ನವದೆಹಲಿ(ಅ.04): ಭಾರತದ ವಿರುದ್ಧ ಕಿಡಿಕಾರಿದ್ದ ಪಾಕಿಸ್ತಾನ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಹೇಳಿಕೆಗೆ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ತಿರುಗೇಟು ನೀಡಿದ್ದಾರೆ. ಯುದ್ಧಭೂಮಿ ಹಾಗೂ ಕ್ರಿಕೆಟ್’ನಲ್ಲಿ ಭಾರತದೆದುರು ಕಳಪೆ ಪ್ರದರ್ಶನ ತೋರಿರುವ ಶಾಕ್’ನಿಂದ ಮಿಯಾಂದಾದ್ ಹೊರಬಂದಿಲ್ಲ ಎಂದು ಲೇವಡಿ ಮಾಡಿದ್ದಾರೆ.

ಗಡಿ ನಿಯಂತ್ರಣ ರೇಖೆ ದಾಟಿ ಸರ್ಜಿಕಲ್ ದಾಳಿ ನಡೆಸಿರುವ ಭಾರತದ ಕ್ರಮಕ್ಕೆ ಪ್ರತಿಕ್ರಿಯಿಸಿದ್ದ ಮಾಜಿ ಕ್ರಿಕೆಟಿಗ, ಭಾರತವನ್ನು ಪೂರ್ಣಪ್ರಮಾಣದಲ್ಲಿ ಎದುರಿಸಲು ಪಾಕಿಸ್ತಾನ ಸಿದ್ದವಿದೆ ಎಂದಿದ್ದರು.

ಪಾಕಿಸ್ತಾನವು ಇನ್ನೂ 1965, 1971 ಹಾಗೂ ಕಾರ್ಗಿಲ್ ಯುದ್ಧದ ಆಘಾತದಿಂದ ಹೊರಬಂದಿಲ್ಲ. ಅದೇರೀತಿ ಪಾಕಿಸ್ತಾನವು ವಿಶ್ವಕಪ್ ಕ್ರಿಕೆಟ್’ನಲ್ಲಿ ಒಮ್ಮೆಯೂ ಭಾರತವನ್ನು ಮಣಿಸಲು ಸಾಧ್ಯವಾಗಿಲ್ಲ. ಅದು ಕ್ರಿಕೆಟ್ ಆಗಿರಲಿ ಇಲ್ಲವೇ ಯುದ್ಧವೇ ಆಗಿರಲಿ ಭಾರತ ಮನಸ್ಸುಮಾಡಿದರೆ, ಇನ್ನೊಮ್ಮೆ ಪಾಕಿಸ್ತಾನವನ್ನು ನೆಲಕಚ್ಚಿಸಲು ಸಶಕ್ತವಾಗಿದೆ ಎಂದು ಬಿಜೆಪಿ ಸಂಸದರೂ ಆಗಿರುವ ಅನುರಾಗ್ ಠಾಕೂರ್ ಹೇಳಿದ್ದಾರೆ.

ನಿಮಗೆ ನಿಮ್ಮ ಜನಗಳ ಮೇಲೆ ವಿಶ್ವಾಸವಿದ್ದರೆ, ನಿಮ್ಮ ಸಂಬಂಧಿ ಹಾಗೂ ಭೂಗತ ಲೋಕದ ಡಾನ್ ದಾವೂದ್ ಇಬ್ರಾಹಿಂ ಭಾರತಕ್ಕೆ ಬರಲು ಹೇಳಿ ಎಂದು ಠಾಕೂರ್ ಪಾಕ್ ಕ್ರಿಕೆಟಿಗನಿಗೆ ಸವಾಲು ಎಸೆದಿದ್ದಾರೆ.