30 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದ ಮಯಾಂಕ್, ಪ್ರಥಮ ದರ್ಜೆಯಲ್ಲಿ 4ನೇ ಶತಕ ಪೂರೈಸಿ ಸಂಭ್ರಮಿಸಿದರು. ದಿನದಂತ್ಯಕ್ಕೆ 8 ಓವರ್‌ಗಳು ಬಾಕಿ ಇದ್ದಾಗ 74 ರನ್ ಗಳಿಸಿದ್ದ ಪಾಂಡೆ ಔಟಾದರು. 4ನೇ ವಿಕೆಟ್‌'ಗೆ ಮಯಾಂಕ್ ಹಾಗೂ ಪಾಂಡೆ 136 ರನ್ ಸೇರಿಸಿದರು. ಬಳಿಕ ಮಯಾಂಕ್ ಜತೆಯಾದ ಸ್ಟುವರ್ಟ್ ಬಿನ್ನಿ, ದಿನದಂತ್ಯದ ವರೆಗೂ ವಿಕೆಟ್ ಬೀಳದಂತೆ ಎಚ್ಚರ ವಹಿಸಿದರು.
ಬೆಂಗಳೂರು(ನ.10): ಕಳೆದ ಪಂದ್ಯದ ತ್ರಿಶತಕ ವೀರ, ಭರವಸೆ ಬ್ಯಾಟ್ಸ್ಮನ್ ಮಯಾಂಕ್ ಅಗರ್'ವಾಲ್ (169*) ಭರ್ಜರಿ ಶತಕ ಮತ್ತು ಆರಂಭಿಕ ಬ್ಯಾಟ್ಸ್'ಮನ್ ಆರ್. ಸಮರ್ಥ್ ಹಾಗೂ ಮನೀಶ್ ಪಾಂಡೆ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ದೆಹಲಿ ವಿರುದ್ಧ ‘ಎ’ ಗುಂಪಿನ ರಣಜಿ ಪಂದ್ಯದಲ್ಲಿ ಕರ್ನಾಟಕ ಮೊದಲ ದಿನವೇ ಮೇಲುಗೈ ಸಾಧಿಸಿದೆ.
ನಗರದ ಹೊರವಲಯದಲ್ಲಿರುವ ಆಲೂರು ಮೈದಾನ ಮೊದಲ ಬಾರಿಗೆ ರಣಜಿ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿದ್ದು, ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕ ದಿನದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 348 ರನ್ ಕಲೆಹಾಕಿದ್ದು, ಬೃಹತ್ ಮೊತ್ತದತ್ತ ಹೆಜ್ಜೆ ಹಾಕಿದೆ.
ಮಯಾಂಕ್-ಸಮರ್ಥ್ ಶೈನಿಂಗ್: 2ನೇ ವಿಕೆಟ್'ಗೆ ಆರ್. ಸಮರ್ಥ್ ಜತೆಯಾದ ಮಯಾಂಕ್ ಆತ್ಮವಿಶ್ವಾಸದೊಂದಿಗೆ ಬ್ಯಾಟ್ ಬೀಸಿದರು. ಕರ್ನಾಟಕ ಇವರಿಬ್ಬರ ಜತೆಯಾಟದಿಂದ ವಿರಾಮದ ವೇಳೆಗೆ ಕರ್ನಾಟಕ 1 ವಿಕೆಟ್'ಗೆ 124 ರನ್ ಗಳಿಸಿತು. ಎರಡನೇ ಅವಧಿಯ ಆರಂಭದಲ್ಲೇ 58 ರನ್ ಗಳಿಸಿ ಸಮರ್ಥ್ ಔಟಾದರು. ಇದರೊಂದಿಗೆ ಮಯಾಂಕ್'ರೊಂದಿಗೆ ಅವರ 112 ರನ್'ಗಳ ಜೊತೆಯಾಟಕ್ಕೆ ತೆರೆಬಿತ್ತು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಕರುಣ್ ನಾಯರ್, ಆಟ 15 ರನ್'ಗೆ ಅಂತ್ಯಗೊಂಡಿತು.
ಮಯಾಂಕ್'ಗೆ ಪಾಂಡೆ ಸಾಥ್: 181 ರನ್ ಆಗಿದ್ದಾಗ 3ನೇ ವಿಕೆಟ್ ಪತನಗೊಂಡಿದ್ದು, ತಂಡದ ಮೇಲೆ ಸ್ವಲ್ಪ ಒತ್ತಡ ಹೇರಿತು. ಈ ಹಂತದಲ್ಲಿ ಒಂದೆರಡು ವಿಕೆಟ್'ಗಳು ಬಿದ್ದಿದ್ದರೆ ದೆಹಲಿ ಹಿಡಿತ ಸಾಧಿಸುತ್ತಿತ್ತು. ಆದರೆ ಮಯಾಂಕ್ ಹಾಗೂ ಮನೀಶ್ ಪಾಂಡೆ ಇದಕ್ಕೆ ಅವಕಾಶ ನೀಡಲಿಲ್ಲ. ಜವಾಬ್ದಾರಿಯಿಂದ ಬ್ಯಾಟ್ ಮಾಡಿದ ಇವರಿಬ್ಬರು, ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. 30 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದ ಮಯಾಂಕ್, ಪ್ರಥಮ ದರ್ಜೆಯಲ್ಲಿ 4ನೇ ಶತಕ ಪೂರೈಸಿ ಸಂಭ್ರಮಿಸಿದರು. ದಿನದಂತ್ಯಕ್ಕೆ 8 ಓವರ್ಗಳು ಬಾಕಿ ಇದ್ದಾಗ 74 ರನ್ ಗಳಿಸಿದ್ದ ಪಾಂಡೆ ಔಟಾದರು. 4ನೇ ವಿಕೆಟ್'ಗೆ ಮಯಾಂಕ್ ಹಾಗೂ ಪಾಂಡೆ 136 ರನ್ ಸೇರಿಸಿದರು. ಬಳಿಕ ಮಯಾಂಕ್ ಜತೆಯಾದ ಸ್ಟುವರ್ಟ್ ಬಿನ್ನಿ, ದಿನದಂತ್ಯದ ವರೆಗೂ ವಿಕೆಟ್ ಬೀಳದಂತೆ ಎಚ್ಚರ ವಹಿಸಿದರು. ಮಯಾಂಕ್ 169, ಬಿನ್ನಿ 14 ರನ್ ಗಳಿಸಿ 2ನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ ಮೊದಲ ಇನ್ನಿಂಗ್ಸ್: 348/4 (ಮೊದಲದಿನದಂತ್ಯಕ್ಕೆ)
ಮಯಾಂಕ್: 169*, ಮನೀಶ್: 74
ನವದೀಪ್ 49/1
