ಪುಣೆ(ಏ.28): ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪ್ರಶಸ್ತಿ ಉಳಿಸಿಕೊಳ್ಳುವ ಆಸೆ ಜೀವಂತವಾಗಿರಿಸಿಕೊಳ್ಳಬೇಕಿದ್ದರೆ, ಇಂದು ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲ್ಲಲೇಬೇಕಿದೆ. 

ಸದ್ಯ ಆಡಿರುವ 6 ಪಂದ್ಯಗಳಲ್ಲಿ 5ರಲ್ಲಿ ಸೋತಿರುವ ಮುಂಬೈ, ಪ್ಲೇ-ಆಫ್‌’ಗೇರಬೇಕಿದ್ದರೆ ಇನ್ನುಳಿದ 8 ಪಂದ್ಯಗಳಲ್ಲಿ ಕನಿಷ್ಠ 7ರಲ್ಲಿ ಗೆಲ್ಲಲ್ಲೇಬೇಕು. ಅಂಕಪಟ್ಟಿಯಲ್ಲಿರುವ ಅಗ್ರ 3 ತಂಡಗಳು ಈಗಾಗಲೇ 5 ಪಂದ್ಯಗಳನ್ನು ಗೆದ್ದಿರುವುದರಿಂದ, ಪ್ಲೇ-ಆಫ್‌’ನಲ್ಲಿ ಸ್ಥಾನಕ್ಕೆ ಪೈಪೋಟಿ ಹೆಚ್ಚಾಗುವ ಲಕ್ಷಣಗಳು ತೋರುತ್ತಿವೆ. ಹೀಗಾಗಿ ಮುಂಬೈ ಮುಂದಿನ ಎಲ್ಲಾ 8 ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದರೆ ಅಚ್ಚರಿಯಿಲ್ಲ. ಆದರೆ ಮುಂಬೈ ಮುಂದಿರುವ ಸವಾಲು ಸಣ್ಣದಲ್ಲ. 

ಚೆನ್ನೈ 5 ಗೆಲುವುಗಳೊಂದಿಗೆ ಅಗ್ರಸ್ಥಾನದಲ್ಲಿದೆ. ತಂಡ ಪ್ರಚಂಡ ಲಯದಲ್ಲಿದ್ದು, ದೊಡ್ಡ ಮೊತ್ತವನ್ನು ನಿರಾಯಾಸವಾಗಿ ಬೆನ್ನಟ್ಟುತ್ತಿದೆ. ಮುಂಬೈ ಬೌಲಿಂಗ್ ಮೊನಚು ಕಳೆದುಕೊಂಡಿದ್ದು, ಸಿಎಸ್‌’ಕೆ ಬ್ಯಾಟ್ಸ್‌ಮನ್‌’ಗಳ ಆತ್ಮವಿಶ್ವಾಸ ಹೆಚ್ಚಲು ಕಾರಣವಾಗಿದೆ. ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ಧ ಮುಂಬೈ ಸೋಲುಂಡಿತ್ತು.

ಪಿಚ್ ರಿಪೋರ್ಟ್: ಪುಣೆ ಕ್ರೀಡಾಂಗಣ ಈ ಆವೃತ್ತಿಯಲ್ಲಿ ಒಂದು ಪಂದ್ಯಕ್ಕೆ ಆತಿಥ್ಯ ವಹಿಸಿದ್ದು, ಆ ಪಂದ್ಯದಲ್ಲಿ ಚೆನ್ನೈ ದೊಡ್ಡ ಮೊತ್ತ ಕಲೆ ಹಾಕಿತ್ತು. ವಾಟ್ಸನ್ ಶತಕದ ನೆರವಿನಿಂದ 204 ರನ್ ಗಳಿಸಿದ್ದ ಚೆನ್ನೈ, ರಾಜಸ್ಥಾನವನ್ನು 140ಕ್ಕೆ ಆಲೌಟ್ ಮಾಡಿತ್ತು. ವೇಗಿಗಳು ಹೆಚ್ಚಿನ ನೆರವು ಪಡೆದಿದ್ದರು. ಈ ಪಂದ್ಯದಲ್ಲೂ ಬ್ಯಾಟ್ಸ್’ಮನ್’ಗಳು ಮೇಲುಗೈ ಸಾಧಿಸುವ ಸಾಧ್ಯತೆ ಇದೆ.
ಪಂದ್ಯ ಆರಂಭ: ಸಂಜೆ 8 ಗಂಟೆಗೆ