ವಿಶ್ವದ ಶ್ರೇಷ್ಠ ತಂಡವನ್ನು ಕಟ್ತೀವಿ: ಪಾಕ್ ಪ್ರಧಾನಿ ಇಮ್ರಾನ್ ಖಾನ್
ಮುಂಬರುವ ಐಸಿಸಿ ಟೂರ್ನಿ ವೇಳೆಗೆ ಬಲಿಷ್ಠ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಕಟ್ಟುವುದಾಗಿ ಪಾಕ್ ಪ್ರಧಾನಿ ಹಾಗೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅಮೆರಿಕಾದಲ್ಲಿ ನೆಲೆಸಿರುವ ಪಾಕಿಸ್ತಾನದ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...
ವಾಷಿಂಗ್ಟನ್[ಜು.23]: ವಿಶ್ವದ ಶ್ರೇಷ್ಠ ಕ್ರಿಕೆಟ್ ತಂಡ ರೂಪಿಸುವುದಾಗಿ ಅಮೆರಿಕಾದಲ್ಲಿ ನೆಲೆಸಿರುವ ಪಾಕಿಸ್ತಾನಿಯರಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭರವಸೆ ನೀಡಿದ್ದಾರೆ.
ಪಾಕಿಸ್ತಾನ ಆಯ್ಕೆ ಸಮಿತಿಗೆ ಇನ್ಜಮಾಮ್ ಗುಡ್ ಬೈ!
ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಸೋಲುವುದರ ಜತೆಗೆ ಪಾಕಿಸ್ತಾನ ಗುಂಪು ಹಂತದಲ್ಲೇ ಹೊರ ಬಿದ್ದಿತ್ತು. ಅಮೆರಿಕಾದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ನೆಲೆಸಿರುವ ಪಾಕಿಸ್ತಾನಿಯರ ಉದ್ದೇಶಿಸಿ ಸೋಮವಾರ ಮಾತನಾಡಿದ ಮಾಜಿ ಕ್ರಿಕೆಟಿಗ, ಪಾಕ್ ಪ್ರಧಾನಿ ಇಮ್ರಾನ್‌ಖಾನ್, ಉತ್ತಮ ಆಟಗಾರರನ್ನು ಆಯ್ಕೆ ಮಾಡುವ ಮೂಲಕ, ವಿಶ್ವದ ಶ್ರೇಷ್ಠ ತಂಡವನ್ನು ಕಟ್ಟುವ ಕೆಲಸ ಆರಂಭಗೊಂಡಿದೆ. ನನ್ನ ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಎಂದು ಹೇಳಿದ್ದಾರೆ.
1992ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸಿದ್ದ ಇಮ್ರಾನ್ ಖಾನ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಇದೀಗ ಪಾಕ್ ಪ್ರಧಾನಿಯಾಗಿರುವ ಇಮ್ರಾನ್ ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ಆಶಾವಾದವನ್ನು ಹುಟ್ಟುಹಾಕಿದ್ದಾರೆ. 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸರ್ಫರಾಜ್ ಅಹಮದ್ ನೇತೃತ್ವದ ಪಾಕಿಸ್ತಾನ ಆಡಿದ 8 ಪಂದ್ಯಗಳ ಪೈಕಿ 5ರಲ್ಲಿ ಗೆದ್ದು, ಮೂರು ಪಂದ್ಯಗಳಲ್ಲಿ ಸೋತಿತ್ತು. ಇನ್ನೊಂದು ಪಂದ್ಯ ಒಂದೂ ಎಸೆತವನ್ನೂ ಕಾಣದೇ ಮಳೆಯಿಂದ ರದ್ದಾಗಿದ್ದು. ಲೀಗ್ ಹಂತದಲ್ಲಿ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ತಲಾ 11 ಅಂಕಗಳನ್ನು ಗಳಿಸಿದ್ದವಾದರೂ ನೆಟ್ ರನ್ ರೇಟ್ ಆಧಾರದಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿ ಕಿವೀಸ್ ಸೆಮಿಫೈನಲ್’ಗೇರಿತ್ತು.