ಏಷ್ಯನ್ ಗೇಮ್ಸ್: ನೀರಜ್ ಚೋಪ್ರಾ ಭಾರತದ ಧ್ವಜಧಾರಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 11, Aug 2018, 1:44 PM IST
Neeraj Chopra named India's flag-bearer for Asian Games opening ceremony
Highlights

ಏಷ್ಯನ್ ಗೇಮ್ಸ್‌ಗೆ ತೆರಳಲಿರುವ ಭಾರತ ತಂಡಕ್ಕೆ ಬೀಳ್ಕೊಡುಗೆ ನೀಡಲು ಶುಕ್ರವಾರ ಇಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ನರೇಂದ್ರ ಬಾತ್ರಾ ನೀರಜ್ ಹೆಸರನ್ನು ಘೋಷಿಸಿದರು. 20 ವರ್ಷದ ನೀರಜ್, ಹಾಲಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಹಾಗೂ ಕಿರಿಯರ ವಿಶ್ವ ದಾಖಲೆ ಹೊಂದಿರುವ ಜಾವೆಲಿನ್ ಪಟುವಾಗಿದ್ದಾರೆ.

ನವದೆಹಲಿ[ಆ.11]: ತಾರಾ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ, ಆ.18ರಂದು ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಉದ್ಘಾಟನಾ ಸಮಾರಂಭಕ್ಕೆ ಭಾರತದ ಧ್ವಜಧಾರಕರಾಗಿ ಆಯ್ಕೆಯಾಗಿದ್ದಾರೆ.

ಏಷ್ಯನ್ ಗೇಮ್ಸ್‌ಗೆ ತೆರಳಲಿರುವ ಭಾರತ ತಂಡಕ್ಕೆ ಬೀಳ್ಕೊಡುಗೆ ನೀಡಲು ಶುಕ್ರವಾರ ಇಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ನರೇಂದ್ರ ಬಾತ್ರಾ ನೀರಜ್ ಹೆಸರನ್ನು ಘೋಷಿಸಿದರು. 20 ವರ್ಷದ ನೀರಜ್, ಹಾಲಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಹಾಗೂ ಕಿರಿಯರ ವಿಶ್ವ ದಾಖಲೆ ಹೊಂದಿರುವ ಜಾವೆಲಿನ್ ಪಟುವಾಗಿದ್ದಾರೆ. ಈ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪರ ಪದಕ ನಿರೀಕ್ಷೆ ಹುಟ್ಟಿಸಿರುವ ಪ್ರಮುಖ ಅಥ್ಲೀಟ್ ಎನಿಸಿದ್ದಾರೆ.

‘ಭಾರತದ ಧ್ವಜಧಾರಕನಾಗಿ ಆಯ್ಕೆಗೊಂಡಿರುವುದು ಹೆಮ್ಮೆ ಹಾಗೂ ಸಂತಸ ನೀಡಿದೆ. ಇದು ನನಗೆ ಸಿಗುತ್ತಿರುವ ಅತ್ಯಂತ ದೊಡ್ಡ ಗೌರವ’ ಎಂದು ಫಿನ್’ಲ್ಯಾಂಡ್‌ನಲ್ಲಿ ಅಭ್ಯಾಸ ನಡೆಸುತ್ತಿರುವ ನೀರಜ್ ಪ್ರತಿಕ್ರಿಯಿಸಿದ್ದಾರೆ. ‘ನನ್ನನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದಿರಲಿಲ್ಲ. ಮೊದಲ ಬಾರಿಗೆ ನನಗೆ ಧ್ವಜ ಹಿಡಿದು ಭಾರತ ತಂಡವನ್ನು ಮುನ್ನಡೆಸುವ ಅವಕಾಶ ಸಿಗುತ್ತಿದೆ’ ಎಂದಿದ್ದಾರೆ.

2014ರ ಇಂಚಾನ್ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಹಾಕಿ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್, ಭಾರತದ ಧ್ವಜಧಾರಕರಾಗಿದ್ದರು. 2017ರ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ 85.23 ಮೀ. ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದ ನೀರಜ್, 2016ರ ವಿಶ್ವ ಅಂಡರ್-20 ಚಾಂಪಿಯನ್‌ಶಿಪ್‌ನಲ್ಲೂ ಚಿನ್ನ ಜಯಿಸಿದ್ದರು. 2014ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 11 ಚಿನ್ನ, 10 ಬೆಳ್ಳಿ ಹಾಗೂ 36 ಕಂಚಿನೊಂದಿಗೆ ಒಟ್ಟು 57 ಪದಕಗಳನ್ನು ಗೆದ್ದಿತ್ತು. ಈ ಬಾರಿ ಕ್ರೀಡಾಕೂಟಕ್ಕೆ ಐಒಸಿ ಒಟ್ಟು 572 ಕ್ರೀಡಾಪಟುಗಳನ್ನು ಆಯ್ಕೆ ಮಾಡಿದೆ.

ಏಷ್ಯಾಡ್‌ನಲ್ಲಿ ಜವಾಬ್ದಾರಿಯಿಂದ ವರ್ತಿಸಿ: ರಾಥೋಡ್

ಏಷ್ಯನ್ ಗೇಮ್ಸ್‌ನಲ್ಲಿ ಅಂಕಣದ ಒಳಗೂ-ಹೊರಗೂ ಜವಾಬ್ದಾರಿಯಿಂದ ವರ್ತಿಸುವಂತೆ ಭಾರತೀಯ ಕ್ರೀಡಾಪಟುಗಳು ಹಾಗೂ ಅಧಿಕಾರಿಗಳಿಗೆ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ತಿಳಿಸಿದ್ದಾರೆ. ಶುಕ್ರವಾರ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭಾರತವನ್ನು ಪ್ರತಿನಿಧಿಸುವುದು ಹೆಮ್ಮೆಯ ವಿಚಾರ. ಕ್ರೀಡಾ ಗ್ರಾಮದಲ್ಲಿ ಉಳಿದುಕೊಂಡಾಗ ವೈಯಕ್ತಿಕ ಗುರುತು ಲೆಕ್ಕಕ್ಕೆ ಬರುವುದಿಲ್ಲ. ಎಲ್ಲರನ್ನೂ ಭಾರತೀಯರೆಂದೇ ಗುರುತಿಸಲಾಗುತ್ತದೆ. ಹೀಗಾಗಿ ಒಬ್ಬರು ಮಾಡುವ ತಪ್ಪು ಇಡೀ ತಂಡವನ್ನು ಮುಜುಗರಕ್ಕೀಡು ಮಾಡಲಿದೆ. ಪ್ರತಿಯೊಬ್ಬರು ಸಹ ಜವಾಬ್ದಾರಿಯಿಂದ ವರ್ತಿಸಬೇಕು’ ಎಂದು ರಾಥೋಡ್ ಹೇಳಿದರು.
‘ಈ ಬಾರಿ 572 ಕ್ರೀಡಾಪಟುಗಳನ್ನು ಕಳುಹಿಸುತ್ತಿದ್ದು, ಕಳೆದ ವರ್ಷಕ್ಕಿಂತ ಹೆಚ್ಚಿನ ಪದಕಗಳು ದೊರೆಯಲಿದೆ ಎನ್ನುವ ವಿಶ್ವಾಸವಿದೆ’ ಎಂದು ರಾಥೋಡ್ ಹೇಳಿದರು.

loader