ಹರಾರೆ(ಜು.02): ಇಂಗ್ಲೆಂಡ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿ ಸೋತು ಭಾರಿ ಹಿನ್ನಡೆ ಅನುಭವಿಸಿದ್ದ ಆಸ್ಟ್ರೇಲಿಯಾ ಇದೀಗ ಚೇತರಿಸಿಕೊಂಡಿದೆ. ಹರಾರೆಯಲ್ಲಿ ನಡೆಯುತ್ತಿರುವ ಜಿಂಬಾಬ್ವೆ, ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ತ್ರಿಕೋನ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ಶುಭಾರಂಭ ಮಾಡಿದೆ.

ಪಾಕಿಸ್ತಾನ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 9 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.  ಟಾಸ್ ಸೋತು ಬ್ಯಾಟಿಂಗ್ ಇಳಿದ ಪಾಕಿಸ್ತಾನ ನಿಗಧಿತ 19.5 ಓವರ್‌ಗಳಲ್ಲಿ 116 ರನ್‌ಗಳಿಗೆ ಆಲೌಟ್ ಆಯಿತು.

ಮೊಹಮ್ಮದ್ ಹಫೀಝ್, ಫಕರ್ ಜಮನ್, ನಾಯಕ ಸರ್ಫಾರಾಜ್ ಅಹಮ್ಮದ್ ಸೇರಿದಂತೆ ಪಾಕಿಸ್ತಾನಿ ಬ್ಯಾಟ್ಸ್‌ಮನ್‌ಗಳು, ಆಸ್ಟ್ರೇಲಿಯಾ ದಾಳಿಗೆ ತತ್ತರಿಸಿದರು. ಶದಬ್ ಖಾನ್ ಗಳಿಸಿದ 29 ರನ್ ಪಾಕ್ ಪರ ಗಳಿಸಿದ ವೈಯುಕ್ತಿಕ ಗರಿಷ್ಠ ಮೊತ್ತ. ಆಸಿಸ್ ಪರ ಬಿಲ್ಲಿ ಸ್ಟಾನ್‌ಲೇಕ್ 4 ಹಾಗೂ ಆಂಡ್ರೂ ಟೈ 3 ವಿಕೆಟ್ ಪಡೆದು ಮಿಂಚಿದರು.

117 ರನ್ ಟಾರ್ಗೆಟ್ ಪಡೆದ ಆಸ್ಟ್ರೇಲಿಯಾ ನಿರಾಯಾಸವಾಗಿ ಗುರಿ ತಲುಪಿತು. ಆರಂಭಿಕ ಡಾರ್ಕಿ ಶಾರ್ಟ್ 15 ರನ್ ಗಳಿಸಿ ನಿರ್ಗಮಿಸಿದರು. ಆದರೆ ಆರೋನ್ ಫಿಂಚ್ ಹಾಗೂ ಟ್ರಾವಿಸ್ ಹೆಡ್ ಜೊತೆಯಾಟದಿಂದ ಆಸ್ಟ್ರೇಲಿಯಾ 10.5 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ ಗೆಲುವು ಸಾಧಿಸಿತು. ನಾಯಕ ಫಿಂಚ್ ಅಜೇಯ 68 ರನ್ ಸಿಡಿಸಿದರೆ,  ಹೆಡ್ ಅಜೇಯ 20 ರನ್ ಸಿಡಿಸಿದರು. 4 ವಿಕೆಟ್ ಕಬಳಿಸಿದ ಬಿಲ್ಲಿ ಸ್ಟಾನ್‌ಲೇಕ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.