲ್ಲಿ (ಸಾಫ್ಟ್ ಟೆನಿಸ್, ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ಇತ್ಯಾದಿ) ಮೊದಲ ಬಾರಿಗೆ ಪದಕ ಗೆದ್ದಿದ್ದನ್ನು ಪ್ರಧಾನಿ ಶ್ಲಾಘಿಸಿದರು. ಭಾರತದ ಕೋಚ್ಗಳು, ಸಹಾಯಕ ಸಿಬ್ಬಂದಿ ಮತ್ತು ಕುಟುಂಬಗಳಿಗೂ ಅಭಿನಂದನೆ ಸಲ್ಲಿಸಿದರು.
ನೂರಾರು ಅಥ್ಲೀಟ್ಸ್:
ಸಮಾರಂಭದಲ್ಲಿ ಭಾರತದ ನೂರಾರು ಅಥ್ಲೀಟ್ಗಳು ಭಾಗಿಯಾದರು. ಚಿನ್ನ ವಿಜೇತ ಭಾರತ ಪುರುಷರ ಕ್ರಿಕೆಟ್ ತಂಡದಲ್ಲಿದ್ದ ಶ್ರೇಯಸ್ ಅಯ್ಯರ್, ಬೂಮ್ರಾ, ವೈಭವ್, ಅಭಿಷೇಕ್, ತಿಲಕ್, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶಿವಂ ದುಬೆ, ಮಹಿಳಾ ತಂಡದ ಹರ್ಮನ್ಪ್ರೀತ್ ಕೌರ್, ಸ್ಮೃತಿ ಮಂಧನಾ, ಶಫಾಲಿ ವರ್ಮಾ, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಹಾಕಿ ತಂಡಗಳು, ಬಾಕ್ಸಿಂಗ್, ಕುಸ್ತಿ, ಗಾಲ್ಫ್, ವೇಟ್ಲಿಫ್ಟಿಂಗ್, ಕಬಡ್ಡಿ ಸೇರಿದಂತೆ ಎಲ್ಲಾ ಕ್ರೀಡೆಗಳ ಬಹುತೇಕ ಪದಕ ಸಾಧಕರು ಸಮಾರಂಭದಲ್ಲಿ ಹಾಜರಿದ್ದರು.
ಗಣ್ಯರು ಭಾಗಿ:
ಸಮಾರಂಭದಲ್ಲಿ ಕೆಲ ಗಣ್ಯರೂ ಭಾಗಿಯಾದರು. ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ, ಭಾರತ ಒಲಿಂಪಿಕ್ ಸಂಸ್ಥೆ ಮುಖ್ಯಸ್ಥೆ ಪಿ.ಟಿ.ಉಷಾ, ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ) ಅಧ್ಯಕ್ಷ ಜಯ್ ಶಾ ಸೇರಿ ಪ್ರಮುಖರು ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
-- ಮೋದಿಗೆ ಜೆರ್ಸಿ, ಹಾಕಿ ಸ್ಟಿಕ್, ಬಿಲ್ಲು, ಗ್ಲೌಸ್, ರ್ಯಾಕೆಟ್ ಉಡುಗೊರೆ
ಸಮಾರಂಭದಲ್ಲಿ ಪ್ರಧಾನಿ ಮೋದಿ ಪುರುಷ ಮತ್ತು ಮಹಿಳಾ ಹಾಕಿ ತಂಡಗಳು ಜರ್ಸಿ ಮತ್ತು ಹಾಕಿ ಸ್ಟಿಕ್ ನೀಡಿ ಗೌರವಿಸಿದವು. 17 ವರ್ಷದ ಆರ್ಚರಿ ಪಟು ಕುಂಕುಂ ಮೊಹೋಡ್ ಪ್ರಧಾನಿಗೆ ಬಿಲ್ಲು ನೀಡಿದರು. ಮೈಸೂರಿನ ಗಾಲ್ಫ್ ತಾರೆ ಪ್ರಣವಿ ಅರಸ್, ಫ್ರೇಮ್ನಲ್ಲಿ ಗಾಲ್ಫ್ ಗ್ಲೌಸ್ ಹಾಗೂ ಚೆಂಡನ್ನು ಮೋದಿಗೆ ಉಡುಗೊರೆಯಾಗಿ ನೀಡಿದರು.
-- 2036ರ ಒಲಿಂಪಿಕ್ಸ್ ಆಯೋಜನೆ ನಮ್ಮ ಸಂಕಲ್ಪ: ಪ್ರಧಾನಿ ಮೋದಿ
ಸಮಾರಂಭದಲ್ಲಿ ಮೋದಿ, ಭಾರತದ ಗುರಿ ಹಾಗೂ ಅಂತಾರಾಷ್ಟ್ರೀಯ ಕ್ರೀಡಾ ಕಾರ್ಯಕ್ರಮಗಳ ಬಗ್ಗೆಯೂ ಮಾತನಾಡಿದರು. ಭಾರತ 2036ರ ಒಲಿಂಪಿಕ್ಸ್ಗೆ ಬಿಡ್ ಸಲ್ಲಿಸಲಿದೆ ಮತ್ತು ಕ್ರೀಡಾಕೂಟ ಆಯೋಜಿಸುವುದು ನಮ್ಮ ಸಂಕಲ್ಪ ಎಂದರು.
‘ಸಂಕಲ್ಪ ಮತ್ತು ಕನಸುಗಳು ಒಂದೇ ದಿನದಲ್ಲಿ ಪೂರೈಸುವುದಿಲ್ಲ. ಅದಕ್ಕೆ ವರ್ಷಗಳ ಕಠಿಣ ಪರಿಶ್ರಮ ಬೇಕು. ಕಳೆದ 12 ವರ್ಷಗಳಲ್ಲಿ ಭಾರತ ತಾಳ್ಮೆಯಿಂದ ಕ್ರೀಡಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸಿದೆ. ಒಂದು ಕಾಲದಲ್ಲಿ ಭಾರತ ದೊಡ್ಡ ಕ್ರೀಡಾಕೂಟಗಳಲ್ಲಿ ಬಹಳ ಕಡಿಮೆ ಪದಕಗಳನ್ನು ಗೆಲ್ಲುತ್ತಿತ್ತು. ದೇಶಕ್ಕೆ ಅಂದು ಅನೇಕ ಕ್ರೀಡೆಗಳ ಪರಿಚಯವೇ ಇರಲಿಲ್ಲ. ಅದನ್ನು ಕೊನೆಗಾಣಿಸಲು ನಾವು ದೃಢ ನಿರ್ಧಾರ ಕೈಗೊಂಡೆವು. ಅದರ ಫಲಿತಾಂಶವೇ ಇಂದು ಜಾಗತಿಕ ವೇದಿಕೆಯಲ್ಲಿ ಹೆಚ್ಚುತ್ತಿರುವ ನಮ್ಮ ಪ್ರಾತಿನಿಧ್ಯ. ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಹಿಂದೆಂದೂ ಪದಕ ಗೆದ್ದಿರದ ಕ್ರೀಡೆಗಳಲ್ಲಿಯೂ ಇಂದು ಭಾರತ ಪದಕಗಳನ್ನು ಗೆಲ್ಲುತ್ತಿದೆ. ಕ್ರೀಡಾ ಕ್ಷೇತ್ರದಲ್ಲಿ ಈಗ ಪಾರದರ್ಶಕ ವ್ಯವಸ್ಥೆ ಜಾರಿಯಲ್ಲಿದೆ’ ಎಂದು ಶ್ಲಾಘಿಸಿದರು.
ಅಲ್ಲದೆ, ಕ್ರೀಡಾಪಟುಗಳು ತಮ್ಮ ಹಳ್ಳಿಗಳ ಶಾಲೆಗಳಿಗೆ ಹೋಗಿ, ತಾವು ಆಡಲು ಪ್ರಾರಂಭಿಸಿದ ಮೈದಾನಗಳಿಗೆ ಹಿಂತಿರುಗಿ ಮಕ್ಕಳನ್ನು ಪ್ರೇರೇಪಿಸಬೇಕು ಎಂದು ಹೇಳಿದರು.
ಅಥ್ಲೀಟ್ಸ್ ಜತೆ ವಿ ವಿಲ್ ಡು ಇಟ್ ಎಂದು ಮೋದಿ
ಭಾರತ ಕ್ರೀಡೆಯಲ್ಲಿ ಇಟ್ಟುಕೊಂಡಿರುವ ಗುರಿಗಳ ಬಗ್ಗೆ ದೃಢವಾದ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಕ್ರೀಡಾಪಟುಗಳೊಂದಿಗೆ ಸೇರಿ ‘ವಿ ವಿಲ್ ಡು ಇಟ್’ (ನಾವು ಇದನ್ನು ಸಾಧಿಸುತ್ತೇವೆ) ಎಂದು ಘೋಷಿಸಿದರು. ಪ್ರಮುಖ ಜಾಗತಿಕ ಕ್ರೀಡಾಕೂಟದ ಆಯೋಜಿಸುವುದು, ಅಗ್ರಗಣ್ಯ ಕ್ರೀಡಾ ರಾಷ್ಟ್ರಗಳ ಸಾಲಿಗೆ ಸೇರುವುದು, ವಿಶ್ವದರ್ಜೆಯ ಮೂಲಸೌಕರ್ಯ ನಿರ್ಮಿಸುವುದು ಮತ್ತು ಜಾಗತಿಕ ಕ್ರೀಡಾ ಕೇಂದ್ರವಾಗಿ ಹೊರಹೊಮ್ಮುವುದು ಎಂಬ ಗುರಿಗಳ ಬಗ್ಗೆ ಅವರು ಕ್ರೀಡಾಪಟುಗಳ ಜೊತೆ ಮಾತನಾಡಿದರು.


