* ನ್ಯೂಜಿಲೆಂಡ್'ಗೆ 6 ವಿಕೆಟ್ ಜಯ* ಭಾರತ 50 ಓವರ್ 280/8* ಟಾಮ್ ಲಥಮ್ ಮತ್ತು ವಿರಾಟ್ ಕೊಹ್ಲಿ ಶತಕ; ಟೇಲರ್ ಶತಕ ಜಸ್ಟ್ ಮಿಸ್* 3 ಪಂದ್ಯಗಳ ಸರಣಿಯಲ್ಲಿ ಕಿವೀಸ್ ಪಡೆಗೆ 1-0 ಮುನ್ನಡೆ
ಮುಂಬೈ(ಅ. 22): ನ್ಯೂಜಿಲೆಂಡ್ ವಿರುದ್ಧದ ಕ್ರಿಕೆಟ್ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡವು ಹೀನಾಯ ಸೋಲನುಭವಿಸಿದೆ. ಆಸ್ಟ್ರೇಲಿಯಾ ವಿರುದ್ಧ ಸಾಲುಸಾಲು ಪಂದ್ಯ ಗೆದ್ದು ಖುಷಿಯ ಅಲೆಯಲ್ಲಿದ್ದ ಭಾರತವನ್ನು ನ್ಯೂಜಿಲೆಂಡ್ 6 ವಿಕೆಟ್'ಗಳಿಂದ ಬಗ್ಗುಬಡಿದಿದೆ. ಗೆಲ್ಲಲು ಭಾರತ ಒಡ್ಡಿದ 281 ರನ್'ಗಳ ಗುರಿಯನ್ನು 6 ಎಸೆತ ಬಾಕಿ ಇರುವಂತೆಯೇ ಕಿವೀಸ್ ಬಳಗ ಗೆಲುವು ಪಡೆದಿದೆ.
ರಾಸ್ ಟೇಲರ್ ಮತ್ತು ಟಾಮ್ ಲಾಥಮ್ ಅವರು ನ್ಯೂಜಿಲೆಂಡ್ ತಂಡದ ಗೆಲುವಿನ ರೂವಾರಿಯಾಗಿದ್ದಾರೆ. ನ್ಯೂಜಿಲೆಂಡ್ ಒಂದು ಹಂತದಲ್ಲಿ 80 ರನ್'ಗೆ 3 ವಿಕೆಟ್ ಕಳೆದುಕೊಂಡಿದ್ದಾಗ ಪಂದ್ಯವು ಎತ್ತಕಡೆ ಬೇಕಾದರೂ ವಾಲುವ ಸಾಧ್ಯತೆ ಇತ್ತು. ನಾಯಕ ಕೇನ್ ವಿಲಿಯಮ್ಸನ್, ಗುಪ್ಟಿಲ್ ಮತ್ತು ಮನ್ರೋ ಅವರು ಪೆವಿಲಿಯನ್'ಗೆ ಮರಳಿದ್ದರು. ಆದರೆ, ರಾಸ್ ಟೇಲರ್ ಮತ್ತು ಲಥಮ್ ಬಹಳ ಕೂಲಾಗಿ ಆಡಿ ಇನ್ನಿಂಗ್ಸ್ ಕಟ್ಟಿದರು. ಸ್ಫೋಟಕ ಆಟಕ್ಕೆ ಮುಂದಾಗದೇ ಅವರಿಬ್ಬರು ಬಹಳ ಪ್ರೊಫೆಷನಲ್ ಆಗಿ ಟಾರ್ಗೆಟ್ ಮುಟ್ಟಲು ನೆರವಾಗಿದ್ದು ವಿಶೇಷ. ಇಬ್ಬರೂ 4ನೇ ವಿಕೆಟ್'ಗೆ 200 ರನ್'ಗಳ ಜೊತೆಯಾಟ ನೀಡಿ ತಂಡದ ಗೆಲುವನ್ನು ಖಾತ್ರಿಗೊಳಿಸಿದರು. ಲಾಥಮ್ ಶತಕ ಬಾರಿಸಿದರೆ, ರಾಸ್ ಟೇಲರ್ 5 ರನ್'ಗಳಿಂದ ಶತಕವಂಚಿತರಾದರು.
ಕೊಹ್ಲಿ ಶತಕ ವ್ಯರ್ಥ:
ಇದಕ್ಕೆ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್'ನಲ್ಲಿ 8 ವಿಕೆಟ್ ನಷ್ಟಕ್ಕೆ 280 ರನ್ ಗಳಿಸಿತು. ವಿರಾಟ್ ಕೊಹ್ಲಿ ಮತ್ತು ಟ್ರೆಂಟ್ ಬೌಲ್ಟ್ ಅವರ ಭರ್ಜರಿ ಪ್ರದರ್ಶನವು ಈ ಇನ್ನಿಂಗ್ಸ್'ನ ಹೈಲೈಟ್ ಆಗಿದೆ. ವಿರಾಟ್ ಕೊಹ್ಲಿ 31ನೇ ಏಕದಿನ ಶತಕ ಭಾರಿಸಿದರೆ, ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ 4 ವಿಕೆಟ್ ಕಬಳಿಸಿ ತಮ್ಮ ಜೀವಮಾನದ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದರು.
ಭಾರತ ತಂಡವು ಇನ್ನಿಂಗ್ಸ್ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬೌಲ್ಟ್ ವೇಗಕ್ಕೆ ಕುದುರಿಕೊಳ್ಳದೇ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಪೆವಿಲಿಯನ್'ಗೆ ಮರಳಿದರು. ಬಳಿಕ ಕೇದಾರ್ ಜಾಧವ್ ಕೂಡ ಹೆಚ್ಚು ಹೊತ್ತು ಬಾಳಲಿಲ್ಲ. ಆನಂತರ ನಾಯಕ ವಿರಾಟ್ ಕೊಹ್ಲಿಯ ಜೊತೆ ದಿನೇಶ್ ಕಾರ್ತಿಕ್, ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ಒಳ್ಳೆಯ ಸಾಥ್ ಕೊಟ್ಟು ತಂಡದ ಸ್ಕೋರು 280 ರನ್'ಗೆ ಉಬ್ಬಿಸಲು ನೆರವಾದರು. ಆರಂಭದಲ್ಲಿ ಜೀವದಾನ ಪಡೆದ ವಿರಾಟ್ ಕೊಹ್ಲಿ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿ 125 ಎಸೆತದಲ್ಲಿ 121 ರನ್ ಭಾರಿಸಿದರು. 200ನೇ ಪಂದ್ಯದಲ್ಲಿ ಅವರು 31ನೇ ಶತಕ ದಾಖಲಿಸಿದರು. ಇದರೊಂದಿಗೆ ಅತೀಹೆಚ್ಚು ಏಕದಿನ ಶತಕ ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿ 2ನೇ ಸ್ಥಾನಕ್ಕೇರಿದರು. ಸಚಿನ್ ತೆಂಡೂಲ್ಕರ್ ನಂತರ ಕೊಹ್ಲಿಯೇ ಅತೀಹೆಚ್ಚು ಏಕದಿನ ಶತಕ ಭಾರಿಸಿದವರಾಗಿದ್ದಾರೆ.
ನ್ಯೂಜಿಲೆಂಡ್ ತಂಡ ಈ ಗೆಲುವಿನೊಂದಿಗೆ 3 ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಎರಡನೇ ಪಂದ್ಯವು ಅ.25ರಂದು ಪುಣೆಯಲ್ಲಿ ನಡೆಯಲಿದೆ. ಏಕದಿನ ಕ್ರಿಕೆಟ್ ಸರಣಿ ಬಳಿಕ 3 ಟಿ20 ಪಂದ್ಯಗಳ ಸರಣಿ ನಡೆಯಲಿದೆ.
ಸ್ಕೋರು ವಿವರ:
ಭಾರತ 50 ಓವರ್ 280/8
(ವಿರಾಟ್ ಕೊಹ್ಲಿ 121, ದಿನೇಶ್ ಕಾರ್ತಿಕ್ 37, ಭುವನೇಶ್ವರ್ ಕುಮಾರ್ 26, ಎಂಎಸ್ ಧೋನಿ 25, ರೋಹಿತ್ ಶರ್ಮಾ 20 ರನ್ - ಟ್ರೆಂಟ್ ಬೌಲ್ಟ್ 35/4, ಟಿಮ್ ಸೌಥೀ 73/3)
ನ್ಯೂಜಿಲೆಂಡ್ 49 ಓವರ್ 281/4
(ಟಾಮ್ ಲಾಥಮ್ ಅಜೇಯ 107, ರಾಸ್ ಟೇಲರ್ 95 ರನ್, ಮಾರ್ಟಿನ್ ಗುಪ್ಟಿಲ್ 32, ಕಾಲಿನ್ ಮುನ್ರೋ 28 ರನ್)
