ಎದೆ ಮುಟ್ಟಿಕೊಂಡು ಹೇಳುತ್ತೇನೆ, ನಾನು ಅಂಪೈರ್‌ಗೆ ಹಾಗೆ ಹೇಳಿಲ್ಲ: ಬೆನ್ ಸ್ಟೋಕ್ಸ್
ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಓವರ್ ಥ್ರೋ ಬೌಂಡರಿ ಬಗ್ಗೆ ಹರದಾಡುತ್ತಿದ್ದ ಗಾಳಿ ಸುದ್ದಿಯ ಬಗ್ಗೆ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಇದೇ ಮೊದಲ ಬಾರಿಗೆ ತುಟಿಬಿಚ್ಚಿದ್ದಾರೆ. ಅಷ್ಟಕ್ಕೂ ಬೆನ್ ಸ್ಟೋಕ್ಸ್ ಏನಂದ್ರು ಅಂತ ನೀವೇ ಒಮ್ಮೆ ನೋಡಿ...
ಲಂಡನ್(ಆ.01): ನ್ಯೂಜಿಲೆಂಡ್ ವಿರುದ್ಧ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನ ಕೊನೆ ಓವರಲ್ಲಿ, ಓವರ್ ಥ್ರೋ ಮೂಲಕ ಸಿಕ್ಕ 4 ಹೆಚ್ಚುವರಿ ರನ್‌ಗಳನ್ನು ತಂಡದ ಮೊತ್ತದಿಂದ ಕಡಿತಗೊಳಿಸುವಂತೆ ಅಂಪೈರ್‌ಗಳನ್ನು ಕೇಳಲಿಲ್ಲ ಎಂದು ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಸ್ಪಷ್ಟಪಡಿಸಿದ್ದಾರೆ.
ಓವರ್ ಥ್ರೋನ 4 ರನ್ ಬೇಡ ಎಂದಿದ್ದ ಸ್ಟೋಕ್ಸ್!
ಇಂಗ್ಲೆಂಡ್‌ನ ವೇಗಿ ಜೇಮ್ಸ್ ಆ್ಯಂಡರ್‌ಸನ್, ಓವರ್ ಥ್ರೋನಿಂದ ಸಿಕ್ಕ ರನ್‌ಗಳನ್ನು ಕಡಿತಗೊಳಿಸಿ ಎಂದು ಸ್ಟೋಕ್ಸ್ ಕೇಳಿಕೊಂಡಿದ್ದರು ಎಂದು ಇತ್ತೀಚೆಗೆ ತಿಳಿಸಿದ್ದರು. ‘ಎದೆ ಮೇಲೆ ಕೈಯಿಟ್ಟು ಹೇಳುತ್ತೇನೆ, ನಾನು ಅಂಪೈರ್‌ಗಳಿಗೆ ಏನನ್ನೂ ಹೇಳಲಿಲ್ಲ. ನ್ಯೂಜಿಲೆಂಡ್‌ನ ಲೇಥಮ್ ಹಾಗೂ ವಿಲಿಯಮ್ಸನ್ ಬಳಿ ಕ್ಷಮೆಯಾಚಿಸಿದೆ ಅಷ್ಟೆ’ ಎಂದು ಸ್ಟೋಕ್ಸ್ ಹೇಳಿದ್ದಾರೆ.
ಜೀವನದುದ್ದಕ್ಕೂ ವಿಲಿಯಮ್ಸನ್ ಬಳಿ ಕ್ಷಮೆ ಯಾಚಿಸುತ್ತೇನೆಂದ ಸ್ಟೋಕ್ಸ್!
ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ರೋಚಕವಾಗಿ ಮಣಿಸುವ ಮೂಲಕ ಚೊಚ್ಚಲ ಪ್ರಶಸ್ತಿ ಎತ್ತಿಹಿಡಿದಿತ್ತು. ಮಾರ್ಟಿನ್ ಗಪ್ಟಿಲ್ ಎಸೆದ ಚೆಂಡು ಸ್ಟೋಕ್ಸ್ ಬ್ಯಾಟ್‌ಗೆ ತಾಗಿ ಬೌಂಡರಿ ಸೇರಿತ್ತು. ಅಂಪೈರ್ ಆರು ರನ್ ನೀಡಿದ್ದರು. ಈ ತೀರ್ಪು ಪಂದ್ಯದ ಫಲಿತಾಂಶ ವನ್ನೇ ಬದಲಾಯಿಸಿತು.