ಕೆ.ಎಲ್ ರಾಹುಲ್, ಯುವರಾಜ್ ಸಿಂಗ್, ಮನೀಶ್ ಪಾಂಡೆ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾದರು.
ಕಾನ್ಪುರ(ಜ.26): ಟೆಸ್ಟ್ ಹಾಗೂ ಏಕದಿನ ಸರಣಿ ಗೆದ್ದಿದ್ದ ಕೊಹ್ಲಿ ನೇತೃತ್ವದ ಟೀಂ ಇಂಡಿಯಾಗೆ ಮೊದಲ ಟಿ20 ಪಂದ್ಯದಲ್ಲೇ ನಿರಾಸೆ ಅನುಭವಿಸಿದೆ. ಭಾರತ ನೀಡಿದ 147 ರನ್'ಗಳ ಸಾಧಾರಣ ಮೊತ್ತ ಬೆನ್ನತ್ತಿದ ಆಂಗ್ಲರ ಪಡೆ 7 ವಿಕೆಟ್'ಗಳ ಜಯಭೇರಿ ಬಾರಿಸಿದೆ.
ಇಲ್ಲಿನ ಗ್ರೀನ್ ಪಾರ್ಕ್'ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಕ್ಷೇತ್ರರಕ್ಷಣೆ ಆಯ್ದುಕೊಂಡಿತು. ನಾಯಕ ಮಾರ್ಗನ್ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ಇಂಗ್ಲೆಂಡ್ ಪಡೆ ಬಲಿಷ್ಟ ಭಾರತದ ಬ್ಯಾಟ್ಸ್'ಮನ್'ಗಳನ್ನು 147 ರನ್'ಗಳಿಗೆ ನಿಯಂತ್ರಿಸುವಲ್ಲಿ ಸಫಲವಾಯಿತು. ಆರಂಭಿಕರಾಗಿ ಕಣಕ್ಕಿಳಿದಿದ್ದನಾಯಕ ಕೊಹ್ಲಿ 29 ರನ್ ಗಳಿಸಿದರೆ, ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದ ರೈನಾ 36 ರನ್ ಕಲೆಹಾಕಿದರು. ಕೊನೆಯಲ್ಲಿ ವಿಕೆಟ್ ಕೀಪರ್ ಧೋನಿ 36 ರನ್ ಬಾರಿಸಿ ತಂಡದ ಮೊತ್ತವನ್ನು 150ರ ಸಮೀಪ ತರುವಲ್ಲಿ ಯಶಸ್ವಿಯಾದರು. ಉಳಿದಂತೆ ಕೆ.ಎಲ್ ರಾಹುಲ್, ಯುವರಾಜ್ ಸಿಂಗ್, ಮನೀಶ್ ಪಾಂಡೆ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾದರು.
ಇಂಗ್ಲೆಂಡ್ ಪರ ಶಿಸ್ತುಬದ್ಧ ದಾಳಿ ನಡೆಸಿದ ಮೊಯಿನ್ ಅಲಿ ಎರಡು ವಿಕೆಟ್ ಕಬಳಿಸಿದರೆ, ಬೆನ್ ಸ್ಟೋಕ್ಸ್, ಲಿಯಾಮ್ ಪ್ಲಂಕಟ್, ಕ್ರಿಸ್ ಜೋರ್ಡಾನ್, ಮಿಲ್ಸ್ ತಲಾ ಒಂದು ವಿಕೆಟ್ ಪಡೆಯುವಲ್ಲಿ ಸಫಲರಾದರು.
ಭಾರತ ನೀಡಿದ ಸುಲಭ ಗುರಿ ಬೆನ್ನತ್ತಿದ ಆಂಗ್ಲರ ಪಡೆ ಭರ್ಜರಿ ಆರಂಭವನ್ನೇ ಪಡೆಯಿತು. ಆರಂಭಿಕರಾದ ಜೇಸನ್ರಾಯ್ ಹಾಗೂ ಸಾಮ್ ಬಿಲ್ಲಿಂಗ್ಸ್ ಮೊದಲ ವಿಕೆಟ್'ಗೆ 3.2 ಓವರ್'ಗಳಲ್ಲಿ 42 ರನ್ ಕಲೆ ಹಾಕಿದರು. ಆದರೆ ನಾಲ್ಕನೇ ಓವರ್'ನಲ್ಲಿ ಈ ಇಬ್ಬರು ಆರಂಭಿಕರಿಗೆ ಪೆವಿಲಿಯನ್ ಹಾದಿ ತೋರಿಸುವ ಮೂಲಕ ಸ್ಪಿನ್ನರ್ ಯಜುವೇಂದ್ರ ಚಾಹಲ್ ಭಾರತಕ್ಕೆ ಮೇಲುಗೈ ತಂದುಕೊಡಲು ಪ್ರಯತ್ನಿಸಿದರು. ಆದರೆ ನಂತರ ಜೊತೆಯಾದ ಜೋ ರೂಟ್ ಹಾಗೂ ಇಯಾನ್ ಮಾರ್ಗನ್ ಆರಂಭದಲ್ಲಿ ಎಚ್ಚರಿಕೆಯಿಂದ ರನ್ ಕಲೆ ಹಾಕುತ್ತಾ ಸಾಗಿದರು. ಕೊನೆಯಲ್ಲಿ ಆಕ್ರಮಣಕಾರಿ ಆಟವಾಡಿದ ಮಾರ್ಗನ್ ಅರ್ಧಶತಕ ಗಳಿಸಿ ಪರ್ವೇಜ್ ರಸೂಲ್'ಗೆ ಚೊಚ್ಚಲ ಬಲಿಯಾದರು. ಅಷ್ಟರಲ್ಲಾಗಲೇ ಬಹುತೇಕ ಗೆಲುವು ಟೀಂ ಇಂಡಿಯಾದಿಂದ ಕೈ ಜಾರಿತ್ತು.
21 ರನ್'ಗಳಿಗೆ ಎರಡು ಪ್ರಮುಖ ವಿಕೆಟ್ ಕಬಳಿಸಿದ ಮೊಯಿನ್ ಅಲಿ ಪಂದ್ಯಪುರುಷೋತತ್ತಮ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್:
ಭಾರತ: 147/7
ಮಹೇಂದ್ರ ಸಿಂಗ್ ಧೋನಿ: 36*
ಸುರೇಶ್ ರೈನಾ: 34
ಮೋಯಿನ್ ಅಲಿ: 21/2
ಇಂಗ್ಲೆಂಡ್: 148/3
ಇಯಾನ್ ಮಾರ್ಗನ್: 51
ಜೋ ರೂಟ್: 46*
ಯಜುವೇಂದ್ರ ಚಾಹಲ್: 27/2
