ಪಾಟ್ನಾ ಮಣಿಸಿ ಹಾಲಿ ಚಾಂಪಿಯನ್ ಬೆಂಗಳೂರು ಶುಭಾರಂಭ!
ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ 7ನೇ ಆವೃತ್ತಿ ಪ್ರೊಕಬಡ್ಡಿಯಲ್ಲಿ ಪರಾಕ್ರಮ ಮೆರೆದಿದೆ. ಚಾಂಪಿಯನ್ ಆಟವಾಡಿದ ಬುಲ್ಸ್, ಪಾಟ್ನಾಗೆ ಶಾಕ್ ನೀಡಿ ಗೆಲುವು ಸಾಧಿಸಿದೆ.
ಹೈದರಾಬಾದ್(ಜು.20): ಪ್ರೋ ಕಬಡ್ಡಿ 7ನೇ ಆವೃತ್ತಿಯಲ್ಲೂ ಬೆಂಗಳೂರು ಬುಲ್ಸ್ ಆರ್ಭಟ ಮುಂದುವರಿದಿದೆ. ಪಾಟ್ನಾ ಪೈರೇಟ್ಸ್ ವಿರುದ್ದದ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿದ್ದ ಬೆಂಗಳೂರು ಬುಲ್ಸ್, ಅಂತಿಮ ಹಂತದಲ್ಲಿ ತಿರುಗೇಟು ನೀಡಿತು. ಸೂಪರ್ ಟ್ಯಾಕಲ್ ಮೂಲಕ ಬೆಂಗಳೂರು ಪಂದ್ಯದ ಫಲಿತಾಂಶ ಬದಲಾಯಿತು ರೋಚಕ ಹೋರಾಟದಲ್ಲಿ ಬುಲ್ಸ್ 34-32 ಅಂಕಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿತು.
ನಾಯಕ ರೋಹಿತ್ ಕುಮಾರ್ ಸಕ್ಸಸ್‌ಫುಲ್ ರೈಡ್‌ನೊಂದಿಗೆ ಬೆಂಗಳೂರು ಬುಲ್ಸ್ 7ನೇ ಆವೃತ್ತಿ ಆರಂಭಿಸಿತು. ರೋಹಿತ್ ಜೊತೆ ಪವನ್ ಶೆರಾವತ್ ಅದ್ಭುತ ರೈಡ್ ಹಾಗೂ ಅಮಿತ್ ಶಿಯೊರಾನ್ ಟ್ಯಾಕಲ್‌ನಿಂದ ಬೆಂಗಳೂರು ಬುಲ್ಸ್ ಫಸ್ಟ್ ಹಾಫ್ ಆರಂಭದಲ್ಲೇ ಮುನ್ನಡೆ ಪಡೆದುಕೊಂಡಿತು. ಪಾಟ್ನ ಪೈರೈಟ್ಸ್ ಪ್ರದೀಪ್ ನರ್ವಾಲ್ ಹಾಗೂ ಜಂಗ್ ಕುನ್ ಲಿ ಮೂಲಕ ಹಲವು ಪ್ರಯತ್ನ ನಡೆಸಿತು.
ಮೊದಲಾರ್ಧದ ಅಂತ್ಯದಲ್ಲಿ ಬೆಂಗಳೂರು ಬುಲ್ಸ್ ದಿಟ್ಟ ಹೋರಾಟಕ್ಕೆ ಪಾಟ್ನಾ ತಿರುಗೇಟು ನೀಡಿತು. ಮುನ್ನಡೆಯಲ್ಲಿದ್ದ ಬೆಂಗಳೂರು ಬುಲ್ಸ್ ಆರ್ಭಟಕ್ಕೆ ಪಾಟ್ನ ಬ್ರೇಕ್ ಹಾಕಿತು. ಆಲೌಟ್ ಆದ ಬುಲ್ಸ್ ಹಿನ್ನಡೆ ಅನುಭವಿಸಿತು. ಹೀಗಾಗಿ ಮೊದಲಾರ್ಧದಲ್ಲಿ ಬುಲ್ಸ್ 13- 17 ಅಂಕಕ್ಕೆ ತೃಪ್ತಿ ಪಟ್ಟುಕೊಂಡಿತು.
ಸೆಕೆಂಡ್ ಹಾಫ್‌ನಲ್ಲೂ ಹಿನ್ನಡೆ ಅಂತರ ಹೆಚ್ಚಾಯಿತು. 8 ನಿಮಿಷದ ಬಳಿಕ ಬುಲ್ಸ್ ಗೇರ್ ಬದಲಾಯಿಸಿತು. ನಿಧಾನವಾಗಿ ಪಾಟ್ನಾ ಹಿಡಿತ ಸಡಿಲಗೊಂಡಿತು. ಅಂತಿಮ ಹಂತದಲ್ಲಿ ಪಂದ್ಯ ರೋಚಕ ಘಟ್ಟ ತಲುಪಿತು. 12ನೇ ನಿಮಿಷದಲ್ಲಿ ಬೆಂಗಳೂರು ಬುಲ್ಸ್ 24-24 ಅಂಕದೊಂದಿಗೆ ಸಮಬಲ ಮಾಡಿಕೊಂಡಿತು. 14 ನಿಮಿಷದಲ್ಲಿ ಮತ್ತೆ ಮುನ್ನಡೆ ಪಡೆದುಕೊಂಡಿತು. ಸೂಪರ್ ಟ್ಯಾಕಲ್ ಮೂಲಕ ಗೇಮ್ ಚೇಂಜ್ ಮಾಡಿದ ಬೆಂಗಳೂರು 34-32 ಅಂತಗಳ ಅಂತರದಲ್ಲಿ ಗೆಲುವು ಸಾಧಿಸಿತು.