35 ವರ್ಷ ವಯಸ್ಸಿನ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ಆಗಿದ್ದ ಧೋನಿ ನಾಯಕರಾಗಿದ್ದಾಗ ತೆಗೆದುಕೊಂಡ ನಿರ್ಧಾರಗಳು ತಂಡವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿವೆ. ಅಂತಹ ಐದು ನಿದರ್ಶನಗಳನ್ನು ನಿಮಗಾಗಿ...
ನವದೆಹಲಿ(ಜ.06): ಒನ್'ಡೇ ನಾಯಕತ್ವದಿಂದ ಮಹೇಂದ್ರ ಸಿಂಗ್ ಧೋನಿ ತೆರೆ ಮರೆಗೆ ಸರಿದಿದ್ದಾರೆ. ಧೋನಿ ನಾಯಕತ್ವದಲ್ಲಿದ್ದಾಗ ಭಾರತ ಕ್ರಿಕೆಟ್ ತಂಡ ವಿಶ್ವ ಕ್ರಿಕೆಟ್'ನಲ್ಲಿ ತನ್ನದೇ ಆದ ಛಾಪು ಮೂಡಿಸಿತ್ತು. ಐಸಿಸಿಯ ಎಲ್ಲಾ ಮಾದರಿಯ ಟ್ರೋಫಿ ಜಯಿಸಿದ ಏಕ ಮಾತ್ರ ನಾಯಕ ಎಂಬ ಹಿರಿಮೆ ಧೋನಿ ಅವರಿಗೆ ಸಲ್ಲಬೇಕು. ಇದುವರೆಗೂ ವಿಶ್ವದ್ಯಾಂತ ಯಾವೊಬ್ಬ ನಾಯಕನೂ ಇಂತಹ ಶ್ರೇಯಕ್ಕೆ ಪಾತ್ರರಾಗಿಲ್ಲ.
ಹಠಾತ್ತನೇ ಧೋನಿ ನಾಯಕ ಸ್ಥಾನ ತ್ಯಜಿಸಿದ್ದಾರೆ. ಕಳೆದ ವರ್ಷವೇ ಧೋನಿ ನಾಯಕತ್ವದ ಕೊನೆಯ ಪಂದ್ಯವಾಗಲಿದೆಯೇ ಅಥವಾ ಇಂಗ್ಲೆಂಡ್ ವಿರುದ್ಧದ ಸರಣಿ ಅಂತಿಮವೇ ಎಂಬುದನ್ನು ಆಯ್ಕೆ ಸಮಿತಿ ನಿರ್ಧರಿಸಲಿದೆ. ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆ ಸಮಿತಿ ಇಂದು ಭಾರತ ತಂಡವನ್ನು ಪ್ರಕಟಿಸಲಿದೆ.
35 ವರ್ಷ ವಯಸ್ಸಿನ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ಮನ್ ಆಗಿದ್ದ ಧೋನಿ ನಾಯಕರಾಗಿದ್ದಾಗ ತೆಗೆದುಕೊಂಡ ನಿರ್ಧಾರಗಳು ತಂಡವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿವೆ. ಅಂತಹ ಐದು ನಿದರ್ಶನಗಳನ್ನು ನಿಮಗಾಗಿ...
1. 2007ರ ಟಿ20 ವಿಶ್ವಕಪ್'ನ ಫೈನಲ್ ಪಂದ್ಯದ ಕೊನೆಯ ಓವರ್'ನ್ನು ಜೋಗಿಂದರ್ ಶರ್ಮ ಅವರಿಗೆ ನೀಡಿದ್ದು
ಈ ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿತ್ತು. ನಂತರ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 9 ವಿಕೆಟ್ ಕಳೆದುಕೊಂಡಿತ್ತು. ಕೊನೆಯ ಓವರ್ನಲ್ಲಿ ಪಾಕ್ಗೆ 13ರನ್ಗಳ ಅವಶ್ಯಕತೆಯಿತ್ತು. ಮಿಸ್ಬಾಉಲ್ ಹಕ್ ಮತ್ತು ಕೊನೆಯ ಕ್ರಮಾಂಕದ ಬ್ಯಾಟ್ಸ್ಮನ್ ಕ್ರೀಸ್'ನಲ್ಲಿದ್ದರು. ನಾಯಕ ಧೋನಿ ಅನುಭವಿ ಹರ್ಭಜನ್ ಸಿಂಗ್ ಅವರ ಕೈಗೆ ಚೆಂಡು ನೀಡಲಿದ್ದಾರೆ ಎಂದು ಎಲ್ಲಾರೂ ಆಲೋಚಿಸಿದ್ದರು. ಆದರೂ ಧೋನಿ ಹರ್ಯಾಣದ ಮಧ್ಯಮ ವೇಗಿ ಜೋಗಿಂದರ್ ಶರ್ಮಗೆ ಚೆಂಡನ್ನಿತ್ತರು.
ಡೆತ್ ಓವರ್ ಬೌಲಿಂಗ್'ನಲ್ಲಿ ಸ್ವಲ್ಪ ವಿಚಲಿತರಾದಂತೆ ಕಂಡ ಜೋಗಿಂದರ್ ಮೊದಲ ಎಸೆತವನ್ನು ವೈಡ್ ಎಸೆದರು. ನಂತರದ ಎಸೆತವನ್ನು ಫುಲ್ ಟಾಸ್ ಹಾಕಿದರು. ಕ್ರೀಸ್'ನಲ್ಲಿದ್ದ ಮಿಸ್ಬಾ ಅದ್ಭುತವಾಗಿ ಸಿಕ್ಸರ್ ಎತ್ತಿ ಸಂಭ್ರಮಿಸಿದರು. ನಂತರ ಧೋನಿ ಫೈನ್-ಲೆಗ್ನಲ್ಲಿ ಶ್ರೀಶಾಂತ್ ಅವರನ್ನು ಕ್ಷೇತ್ರರಕ್ಷಣೆಗೆ ನಿಲ್ಲಿಸಿ, ಜೋಗಿಂದರ್ಗೆ ಆಫ್ ಸ್ಟಂಪ್'ನ ಹೊರಗೆ ಬೌಲಿಂಗ್ ಮಾಡುವಂತೆ ಹೇಳಿದರು. ಮಿಸ್ಬಾ ಸ್ಕೂಪ್ ಮಾಡುವ ಭರದಲ್ಲಿ ಶ್ರೀಶಾಂತ್ ಕೈಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಭಾರತ ಚೊಚ್ಚಲ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತು.
2. 2011ರ ಏಕದಿನ ವಿಶ್ವಕಪ್ ಫೈನಲ್'ನಲ್ಲಿ ಯುವಿ ಸ್ಥಾನದಲ್ಲಿ ಬ್ಯಾಟಿಂಗ್'ಗೆ ಇಳಿದದ್ದು
ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯುದ್ದಕ್ಕೂ ಭಾರತ ತಂಡ ಅತ್ಯದ್ಭುತ ಪ್ರದರ್ಶನ ತೋರಿತ್ತು. ತವರಿನಲ್ಲಿ ನಡೆಯುತ್ತಿದ್ದ ವಿಶ್ವಕಪ್'ನಲ್ಲಿ ಧೋನಿ ನಾಯಕತ್ವದ ತಂಡ ಪ್ರಶಸ್ತಿ ಸುತ್ತು ತಲುಪಿತ್ತು. ಫೈನಲ್'ನಲ್ಲಿ ಶ್ರೀಲಂಕಾ ತಂಡ ಮೊದಲು ಬ್ಯಾಟಿಂಗ್ ಮಾಡಿ 275ರನ್'ಗಳ ಗುರಿ ನೀಡಿತ್ತು. ನಂತರ ಬ್ಯಾಟಿಂಗ್ ಆರಂಭಿಸಿದ್ದ ಭಾರತ ತಂಡ 31ರನ್'ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿತ್ತು. ಈ ವೇಳೆ ಧೋನಿ, ಯುವರಾಜ್ ಸಿಂಗ್ ಅವರ ಸ್ಥಾನದಲ್ಲಿ ತಾವೇ ಬ್ಯಾಟಿಂಗ್'ಗೆ ಮುಂದಡಿ ಇಟ್ಟರು. ಧೋನಿ, ಗೌತಮ್ ಗಂಭೀರ್ ಜತೆಯಾಗಿ 4ನೇ ವಿಕೆಟ್ಗೆ 109ರನ್'ಗಳಿಸಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು. 49ನೇ ಓವರ್ನಲ್ಲಿ ಧೋನಿ ಮತ್ತು ಯುವಿ ಕ್ರೀಸ್ನಲ್ಲಿದ್ದರು. ನುವಾನ್ ಕುಲಸೇಖರ್ ಎಸೆದ ಈ ಓವರ್ನ 2ನೇ ಎಸೆತದಲ್ಲಿ ವಿಶ್ಲೇಶಕ ರವಿಶಾಸ್ತ್ರಿ ‘‘ಧೋನಿ ಅವರದೇ ಶೈಲಿಯಲ್ಲಿ ಪಂದ್ಯ ಮುಕ್ತಾಯಗೊಳಿಸ್ತುತಾರೆ’’ ಎನ್ನುತ್ತಿದ್ದ ಹಾಗೆ ಧೋನಿ ಸಿಕ್ಸರ್ ಸಿಡಿಸುವ ಮೂಲಕ ಭಾರತ ತಂಡಕ್ಕೆ 28 ವರ್ಷಗಳ ಬಳಿಕ ವಿಶ್ವಕಪ್ ಟ್ರೋಫಿ ತಂದುಕೊಟ್ಟರು. ಧೋನಿ 79 ಎಸೆತಗಳಲ್ಲಿ 91ರನ್ಗಳಿಸಿ ಅಜೇಯರಾಗುಳಿದರು.
3. 2013ರ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ 18ನೇ ಓವರ್ ಬೌಲಿಂಗ್ ಮಾಡಲು ಇಶಾಂತ್ ಕೈಗೆ ಚೆಂಡನ್ನಿತ್ತಿದ್ದು
ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದರಿಂದ 20 ಓವರ್ಗಳಿಗೆ ಫೈನಲ್ ಪಂದ್ಯವನ್ನು ಸಿಮೀತಗೊಳಿಸಲಾಗಿತ್ತು. ಮೊದಲು ಬ್ಯಾಟ್ ಮಾಡಿದ್ದ ಭಾರತ, ಎದುರಾಳಿ ಇಂಗ್ಲೆಂಡ್ ತಂಡಕ್ಕೆ 130ರನ್'ಗಳ ಗುರಿಯನ್ನು ನೀಡಿತ್ತು. ಆರಂಭದಲ್ಲಿ 4 ವಿಕೆಟ್ಗೆ 46ರನ್ಗಳಿಸಿದ್ದ ಇಂಗ್ಲೆಂಡ್ ಆಘಾತ ಅನುಭವಿಸಿತ್ತು. ನಂತರ ಮಧ್ಯಮ ಕ್ರಮಾಂಕದಲ್ಲಿ ಇಯಾನ್ ಮಾರ್ಗನ್ (33) ಮತ್ತು ರವಿ ಬೋಪಾರ (30)ರನ್'ಗಳಿಸಿ ಅಪಾಯಕಾರಿಯಾಗುವ ಮುನ್ಸೂಚನೆ ತೋರಿದ್ದರು. 18 ಎಸೆತಗಳಲ್ಲಿ 20ರನ್'ಗಳಿಸುವ ಅಗತ್ಯತೆ ಇಂಗ್ಲೆಂಡ್'ಗಿತ್ತು. ಈ ವೇಳೆ ವೇಗಿ ಇಶಾಂತ್ ಶರ್ಮ ಕೈಗೆ ಚೆಂಡನ್ನಿತ್ತ ಧೋನಿ ಪಂದ್ಯದ ಗತಿಯನ್ನೇ ಬದಲಿಸಿದರು. 3ನೇ ಎಸೆತದಲ್ಲಿ ಮಾರ್ಗನ್ ವಿಕೆಟ್ ಕಿತ್ತ ಇಶಾಂತ್ ನಂತರದ ಎಸೆತದಲ್ಲಿ ರವಿ ಬೋಪಾರ ಅವರನ್ನು ಪೆವಿಲಿಯನ್ಗೆ ಕಳುಹಿಸಿ ತಂಡಕ್ಕೆ ಮಹತ್ವದ ತಿರುವು ನೀಡಿದರು. ಕೇವಲ 3 ರನ್'ಗಳ ಅಂತರದಲ್ಲಿ ಇಂಗ್ಲೆಂಡ್'ನ 4 ವಿಕೆಟ್ ಉರುಳಿದ್ದು ತಂಡವನ್ನು ಸೋಲಿನ ದವಡೆಗೆ ನೂಕಿತು. ಇಶಾಂತ್ ಶರ್ಮ 36ಕ್ಕೆ 2 ವಿಕೆಟ್ ಪಡೆದು ಮಿಂಚಿದರು.
4. 2014ರ ಲಾರ್ಡ್ಸ್ ಟೆಸ್ಟ್ನಲ್ಲಿ ವೇಗಿ ಇಶಾಂತ್ರೊಂದಿಗೆ ಚರ್ಚಿಸಿದ ಧೋನಿ ಬೌಲಿಂಗ್ ತಂತ್ರವನ್ನು ಬದಲಿಸಲು ಹೇಳಿದ್ದು
ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ಭಾರತ 95ರನ್'ಗಳ ಗೆಲುವು ಪಡೆಯಿತು. ಕೊನೆಯ ದಿನದ ಮೊದಲ ಹಂತದ ಪಂದ್ಯ ನಡೆಯುತ್ತಿತ್ತು. ಇಂಗ್ಲೆಂಡ್ ತಂಡದ ಜೋ ರೂಟ್ ಮತ್ತು ಮೊಯಿನ್ ಅಲಿ 5ನೇ ವಿಕೆಟ್ ಜತೆಯಾಟ ನಿರ್ವಹಿಸುತ್ತಿದ್ದರು. ಮೊದಲ ಎರಡು ಗಂಟೆ ವಿಕೆಟ್ ಕಾಯ್ದುಕೊಂಡು ಬ್ಯಾಟಿಂಗ್ ಮಾಡಿದ ಜೋಡಿ ತಂಡಕ್ಕೆ ಆಸರೆಯಾಗಿತ್ತು. ಈ ವೇಳೆ ವೇಗಿ ಇಶಾಂತ್ ಅವರೊಂದಿಗೆ ಚರ್ಚಿಸಿದ ಧೋನಿ ಬೌಲಿಂಗ್ ತಂತ್ರಗಾರಿಕೆಯನ್ನು ಬದಲಿಸುವಂತೆ ಸಲಹೆ ನೀಡಿದ್ದರು. ಆರಂಭದಲ್ಲಿ ಒಪ್ಪದ ಇಶಾಂತ್, ನಂತರ ತಂತ್ರ ಬದಲಾವಣೆಯಂತೆ ಬೌಲಿಂಗ್ ಮಾಡಿದ್ದರು. ಅಚ್ಚರಿ ಎಂಬಂತೆ ಇಂಗ್ಲೆಂಡ್ ತಂಡದ ಪತನ ಶುರುವಾಯಿತು. ಇಶಾಂತ್ 5 ವಿಕೆಟ್ ಕಬಳಿಸಿದರು. ಭಾರತಕ್ಕೆ 1-0 ಮುನ್ನಡೆ ದೊರಕಿತು.
5. 2016ರ ಟಿ20 ವಿಶ್ವಕಪ್ ಟೂರ್ನಿಯ ಬಾಂಗ್ಲಾದೇಶ ವಿರುದ್ಧ ಪಂದ್ಯದ ಕೊನೆಯ ಎಸೆತವನ್ನು ಬಲ ಕೈಗವಸಿನಲ್ಲಿ ಹಿಡಿದು ರನೌಟ್ ಮಾಡಿದ್ದು
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ, ಬಾಂಗ್ಲಾಗೆ 146ರನ್'ಗಳ ಗುರಿ ನೀಡಿತ್ತು. ಬಾಂಗ್ಲಾ ಕೊನೆಯ ಓವರ್ನ ಅಂತಿಮ 3 ಎಸೆತಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ವಿರೋಚಿತ ಸೋಲು ಕಂಡಿತ್ತು. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಿದ್ದ ಈ ಓವರ್ನಲ್ಲಿ ಮೊದಲ 3 ಎಸೆತಗಳಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟಿದ್ದರು. ಕೊನೆಯ ಎಸೆತದಲ್ಲಿ ಬಾಂಗ್ಲಾ ಗೆಲುವಿಗೆ 2 ರನ್'ಗಳ ಅವಶ್ಯಕತೆಯಿತ್ತು. ಕ್ರೀಸ್'ನಲ್ಲಿದ್ದ ಬ್ಯಾಟ್ಸ್ಮನ್'ಗಳು ಎರಡು ರನ್'ಗಳಿಸಬೇಕು. ಈ ವೇಳೆ ಹಾರ್ದಿಕ್'ಗೆ ಯಾರ್ಕರ್ ಎಸೆಯಲು ಹೇಳಿದ ಧೋನಿ ಬೇಗನೇ ಓಡಿಬಂದು ಚೆಂಡನ್ನು ಬಲ ಕೈಗವಸಿನಲ್ಲಿ ಇರಿಸಿ ರನೌಟ್ ಮಾಡುವ ಯೋಚನೆ ಹಾಕಿಕೊಂಡಿದ್ದರು. ಅದರಂತೆಯೇ ಆಗಿದ್ದರಿಂದ ಬಾಂಗ್ಲಾದ ಮುಸ್ತಾಫಿಜುರ್ ರೆಹಮಾನ್ ರನೌಟ್ ಆದರು.
