ಇಲ್ಲಿನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಭಾರತ ತಂಡದ ಆಟಗಾರ್ತಿಯರಿಗೆ ಬಿಸಿಸಿಐ ವತಿಯಿಂದ ಭವ್ಯ ಸ್ವಾಗತ ದೊರೆತಿದೆ.
ಮುಂಬೈ(ಜು.26): ವಿಶ್ವಕಪ್ ಟೂರ್ನಿಯ ಫೈನಲ್'ನಲ್ಲಿ ಆತಿಥೇಯ ಇಂಗ್ಲೆಂಡ್ ಎದುರು ರೋಚಕ ಸೋಲುಂಡು ರನ್ನರ್'ಅಪ್ ಸ್ಥಾನ ಪಡೆದ ಮಿಥಾಲಿ ರಾಜ್ ನೇತೃತ್ವದ ವನಿತೆಯರ ಟೀಂ ಇಂಡಿಯಾ ತಂಡಕ್ಕೆ ತವರಿನಲ್ಲಿ ಭವ್ಯ ಸ್ವಾಗತ ಸಿಕ್ಕಿದೆ.
ಇಲ್ಲಿನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಭಾರತ ತಂಡದ ಆಟಗಾರ್ತಿಯರಿಗೆ ಬಿಸಿಸಿಐ ವತಿಯಿಂದ ಭವ್ಯ ಸ್ವಾಗತ ದೊರೆತಿದೆ. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಹಾಜರಿದ್ದು ಶುಭ ಹಾರೈಸಿದರು.
ಈ ವೇಳೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವನಿತೆಯರ ತಂಡದ ನಾಯಕಿ ಮಿಥಾಲಿ ರಾಜ್, ‘ಇದು ಇನ್ನು ಆರಂಭವಷ್ಟೇ, ಭಾರತ ಮಹಿಳಾ ಕ್ರಿಕೆಟ್'ಗೆ ಒಳ್ಳೆಯ ದಿನಗಳು ಈಗಷ್ಟೇ ಆರಂಭಗೊಂಡಿದೆ’ ಎಂದರು.
‘ಈ ರೀತಿಯ ಸ್ವಾಗತ ಕಂಡು ಅಪಾರ ಸಂತೋಷವಾಗಿದೆ. ನಮ್ಮ ತಂಡಕ್ಕೆ ಈ ರೀತಿಯ ಇದೇ ಮೊದಲು. ಆದರೆ, 2005ರಲ್ಲಿ ಇದೇ ರೀತಿಯ ಸ್ವಾಗತ ನನಗೆ ದೊರೆತಿತ್ತು. ಇದೀಗ ಬಿಸಿಸಿಐನಿಂದ ದೊರೆತಿರುವ ಭವ್ಯ ಸ್ವಾಗತ ನೋಡಿ ಆಟಗಾರ್ತಿಯರು ಸಂತಸಗೊಂಡಿದ್ದಾರೆ’ ಎಂದು ಹೇಳಿದರು. 2005ರಲ್ಲೂ ಕೂಡಾ ಭಾರತ ತಂಡ ಫೈನಲ್ ಪ್ರವೇಶಿಸಿತ್ತು.
‘ಪಂದ್ಯಗಳು ಟಿವಿಯಲ್ಲಿ ನೇರ ಪ್ರಸಾರವಾಗಿದ್ದು, ಇಷ್ಟೆಲ್ಲಾ ಪ್ರತಿಕ್ರಿಯೆಗೆ ಕಾರಣವಾಯಿತು. ಪ್ರತಿ ಬಾರಿಯೂ ನಾನು ಇದನ್ನೇ ಹೇಳುತ್ತಿದ್ದೆ. ಪಂದ್ಯಗಳು ಹೆಚ್ಚೆಚ್ಚು ಪ್ರದರ್ಶನ ಕಂಡಷ್ಟು, ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತದೆ. ಅಭಿಮಾನಿಗಳನ್ನು ಹೆಚ್ಚೆಚ್ಚು ಆಕರ್ಷಿಸುತ್ತದೆ’ ಎಂದರು.
