ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಬೆಂಗಳೂರು ಮಿಡ್‌ನೈಟ್ ಮ್ಯಾರಾಥಾನ್ ಕಾರ್ಯಕ್ರಮದಲ್ಲಿ ಮೇರಿ ಕೋಮ್ ಮಾತನಾಡಿದರು. ಇದಕ್ಕೂ ಮುನ್ನ ‘‘ರನ್ ಫಾರ್ ಹ್ಯಾಪಿ ಸ್ಕೂಲ್ಸ್’’ ಥೀಮ್‌ನ್ನು ಮೇರಿ ಅನಾವರಣಗೊಳಿಸಿದರು.

ಬೆಂಗಳೂರು(ನ.15): ಓಟ ಎನ್ನುವುದು ಎಲ್ಲಾ ವಯಸ್ಸಿನ ಮಿತಿಯವರಿಗೂ ಉತ್ತಮವಾದುದು. ನನಗೂ ಕೂಡ ಫಿಟ್ನೆಸ್ ಕಾಪಾಡಿಕೊಳ್ಳಲು ಓಡುವುದು ಅಭ್ಯಾಸವಾಗಿದೆ. ಅಲ್ಲದೇ ಆರೋಗ್ಯದ ದೃಷ್ಟಿಯಿಂದಲೂ ಮ್ಯಾರಾಥಾನ್ ಓಟದಲ್ಲಿ ಭಾಗಿಯಾಗಬೇಕು ಎಂದು ಭಾರತದ ಸ್ಟಾರ್ ಮಹಿಳಾ ಬಾಕ್ಸರ್ ಮೇರಿಕೋಮ್ ಹೇಳಿದ್ದಾರೆ.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಬೆಂಗಳೂರು ಮಿಡ್‌ನೈಟ್ ಮ್ಯಾರಾಥಾನ್ ಕಾರ್ಯಕ್ರಮದಲ್ಲಿ ಮೇರಿ ಕೋಮ್ ಮಾತನಾಡಿದರು. ಇದಕ್ಕೂ ಮುನ್ನ ‘‘ರನ್ ಫಾರ್ ಹ್ಯಾಪಿ ಸ್ಕೂಲ್ಸ್’’ ಥೀಮ್‌ನ್ನು ಮೇರಿ ಅನಾವರಣಗೊಳಿಸಿದರು.

ರೋಟರಿ ಬೆಂಗಳೂರು ಐಟಿ ಕಾರಿಡರ್ ಡಿ.10ರಂದು ವೈಟ್‌ಫೀಲ್ಡ್‌ನ ಕರ್ನಾಟಕ ಟ್ರೇಡ್ ಪ್ರೋಮೊಷನ್ ಸಂಸ್ಥೆ (ಕೆಟಿಪಿಒ) ಯಲ್ಲಿ ಮ್ಯಾರಾಥಾನ್ ಓಟವನ್ನು ಆಯೋಜಿಸಿದೆ. ಈ ಓಟದಲ್ಲಿ ಫುಲ್ ಮ್ಯಾರಾಥಾನ್, ಒಲಾ ಹಾಫ್ ಮ್ಯಾರಾಥಾನ್, ಓಪನ್ 10ಕೆ ರನ್, 5ಕೆ ಐಟಿ ಸಿಟಿ ರನ್, ಏರ್‌'ಬಸ್ ಕಾರ್ಪೋರೆಟ್ ರೀಲೆ, ಕಮ್ಯುನಿಟಿ ರಿಲೇ ಹೆಸರಿನ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಓಟದ ವಿಜೇತರಿಗೆ 12 ಲಕ್ಷ ಪ್ರಶಸ್ತಿ ಮೊತ್ತ ನೀಡಲಾಗುತ್ತಿದೆ. ಮ್ಯಾರಾಥಾನ್‌ನ ಪ್ರಾಯೋಜಕತ್ವದಲ್ಲಿ ಬಂದ ಹಣವನ್ನು 7 ಸರ್ಕಾರಿ ಶಾಲೆಯ 4 ಸಾವಿರ ಮಕ್ಕಳ ವಿದ್ಯಾಭ್ಯಾಸದ ಖರ್ಚಿಗಾಗಿ ವಿನಿಯೋಗಿಸಲಾಗುತ್ತಿದೆ. ಒಟ್ಟಾರೆ ಓಟದಲ್ಲಿ 12 ಸಾವಿರಕ್ಕೂ ಹೆಚ್ಚು ಮಂದಿ ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಆಯೋಜಕರು ಹೇಳಿದ್ದಾರೆ.

ಯುವ ಕ್ರೀಡಾಪಟುಗಳು ಕ್ರೀಡೆಯ ಬಗ್ಗೆ ಸ್ವ ಹಿತಾಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಮಹಿಳೆ ಎನ್ನುವ ಒಂದೇ ಕಾರಣಕ್ಕೆ ನನ್ನನ್ನು ಕೀಳರಿಮೆಯಿಂದ ನೋಡಲಾಗುತ್ತಿತ್ತು. ಹೀಗಾಗಿ ಕ್ರೀಡೆಯತ್ತ ವಾಲುವ ಯುವ ಜನತೆ ಕ್ರೀಡೆಯ ಬಗ್ಗೆ ಅಪಾರ ಆಸಕ್ತಿ ಹೊಂದಿರಬೇಕು. ಅದರಲ್ಲಿಯೇ ಸಾಧನೆ ಮಾಡುವ ಗುರಿ ಇರಬೇಕು ಎಂದು ಮೇರಿ ಕಿವಿಮಾತು ನುಡಿದರು. ಮುಂದಿನ ದಿನಗಳಲ್ಲಿ ಬಾಕ್ಸಿಂಗ್ ಅಕಾಡೆಮಿಯನ್ನು ತೆರೆಯುವ ಮನಸ್ಸು ಇದೆ. ಅಲ್ಲದೇ ಈ ಒಂದೇ ವೇದಿಕೆಯಲ್ಲಿ ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸುವ ಗುರಿ ಇರಿಸಿಕೊಳ್ಳಲಾಗಿದೆ ಎಂದು ಮೇರಿ ಹೇಳಿದ್ದಾರೆ.