ವಿರಾಟ್ ಕೊಹ್ಲಿಯನ್ನ ಔಟ್ ಮಾಡಬೇಕು ಅನ್ನೋದು ಎಲ್ಲಾ ಬೌಲರ್‌ಗಳ ಕನಸು. ಆದರೆ ಎಲ್ಲರಿಗೂ ಅದು ಸಾಧ್ಯವಾಗೋದಿಲ್ಲ. ಇದೀಗ ಪಾಕಿಸ್ತಾನ ವೇಗಿ ಕೊಹ್ಲಿ ವಿಕೆಟ್ ಕಬಳಿಸಲು ಟಿಪ್ಸ್ ನೀಡಿದ್ದಾರೆ. 

ದುಬೈ(ಅ.17): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡುವುದೇ ದೊಡ್ಡ ತಲೆನೋವು. ಪ್ರತಿ ಎಸೆತದಲ್ಲೂ ರನ್ ಕಲೆಹಾಕೋ ಸಾಮರ್ಥ್ಯ ಕೊಹ್ಲಿಗಿದೆ. ಆದರೆ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಹುಬೇಗನೆ ಪಾಕಿಸ್ತಾನ ವೇಗಿ ಮೊಹಮ್ಮದ್ ಅಮೀರ್‌ಗೆ ವಿಕೆಟ್ ಒಪ್ಪಿಸಿದ್ದರು.

ಕೊಹ್ಲಿ ಸೇರಿದಂತೆ ಶಿಖರ್ ಧವನ್, ರೋಹಿತ್ ಶರ್ಮಾ ಆರಂಭಿಕ 9 ಓವರ್‌ಗಳಲ್ಲೇ ಪೆವಿಲಿಯನ್ ಸೇರಿದ್ದರು. ಇಷ್ಟೇ ಅಲ್ಲ ಟೀಂ ಇಂಡಿಯಾ ಸೋಲು ಕಂಡಿತ್ತು. ಪಾಕಿಸ್ತಾನ ಗೆಲುವಿಗೆ ಕಾರಣವಾಗಿದ್ದು ವೇಗಿ ಮೊಹಮ್ಮದ್ ಅಮೀರ್. ಇದೀಗ ವಿರಾಟ್ ಕೊಹ್ಲಿ ವಿಕೆಟ್ ಕಬಳಿಸಲು ಅಮೀರ್ ಬಳಸಿದ ತಂತ್ರವನ್ನ ಬಹಿರಂಗ ಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಕ್ರೀಸ್‌ಗೆ ಬಂದಂತೆ ಇನ್‌ಸ್ವಿಂಗ್ ಎಸೆತವನ್ನ ಹಾಕಿದ್ದೆ. ಕೊಹ್ಲಿ ತಡಕಾಡಿದರು. ಆದರೆ ಮರು ಎಸೆತವನ್ನ ಅದೇ ರೀತಿ ಹಾಕಿದರೆ ಕೊಹ್ಲಿ ಖಂಡಿತವಾಗಲೂ ರನ್ ಕಲೆ ಹಾಕೋ ವಿಶ್ವಾಸವಿತ್ತು. ಹೀಗಾಗಿ ಔಟ್‌ಸ್ವಿಂಗ್ ಡೆಲಿವರಿ ಮೂಲಕ ಕೊಹ್ಲಿ ವಿಕೆಟ್ ಕಬಳಿಸಿದ್ದೆ ಎಂದು ಮೊಹಮ್ಮದ್ ಅಮೀರ್ ಹೇಳಿದ್ದಾರೆ.