ಈ ಸಾಲಿನ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯು ಕೇವಲ ಧೋನಿಗಷ್ಟೇ ಅಲ್ಲದೆ, ದೇಶದ ಹಿರಿ-ಕಿರಿಯ ಕ್ರಿಕೆಟಿಗರ ಪಾಲಿಗೆ ಅತ್ಯಂತ ಮಹತ್ವಪೂರ್ಣವೆನಿಸಿದೆ.
ಕೋಲ್ಕತಾ(ಫೆ.24): ಭಾರತ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ, ಮೊಟ್ಟಮೊದಲ ಬಾರಿಗೆ ತನ್ನ ರಾಜ್ಯ ಜಾರ್ಖಂಡ್ ತಂಡದ ಸಾರಥ್ಯ ಹೊತ್ತಿದ್ದು ಶನಿವಾರ ಆರಂಭವಾಗುತ್ತಿರುವ 15ನೇ ಆವೃತ್ತಿಯ ವಿಜಯ್ ಹಜಾರೆ ಟ್ರೋಫಿ ಏಕದಿನ ಪಂದ್ಯಾವಳಿಯ ‘ಡಿ’ ಗುಂಪಿನ ಮೊದಲ ಪಂದ್ಯದಲ್ಲಿ ಕರ್ನಾಟಕದ ಸವಾಲನ್ನು ಎದುರಿಸಲಿದ್ದಾರೆ.
ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಜಯದೊಂದಿಗೆ ತನ್ನ ಅಭಿಯಾನ ಆರಂಭಿಸಲು ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ಅಣಿಯಾಗಿದ್ದರೆ, ಇದೇ ಮೊದಲ ಬಾರಿಗೆ ರಾಜ್ಯ ತಂಡದ ನಾಯಕತ್ವದ ವಹಿಸಿಕೊಂಡಿರುವ ಮಾಹಿ ವಿಜಯದ ಗುರಿ ಹೊತ್ತಿದ್ದಾರೆ.
ಅಂದಹಾಗೆ ಈ ಸಾಲಿನ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯು ಕೇವಲ ಧೋನಿಗಷ್ಟೇ ಅಲ್ಲದೆ, ದೇಶದ ಹಿರಿ-ಕಿರಿಯ ಕ್ರಿಕೆಟಿಗರ ಪಾಲಿಗೆ ಅತ್ಯಂತ ಮಹತ್ವಪೂರ್ಣವೆನಿಸಿದೆ. ಯುವರಾಜ್ ಸಿಂಗ್, ಶಿಖರ್ ಧವನ್, ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ ಮಾತ್ರವಲ್ಲದೆ, ರಾಜ್ಯದ ಮನೀಶ್ ಪಾಂಡೆ ಹಾಗೂ ಕರುಣ್ ನಾಯರ್'ರಂಥವರಿಗೆ ಮುಂದಿನ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸುವ ಭರ್ಜರಿ ವೇದಿಕೆಯಾಗಿದೆ.
2013-14 ಮತ್ತು 15ರಲ್ಲಿ ಎರಡು ಬಾರಿ ಟ್ರೋಫಿ ಜಯಿಸಿರುವ ಕರ್ನಾಟಕ ತಂಡ, ಹ್ಯಾಟ್ರಿಕ್ ಟ್ರೋಫಿ ಮೇಲೆ ಗುರಿ ಹೊತ್ತಿದ್ದರೆ, 2010-11ರಲ್ಲಿ ಒಮ್ಮೆ ಮಾತ್ರ ವಿಜಯ್ ಹಜಾರೆ ಟ್ರೋಫಿ ಜಯಿಸಿರುವ ಜಾರ್ಖಂಡ್ ಎರಡನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಕಾಯಂ ನಾಯಕ ವಿನಯ್ ಕುಮಾರ್ ಅಲಭ್ಯತೆಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಮನೀಶ್ ಪಾಂಡೆ ವಿಶ್ವಾಸದಲ್ಲಿದ್ದಾರೆ. ಅನುಭವಿ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ತಂಡಕ್ಕೆ ಮರಳಿರುವುದು ಕೂಡ ತಂಡದ ಬಲವನ್ನು ಹೆಚ್ಚಿಸಿದೆ.
ಟೂರ್ನಿಯಲ್ಲಿ 28 ತಂಡಗಳು ಭಾಗವಹಿಸುತ್ತಿದ್ದು, ಮಾರ್ಚ್ 18ರವರೆಗೆ ನಡೆಯಲಿರುವ ಪಂದ್ಯಾವಳಿಯಲ್ಲಿ ಒಟ್ಟಾರೆ 91 ಪಂದ್ಯಗಳು ಜರುಗಲಿವೆ. ಕೋಲ್ಕತಾ, ನವದೆಹಲಿ, ಕಟಕ್, ಚೆನ್ನೈ ಹಾಗೂ ಭುವನೇಶ್ವರದಲ್ಲಿ ನಡೆಯಲಿವೆ.
