ಮೂರನೇ ಏಕದಿನ ಪಂದ್ಯದಲ್ಲಿ ದಾಖಲಾದ ಪ್ರಮುಖ ಅಂಕಿ-ಅಂಶಗಳು ನಿಮ್ಮ ಮುಂದೆ

ಬೆಂಗಳೂರು(ಜು.01): ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಸಮಯೋಚಿತ ಬ್ಯಾಟಿಂಗ್ ಹಾಗೂ ಸ್ಪಿನ್ನರ್ ಅಶ್ವಿನ್ ಮತ್ತು ಕುಲ್ದೀಪ್ ಯಾದವ್ ಅವರ ಕರಾರುವಕ್ಕಾದ ಬೌಲಿಂಗ್ ನೆರವಿನಿಂದ ವೆಸ್ಟ್ ಇಂಡಿಸ್ ತಂಡವನ್ನು 93 ರನ್'ಗಳಿಂದ ಮಣಿಸಿ ಸರಣಿಯಲ್ಲಿ ಭಾರತ 2-0 ಮುನ್ನಡೆ ಕಾಯ್ದುಕೊಂಡಿದೆ.

ಮೂರನೇ ಏಕದಿನ ಪಂದ್ಯದಲ್ಲಿ ದಾಖಲಾದ ಪ್ರಮುಖ ಅಂಕಿ-ಅಂಶಗಳು ನಿಮ್ಮ ಮುಂದೆ

ನಂಬರ್ ಆಟ:

2- ವಿಕೆಟ್ ಕೀಪರ್ ಬ್ಯಾಟ್ಸ್'ಮನ್ ಆಗಿ ಅತಿಹೆಚ್ಚು ರನ್ ಕಲೆಹಾಕಿದ ಎರಡನೇ ಬ್ಯಾಟ್ಸ್'ಮನ್ ಎನ್ನುವ ಶ್ರೇಯಕ್ಕೆ ಮಾಹಿ ಪಾತ್ರರಾಗಿದ್ದಾರೆ. ಮೊದಲ ಸ್ಥಾನದಲ್ಲಿ ಕುಮಾರ್ ಸಂಗಾಕ್ಕರ(13,341 ರನ್) ಇದ್ದರೆ, ಎರಡನೇ ಸ್ಥಾನದಲ್ಲಿದ್ದ ಗಿಲ್'ಕ್ರಿಸ್ಟ್(9410) ಅವರನ್ನು ಮಾಹಿ(9414) ಹಿಂದಿಕ್ಕಿ ಅವರ ಸ್ಥಾನವನ್ನು ಆಕ್ರಮಿಸಿದ್ದಾರೆ.

4- ಏಕದಿನ ಕ್ರಿಕೆಟ್'ನಲ್ಲಿ ಭಾರತದ ಪರ ಗರಿಷ್ಟ ರನ್ ಕಲೆಹಾಕಿದ 4ನೇ ಆಟಗಾರ ಎನ್ನುವ ಖ್ಯಾತಿಗೆ ಮಹೇಂದ್ರ ಸಿಂಗ್ ಧೋನಿ ಪಾತ್ರರಾಗಿದ್ದಾರೆ. ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್(9,378) ಅವರನ್ನು ಹಿಂದಿಕ್ಕಿದ ಮಾಹಿ(9,442) ಬಾರಿಸಿದ್ದಾರೆ. ಮೊದಲ ಮೂರು ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಇದ್ದಾರೆ.

70- ಏಕದಿನ ಕ್ರಿಕೆಟ್'ನಲ್ಲಿ ಶಾನ್ ಪೊಲ್ಲಾಕ್ ಹಾಗೂ ಚಮಿಂಡಾ ವಾಸ್(72) ಅತಿ ಹೆಚ್ಚು ಅಜೇಯರಾಗುಳಿದ ದಾಖಲೆ ಹೊಂದಿದ್ದಾರೆ. ಈಗ ಧೋನಿ 70 ಬಾರಿ ಅಜೇಯರಾಗುಳಿದ ಸಾಧನೆ ಮಾಡಿದ್ದಾರೆ.

2- ಪಿಯೂಸ್ ಚಾವ್ಲಾ ನಂತರ ಸತತ ಎರಡು ಏಕದಿನ ಪಂದ್ಯಗಳಲ್ಲಿ ಮೂರು ವಿಕೆಟ್ ಸಾಧನೆ ಮಾಡಿದ ಕೀರ್ತಿಗೆ ಕುಲ್ದೀಪ್ ಯಾದವ್ ಪಾತ್ರವಾಗಿದ್ದಾರೆ.

3- ಅಜಿಂಕ್ಯ ರಹಾನೆ ಸತತ ಮೂರು ಏಕದಿನ ಪಂದ್ಯಗಳಲ್ಲಿ 79ರ ಸರಾಸರಿಯಂತೆ ಮೂರು ಅರ್ಧಶತಕ ಸಿಡಿಸಿ ಮಿಂಚಿದರು.

4- ವೆಸ್ಟ್ ಇಂಡಿಸ್ ಏಕದಿನ ತಂಡವನ್ನು ಪ್ರತಿನಿಧಿಸಿದ 4ನೇ ಸಹೋದರರ ಜೋಡಿ ಎಂಬ ಕೀರ್ತಿಗೆ ಕೈಲ್ ಮತ್ತು ಶೈ ಹೋಪ್ ಸಹೋದರರು ಪಾತ್ರರಾದರು. ಈ ಮೊದಲು ಡ್ವೇನ್ ಬ್ರಾವೋ-ಡ್ಯಾರೆನ್ ಬ್ರಾವೋ, ಪೆಡ್ರೋ ಕಾಲಿನ್ಸ್- ಫಿಡಲ್ ಎಡ್ವರ್ಡ್ಸ್ ಮತ್ತು ರಾಬರ್ಟ್-ಮರ್ಲಾನ್ ಸ್ಯಾಮ್ಯುಯಲ್ಸ್ ಈ ಮೊದಲು ವೆಸ್ಟ್ ಇಂಡಿಸ್ ತಂಡವನ್ನು ಪ್ರತಿನಿಧಿಸಿದ್ದಾರೆ.

2015- ಅಕ್ಟೋಬರ್ 2015ರಲ್ಲಿ ಕಡೆಯದಾಗಿ ಮಹೇಂದ್ರ ಸಿಂಗ್ ಧೋನಿ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಪಾತ್ರರಾಗಿದ್ದರು.