2027ರ ಏಕದಿನ ವಿಶ್ವಕಪ್‌ಗೆ ಭಾರತ ತಂಡದ ಸಿದ್ಧತೆ ಈಗಿನಿಂದಲೇ ಆರಂಭವಾಗಿರುವ ಬೆನ್ನಲ್ಲೇ, ಅನುಭವಿ ವೇಗಿ ಮೊಹಮ್ಮದ್ ಶಮಿ ಅವರ ರಾಷ್ಟ್ರೀಯ ತಂಡದ ಭವಿಷ್ಯದ ಬಗ್ಗೆ ಚರ್ಚೆ ಜೋರಾಗಿದೆ. ಭಾರತ ತಂಡದ ಮಾಜಿ ಕ್ರಿಕೆಟಿಗ ಶಮಿಯನ್ನು ಏಕದಿನ ಹಾಗೂ ಟೆಸ್ಟ್ ತಂಡಗಳಲ್ಲಿ ಸೇರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

2027ರ ಏಕದಿನ ವಿಶ್ವಕಪ್‌ಗೆ ಭಾರತ ತಂಡದ ಸಿದ್ಧತೆ ಈಗಿನಿಂದಲೇ ಆರಂಭವಾಗಿರುವ ಬೆನ್ನಲ್ಲೇ, ಅನುಭವಿ ವೇಗಿ ಮೊಹಮ್ಮದ್ ಶಮಿ ಅವರ ರಾಷ್ಟ್ರೀಯ ತಂಡದ ಭವಿಷ್ಯದ ಬಗ್ಗೆ ಚರ್ಚೆ ಜೋರಾಗಿದೆ. ಭಾರತ ತಂಡದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್, ಶಮಿಯನ್ನು ಏಕದಿನ ಹಾಗೂ ಟೆಸ್ಟ್ ತಂಡಗಳಲ್ಲಿ ಸೇರಿಸಿಕೊಳ್ಳಬೇಕು ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ. ವಿಶೇಷವಾಗಿ ಸುಮಾರು ನಾಲ್ಕು ವರ್ಷಗಳ ಬಳಿಕ ಭುವನೇಶ್ವರ್ ಕುಮಾರ್ ರಾಷ್ಟ್ರೀಯ ತಂಡಕ್ಕೆ ಮರಳಿರುವ ಹಿನ್ನೆಲೆಯಲ್ಲಿ, ಶಮಿಗೂ ಮತ್ತೊಮ್ಮೆ ಅವಕಾಶ ನೀಡುವ ಸಮಯ ಬಂದಿದೆ ಎಂದು ಜಾಫರ್ ಅಭಿಪ್ರಾಯಪಟ್ಟಿದ್ದಾರೆ.

ಶಮಿ ಭಾರತ ಪರ ಕೊನೆಯ ಬಾರಿಗೆ 2025ರಲ್ಲಿ ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಅವರು ರಾಷ್ಟ್ರೀಯ ತಂಡದಿಂದ ದೂರ ಉಳಿದಿದ್ದಾರೆ. ಆದರೆ ದೇಶೀಯ ಕ್ರಿಕೆಟ್‌ನಲ್ಲಿ ಬಂಗಾಳ ಪರ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಶಮಿಯನ್ನು ಆಯ್ಕೆದಾರರು ಮತ್ತೆ ಮತ್ತೆ ಕಡೆಗಣಿಸುತ್ತಿರುವುದು ಚರ್ಚೆಗೆ ಕಾರಣವಾಗಿದೆ.

‘ವಿಶ್ವಕಪ್ ಹತ್ತಿರದಲ್ಲಿದೆ, ಶಮಿ ಏಕದಿನ ತಂಡದಲ್ಲಿರಬೇಕು’

ವಾಸಿಂ ಜಾಫರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುವಾಗ ಭಾರತದ ಏಕದಿನ ತಂಡದ ಬೌಲಿಂಗ್ ಸಂಯೋಜನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತ ಈಗಾಗಲೇ ಗುರ್ನೂರ್ ಬ್ರಾರ್, ಪ್ರಸಿದ್ಧ್ ಕೃಷ್ಣ ಮತ್ತು ನಿತೀಶ್ ಕುಮಾರ್ ರೆಡ್ಡಿ ಸೇರಿದಂತೆ ಹಲವು ಆಟಗಾರರನ್ನು ಪ್ರಯತ್ನಿಸಿದೆ. ಆದರೆ ಎರಡನೇ ಮತ್ತು ಮೂರನೇ ವೇಗದ ಬೌಲರ್ ಸ್ಥಾನದಲ್ಲಿ ತಂಡಕ್ಕೆ ಇನ್ನೂ ಸಂಪೂರ್ಣ ವಿಶ್ವಾಸ ಮೂಡಿಲ್ಲ ಎಂದು ಜಾಫರ್ ಹೇಳಿದ್ದಾರೆ.

ಅವರ ಪ್ರಕಾರ, ಜಸ್ಪ್ರೀತ್ ಬುಮ್ರಾ ಭಾರತದ ನಂ.1 ವೇಗಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಅವರೊಂದಿಗೆ ಯಾರು ಎರಡನೇ ಹಾಗೂ ಮೂರನೇ ಸೀಮರ್ ಆಗಿರಬೇಕು ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ 2027ರ ವಿಶ್ವಕಪ್ ಸಮೀಪಿಸುತ್ತಿರುವುದರಿಂದ ಶಮಿ ಏಕದಿನ ತಂಡದಲ್ಲಿರಬೇಕು ಎಂದು ಜಾಫರ್ ಹೇಳಿದ್ದಾರೆ.

‘ನನ್ನ ಮೊದಲ ಆಯ್ಕೆ ಬುಮ್ರಾ, ಶಮಿ ಮತ್ತು ಸಿರಾಜ್’

ಭಾರತ ಯುವ ವೇಗಿಗಳನ್ನು ಪ್ರಯೋಗಿಸುವ ಬದಲು ಅನುಭವಿ ಬೌಲರ್‌ಗಳ ಮೇಲೆ ನಂಬಿಕೆ ಇಡಬೇಕು ಎಂಬುದು ಜಾಫರ್ ಅವರ ವಾದ.ಅವರ ಪ್ರಕಾರ, ತಂಡದ ಮೊದಲ ಆಯ್ಕೆಯ ವೇಗದ ಬೌಲಿಂಗ್ ದಾಳಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಆಗಿರಬೇಕು. “ಆ ಗುಣ ನಿಮ್ಮಲ್ಲಿದ್ದಾಗ, ನೀವು ಅವರನ್ನು ಆಡಿಸಬೇಕು. ನನ್ನ ಮೊದಲ ಆಯ್ಕೆ ಬುಮ್ರಾ, ಶಮಿ ಮತ್ತು ಸಿರಾಜ್. ನಂತರ ಪುನರ್‌ನಿರ್ಮಾಣದ ಬಗ್ಗೆ ಯೋಚಿಸುತ್ತೇನೆ.”

2027ರ ವಿಶ್ವಕಪ್‌ಗೂ ಮುನ್ನ ಭಾರತ ತನ್ನ ಅತ್ಯುತ್ತಮ ಸಂಯೋಜನೆಯನ್ನು ಕಂಡುಕೊಳ್ಳಬೇಕಿದೆ. ಹೀಗಾಗಿ ಅನುಭವಿಗಳಾದ ಶಮಿ ಮತ್ತು ಸಿರಾಜ್‌ಗೆ ನಿರಂತರ ಅವಕಾಶ ನೀಡಿ ತಂಡವನ್ನು ಕಟ್ಟಬೇಕು ಎಂಬುದು ಜಾಫರ್ ಅವರ ಅಭಿಪ್ರಾಯ.

ಶಮಿಯನ್ನು ಆಯ್ಕೆ ಮಾಡದಿರಲು ಫಿಟ್ನೆಸ್ ಕಾರಣ?

ಶಮಿ ಅವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡದಿರುವ ಕುರಿತು ಈ ಹಿಂದೆ ಬಿಸಿಸಿಐ ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರನ್ನು ಪ್ರಶ್ನಿಸಲಾಗಿತ್ತು. ಆಗ ಶಮಿ ಅವರ ಫಿಟ್ನೆಸ್ ಸಮಸ್ಯೆಗಳನ್ನು ಕಾರಣವಾಗಿ ಉಲ್ಲೇಖಿಸಲಾಗಿತ್ತು. ಆದರೆ ಶಮಿ ದೇಶೀಯ ಮಟ್ಟದಲ್ಲಿ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದು, ವಿಕೆಟ್ ಪಡೆಯುತ್ತಿರುವುದರಿಂದ ಅವರನ್ನು ಮತ್ತೆ ರಾಷ್ಟ್ರೀಯ ತಂಡಕ್ಕೆ ಪರಿಗಣಿಸಬೇಕೆಂಬ ಒತ್ತಾಯ ಇದೀಗ ಹೆಚ್ಚಾಗಿದೆ. ಇದರ ನಡುವೆ ಭುವನೇಶ್ವರ್ ಕುಮಾರ್ ಸುಮಾರು ನಾಲ್ಕು ವರ್ಷಗಳ ಬಳಿಕ ಭಾರತ ತಂಡಕ್ಕೆ ಮರಳಿರುವುದು ಅನುಭವಿ ಆಟಗಾರರಿಗೆ ರಾಷ್ಟ್ರೀಯ ತಂಡದ ಬಾಗಿಲು ಇನ್ನೂ ತೆರೆದಿದೆ ಎಂಬ ಚರ್ಚೆಗೆ ಕಾರಣವಾಗಿದೆ.

2023 ವಿಶ್ವಕಪ್‌ನಲ್ಲಿ ಶಮಿ ಮಾಡಿದ್ದೇನು ಗೊತ್ತಾ?

ಮೊಹಮ್ಮದ್ ಶಮಿ ಅವರ ಕಮ್‌ಬ್ಯಾಕ್‌ಗೆ ವಾಸಿಂ ಜಾಫರ್ ಬೆಂಬಲ ನೀಡುತ್ತಿರುವುದಕ್ಕೆ ಅವರ ಹಿಂದಿನ ಪ್ರದರ್ಶನಗಳೇ ಪ್ರಮುಖ ಕಾರಣ.ವಿಶೇಷವಾಗಿ 2023ರ ಏಕದಿನ ವಿಶ್ವಕಪ್‌ನಲ್ಲಿ ಶಮಿ ಭಾರತದ ಬೌಲಿಂಗ್ ದಾಳಿಯ ದಿಕ್ಕನ್ನೇ ಬದಲಿಸಿದ್ದರು.

ಟೂರ್ನಿಯ ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಶಮಿಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಬಳಿಕ ಶಮಿ ಆಡುವ ಹನ್ನೊಂದರ ಬಳಗಕ್ಕೆ ಮರಳಿದರು. ತಮಗೆ ಸಿಕ್ಕ ಮೊದಲ ಅವಕಾಶದಲ್ಲೇ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು.

ಮೊದಲ ಪಂದ್ಯದಲ್ಲೇ 5 ವಿಕೆಟ್!

ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಶಮಿ 5 ವಿಕೆಟ್ ಕಬಳಿಸಿ 54 ರನ್ ನೀಡಿದರು. ವಿಶ್ವಕಪ್‌ನಲ್ಲಿ ತಮ್ಮ ಮೊದಲ ಪಂದ್ಯದಲ್ಲೇ ಐದು ವಿಕೆಟ್ ಪಡೆದು ನ್ಯೂಜಿಲೆಂಡ್ ಬ್ಯಾಟಿಂಗ್‌ ಅನ್ನು ಅಸ್ತವ್ಯಸ್ತಗೊಳಿಸಿದರು.

ಅಷ್ಟಕ್ಕೆ ಶಮಿ ನಿಲ್ಲಲಿಲ್ಲ. ಶ್ರೀಲಂಕಾ ವಿರುದ್ಧದ ಲೀಗ್ ಹಂತದ ಪಂದ್ಯದಲ್ಲಿ ಮತ್ತೊಮ್ಮೆ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಅವರು 5/18 ಅಂಕಿಅಂಶ ದಾಖಲಿಸಿದರು. ನಂತರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಮತ್ತೊಮ್ಮೆ ಮಾರಕ ಬೌಲಿಂಗ್ ನಡೆಸಿದರು.

ಆ ಪಂದ್ಯದಲ್ಲಿ ಶಮಿ 7/57 ಬೌಲಿಂಗ್ ಅಂಕಿಅಂಶ ದಾಖಲಿಸಿದರು. ಈ ಪ್ರದರ್ಶನದ ಮೂಲಕ ಅವರು ಏಕದಿನ ವಿಶ್ವಕಪ್‌ನಲ್ಲಿ ಭಾರತೀಯ ಬೌಲರ್ ಒಬ್ಬರು ದಾಖಲಿಸಿದ ಅತ್ಯುತ್ತಮ ಬೌಲಿಂಗ್ ಅಂಕಿಅಂಶವನ್ನು ನಿರ್ಮಿಸಿದರು. ಈ ದಾಖಲೆ ಇಂದಿಗೂ ಶಮಿ ಹೆಸರಿನಲ್ಲೇ ಇದೆ.

ಬುಮ್ರಾ ಇಲ್ಲದಿದ್ದರೆ ಭಾರತದ ಬೌಲಿಂಗ್ ದುರ್ಬಲವಾಗುತ್ತಿದೆಯೇ?

ಇತ್ತೀಚಿನ ಪಂದ್ಯಗಳನ್ನೂ ಗಮನಿಸಿದರೆ ಜಾಫರ್ ಅವರ ಕಳವಳಕ್ಕೆ ಕಾರಣವಿದೆ. ಜಸ್ಪ್ರೀತ್ ಬುಮ್ರಾ ಇಲ್ಲದ ಸಂದರ್ಭಗಳಲ್ಲಿ ಭಾರತದ ವೇಗದ ಬೌಲಿಂಗ್ ದಾಳಿ ಸಾಕಷ್ಟು ದುರ್ಬಲವಾಗಿ ಕಾಣಿಸಿಕೊಂಡಿದೆ. ವೆಸ್ಟ್ ಇಂಡೀಸ್ ವಿರುದ್ಧದ ಇತ್ತೀಚಿನ ಏಕದಿನ ಸರಣಿಯಲ್ಲೂ ಎದುರಾಳಿ ತಂಡವು 295/7, 405/7 ಮತ್ತು 352/5 ಎಂಬ ಬೃಹತ್ ಮೊತ್ತಗಳನ್ನು ದಾಖಲಿಸಿತ್ತು. 2027ರ ವಿಶ್ವಕಪ್ ಸಮೀಪಿಸುತ್ತಿರುವ ಸಂದರ್ಭದಲ್ಲಿ ಇಂತಹ ಪ್ರದರ್ಶನಗಳು ಭಾರತಕ್ಕೆ ಎಚ್ಚರಿಕೆಯ ಗಂಟೆಯಂತಿವೆ. ವಿಶ್ವಕಪ್‌ನಲ್ಲಿ ಯಶಸ್ಸು ಸಾಧಿಸಲು ಬೌಲಿಂಗ್ ವಿಭಾಗದಲ್ಲಿ ಅನುಭವ ಮತ್ತು ಯುವಶಕ್ತಿಯ ನಡುವೆ ಸರಿಯಾದ ಸಮತೋಲನ ಅಗತ್ಯವಾಗಿದೆ.