ಮುಂಬೈ ದಾಳಿಗೆ ಇಂದು 10 ವರ್ಷ ಸಂದಿದೆ. 2008ರ ನವೆಂಬರ್ 26 ರಂದು ಮುಂಬೈ ಮೇಲೆರಗಿದ ಉಗ್ರರ ಅಟ್ಟಹಾಸಕ್ಕೆ ಅಮಾಯಕರು ಬಲಿಯಾಗಿದ್ದರು. ಭಯೋತ್ವಾದಕರನ್ನ ಹೆಡೆಮುರಿ ಕಟ್ಟಿದ ವೀರ ಯೋಧರು, ಪೊಲೀಸರ ಹಾಗೂ ಮಡಿದವರನ್ನ ಟೀಂ ಇಂಡಿಯಾ ಕ್ರಿಕೆಟಿಗರು ಸ್ಮರಿಸಿದ್ದಾರೆ.
ಮುಂಬೈ(ನ.26): ಮುಂಬೈ ಮೇಲೆ ಭಯೋತ್ವಾದಕರು ನಡೆಸಿದ ದಾಳಿಗೆ ಇಂದು 10 ವರ್ಷ ಸಂದಿದೆ. 166 ಜನ ಸಾವಿಗೀಡಾದರೆ, 300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. 10 ಮಂದಿ ಲಷ್ಕರ್-ಎ-ತೊಯ್ಬಾ ಉಗ್ರರು ನಡೆಸಿದ ದಾಳಿ ಭಾರತೀಯರು ಯಾವತ್ತು ಮರೆಯಲ್ಲ.
ಸದಾ ಜನಜಂಗುಳಿಯಿಂದ ಗಿಜಿಗಿಡುವ ಜನಸಾಮಾನ್ಯರ ಚತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣ, ತಾಜ್, ಒಬೆರಾಯ್, ನರಿಮಾನ್ ಪಾಯಿಂಟ್ ಸೇರಿದಂತೆ ಮುಂಬೈನ ಪ್ರಮುಖ ಸ್ಥಳಗಳ ಮೇಲೆ ಉಗ್ರರ ಬಾಂಬ್ ಹಾಗೂ ಗುಂಡಿನ ದಾಳಿಗೆ ಇಡೀ ಭಾರತವೇ ತತ್ತರಿಸಿತ್ತು.
ಉಗ್ರ ಅಜ್ಮಲ್ ಕಸಬ್ ಹಿಡಿದ ತುಕರಾಮ್ ಒಂಬ್ಳೆ ಸೇರಿದಂತೆ ಹಿರಿಯ ಹಾಗೂ ದಕ್ಷ ಪೊಲೀಸ್ ಅಧಿಕಾರಿಗಳು, ಯೋಧರು ಸೇರಿದಂತೆ ಹಲವರು ಹೋರಾಟದಲ್ಲಿ ಮಡಿದಿದ್ದಾರೆ. ಇದೀಗ ಈ ಭೀಕರ ದಾಳಿ, ಭಯೋತ್ವಾದಕರನ್ನ ಹೆಡೆಮುರಿ ಕಟ್ಟಿದ ಪೊಲೀಸರು, ಸೈನಿಕರು ಹಾಗೂ ಮಡಿದವ ಜನಸಾಮಾನ್ಯರನ್ನ ಟೀಂ ಇಂಡಿಯಾ ಕ್ರಿಕೆಟಿಗರು ಸ್ಮರಿಸಿದ್ದಾರೆ.
