ಪಾಕ್ ಕ್ರಿಕೆಟಿಗನ ದಾಖಲೆ ಮುರಿದ ಆರ್. ಅಶ್ವಿನ್
ಕಾನ್ಪುರ(ಸೆ.26): ಕಾನ್ಪುರದಲ್ಲಿ ನಡೆಯುತ್ತಿರುವ ಐತಿಹಾಸಿಕ #500Test ಟೆಸ್ಟ್ನಲ್ಲಿ ಆಫ್ ಸ್ಪಿನ್ನರ್ ರವಿಚಂದ್ರನ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅತಿ ಕಡಿಮೆ ಪಂದ್ಯದಲ್ಲಿ 200 ವಿಕೆಟ್ ಪಡೆದ ಭಾರತದ ಮೊದಲ ಕ್ರಿಕೆಟರ್ ಎಂಬ ಶ್ರೇಯಸ್ಸಿಗೆ ಪಾತ್ರರಾದರು.
ವಿಶ್ವದಲ್ಲೇ ಅತ್ಯಂತ ಕಡಿಮೆ ಪಂದ್ಯದಲ್ಲಿ 200 ವಿಕೆಟ್ ಪಡೆದ ಎರಡನೇ ಆಟಗಾರನೆಂಬ ಹಿರಿಮೆಗೆ ಅಶ್ವಿನ್ ಭಾಜನರಾದರು, ನ್ಯೂಜಿಲೆಂಡ್ ವಿರುದ್ಧದ ಎರಡನೇ ಇನ್ನಿಂಗ್ಸ್ನಲ್ಲಿ ರವಿಂಚದ್ರನ್ ಅಶ್ವಿನ್ ಭರ್ಜರಿ ಆರಂಭ ಮಾಡಿದರು. ಪ್ರಮುಖ ಮೂರು ವಿಕೆಟ್ ಪಡೆಯುವ ಮೂಲಕ ನ್ಯೂಜಿಲೆಂಡ್ ತಂಡಕ್ಕೆ ಆರಂಭಿಕ ಆಘಾತ ನೀಡಿದರು.
ಅಶ್ವಿನ್ 200 ವಿಕೆಟ್ ಸಾಧನೆ:
ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ವಿಕೆಟ್ ಪಡೆಯುತ್ತಿದ್ದಂತೆ ರವಿಚಂದ್ರನ್ ಅಶ್ವಿನ್ ಹೊಸದೊಂದು ದಾಖಲೆಗೆ ಪಾತ್ರರಾದರು. ಭಾರತದ ಪರ ಹಾಗೂ ಏಷ್ಯಾದಲ್ಲಿ ವೇಗವಾಗಿ 200 ವಿಕೆಟ್ ಪಡೆದ ಸಾಧನೆ ಮಾಡಿದರು.
ವಾಖರ್ ದಾಖಲೆ ಮುರಿದ ಅಶ್ವಿನ್ : 37 ಟೆಸ್ಟ್ನಲ್ಲಿ ಅಶ್ವಿನ್ಗೆ 200 ವಿಕೆಟ್
ವೈಯಕ್ತಿಕ 37ನೇ ಟೆಸ್ಟ್ ಆಡುತ್ತಿರುವ ಅಶ್ವಿನ್, ನ್ಯೂಜಿಲೆಂಡ್ ವಿರುದ್ಧದ ಮೊದಲ ಇನ್ನಿಂಗ್ಸ್ನಲ್ಲಿ 4 ವಿಕೆಟ್ ಉರುಳಿಸಿದರು. ಇನ್ನು 2ನೇ ಇನ್ನಿಂಗ್ಸ್ನಲ್ಲಿ ಮೊದಲ 3 ವಿಕೆಟ್ ಪಡೆಯುತ್ತಿದ್ದಾಗೆಯೇ ಅಶ್ವಿನ್ ಈ ಸಾಧನೆ ಮಾಡಿದರು. ಏಷ್ಯಾ ಬೌಲರ್ಗಳ ಪೈಕಿ ವಾಖರ್ ಯೂನಿಸ್ 38 ಟೆಸ್ಟ್ಗಳಲ್ಲಿ 200 ವಿಕೆಟ್ ಸಾಧನೆ ಮಾಡಿದಿದ್ದು ಈ ವರೆಗಿನ ದಾಖಲೆಯಾಗಿತ್ತು.
ಆಸ್ಟ್ರೇಲಿಯಾದ ಕ್ಲಾರಿ ಗ್ರಿಮ್ಮೆಟ್ 36 ಟೆಸ್ಟ್ನಲ್ಲಿ 200 ವಿಕೆಟ್ ಪಡೆಯುವ ಮೂಲಕ ಅತಿ ಕಡಿಮೆ ಪಂದ್ಯದಲ್ಲಿ ಗರಿಷ್ಟ ವಿಕೆಟ್ ಸಾಧನೆ ಮಾಡಿದ್ದಾರೆ. ಆದರೆ ರವಿಚಂದ್ರನ್ ಅಶ್ವಿನ್ ಈ ಸಾಧನೆ ಮಾಡಲು 37 ಪಂದ್ಯ ತೆಗೆದುಕೊಂಡ್ರು. ಹಾಗಾಗಿ ಟೆಸ್ಟ್ನಲ್ಲಿ ಅತ್ಯಂತ ವೇಗವಾಗಿ 200 ವಿಕೆಟ್ ಪಡೆದ ಸಾಧನೆ ಮಾಡಿದರು.
37 ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ 25.13ರ ಸರಾಸರಿಯಲ್ಲಿ 200 ವಿಕೆಟ್ ಪಡೆದಿದ್ದಾರೆ. 66 ರನ್ ನೀಡಿರುವುದು ಅವರ ಬೆಸ್ಟ್ ಬೌಲಿಂಗ್ ಆಗಿದೆ. ಟೆಸ್ಟ್ ಇನ್ನಿಂಗ್ಸ್ವೊಂದರಲ್ಲಿ 18 ಸಲ ಐದು ವಿಕೆಟ್ ಹಾಗೂ ಟೆಸ್ಟ್ ಪಂದ್ಯವೊಂದರಲ್ಲಿ ನಾಲ್ಕು ಸಲ 10 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ತವರಿನಲ್ಲಿ ಅತ್ಯಂತ ಮಾರಕವಾಗಿ ಬೌಲಿಂಗ್ ಮಾಡುವ ಅಶ್ವಿನ್ ಅತ್ಯಂತ ಯಶಸ್ವಿ ಆಲ್ರೌಂಡರ್ ಕೂಡ ಹೌದು. ತವರಿನಲ್ಲಿ ಸಮರೋಪಾದಿಯಲ್ಲಿ ಭಾರತ ಟೆಸ್ಟ್ ಸರಣಿಗಳನ್ನು ಆಡಲಿದೆ. ಭಾರತದಲ್ಲಿ ಇನ್ನೂ 12 ಟೆಸ್ಟ್ ಆಡಬೇಕಿರುವ ಅಶ್ವಿನ್ ಹಲವು ದಾಖಲೆಗಳನ್ನು ಬರೆಯುವ, ಪುಡಿ-ಪುಡಿ ಮಾಡುವ ವಿಶ್ವಾಸದಲ್ಲಿದ್ದಾರೆ. ಹಾಗಾಗಿ ಅಶ್ವಿನ್ ಅತ್ಯಂತ ಕಡಿಮೆ ಪಂದ್ಯದಲ್ಲಿ 300 ವಿಕೆಟ್ ಪಡೆದ ಸಾಧನೆ ಮಾಡುವುದರ ಜೊತೆಗೆ ಹಲವು ದಾಖಲೆಗಳನ್ನು ಬರೆಯುವ ಆತುರದಲ್ಲಿದ್ದಾರೆ.