‘ಇಲಾಖೆಯ ವಿರುದ್ಧ ಕೆಲವರು ಹೈಕೋರ್ಟ್‌'ನಲ್ಲಿ ಅರ್ಜಿ ಸಲ್ಲಿಸಿರುವುದು ಗಮನಕ್ಕೆ ಬಂದಿದೆ. ಕೆಲವು ಕ್ರೀಡಾಪಟುಗಳು ಕಂಠೀರವ ಸ್ಟೇಡಿಯಂಗೆ ತಾಲೀಮು ನಡೆಸಲು ಬಾರದಿದ್ದರೆ ಆಕಾಶವೇನೂ ಕಳಚಿ ಬೀಳುವುದಿಲ್ಲ’ ಎಂದು ಸಚಿವ ಪ್ರಮೋದ್ ಮಧ್ವರಾಜ್ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು(ಡಿ.06): ಕಂಠೀರವ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್ ಬಳಕೆಗೆ ಕೆಲ ಅಥ್ಲೀಟ್‌'ಗಳು ಹಾಗೂ ಸರ್ಕಾರದ ನಡುವೆ ನಡುತ್ತಿರುವ ಜಟಾಪಟಿ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಸರ್ಕಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಕ್ಕೆ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಇಲಾಖೆಯ ವಿರುದ್ಧ ಕೆಲವರು ಹೈಕೋರ್ಟ್‌'ನಲ್ಲಿ ಅರ್ಜಿ ಸಲ್ಲಿಸಿರುವುದು ಗಮನಕ್ಕೆ ಬಂದಿದೆ. ಕೆಲವು ಕ್ರೀಡಾಪಟುಗಳು ಕಂಠೀರವ ಸ್ಟೇಡಿಯಂಗೆ ತಾಲೀಮು ನಡೆಸಲು ಬಾರದಿದ್ದರೆ ಆಕಾಶವೇನೂ ಕಳಚಿ ಬೀಳುವುದಿಲ್ಲ’ ಎಂದು ಸಚಿವ ಪ್ರಮೋದ್ ಮಧ್ವರಾಜ್ ಪ್ರತಿಕ್ರಿಯಿಸಿದ್ದಾರೆ.

ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡುವ ವೇಳೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳಿಗೆ ಪ್ರವೇಶ ನಿರ್ಬಂಧಿಸಿರುವುದನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ ಕುರಿತಂತೆ ಪ್ರಶ್ನಿಸಿದಾಗ ಹೀಗೆಂದು ಉತ್ತರ ನೀಡಿದರು. ‘ಅಭ್ಯಾಸ ನಡೆಸಲು ಕ್ರೀಡಾಂಗಣಕ್ಕೆ ಯಾರು ಬಂದರೂ, ಬಾರದಿದ್ದರೂ ವ್ಯತ್ಯಾಸ ಆಗುವುದಿಲ್ಲ. ಆ ಬಗ್ಗೆ ಚಿಂತಿಸಬೇಕಿಲ್ಲ. ವಿವಾದ ಎಲ್ಲಾ ಕ್ಷೇತ್ರಗಳಲ್ಲೂ ಇರುತ್ತೆ. ಕ್ರೀಡಾ ಕ್ಷೇತ್ರದಲ್ಲೂ ವಿವಾದ ಇದೆ. ಇರಲಿ ಬಿಡಿ, ಆ ಬಗ್ಗೆ ಏಕೆ ಚಿಂತೆ? ಎಂದರು.

ಇದೇ ವೇಳೆ ಪತ್ನಿಯ ವಾಕಿಂಗ್‌'ಗಾಗಿ ಕ್ರೀಡಾಪಟುಗಳನ್ನು ಕ್ರೀಡಾಂಗಣದಿಂದ ಹೊರಗಿಟ್ಟ ಆರೋಪ ಎದುರಿಸುತ್ತಿರುವ ಇಲಾಖೆಯ ಅಧಿಕಾರಿ ಅನುಪಮ್ ಅಗರ್'ವಾಲ್ ಅವರನ್ನು ಸಹ ಸಚಿವರು ಇದೇ ವೇಳೆ ಸಮರ್ಥಿಸಿಕೊಂಡರು. ‘ಅಥ್ಲೀಟ್‌ಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ಸದ್ಯ ಕೆಲವರು ಕೋರ್ಟ್‌'ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ, ನಾನು ಆ ಬಗ್ಗೆ ಹೆಚ್ಚು ಹೇಳುವುದಿಲ್ಲ. ಇಂತಹ ಪ್ರಕರಣದಲ್ಲಿ ಕೋರ್ಟ್'ಗೆ ಹೋದರೆ ಒಂದು ರೀತಿ ಒಳ್ಳೆಯದೇ.ಕೋರ್ಟ್‌'ನಲ್ಲೇ ಸರ್ಕಾರ ಅರ್ಜಿದಾರರಿಗೆ ಉತ್ತರ ಕೊಡುತ್ತದೆ’ ಎಂದರು.