ಭುವನೇಶ್ವರ್ ಕುಮಾರ್ ಹೊರತು ಪಡಿಸಿ ಯಾವೊಬ್ಬ ಬೌಲರ್ ಕೂಡಾ ಲಂಕಾ ಬ್ಯಾಟ್ಸ್'ಮನ್'ಗಳನ್ನು ಬಲಿ ಪಡೆಯಲು ಸಫಲವಾಗಲಿಲ್ಲ.
ಲಂಡನ್(ಜೂ.08): ಶ್ರೀಲಂಕಾ ಬ್ಯಾಟ್ಸ್'ಮನ್'ಗಳ ಸಂಘಟಿತ ಬ್ಯಾಟಿಂಗ್ ನೆರವಿನಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಮ್ಯಾಥ್ಯೂಸ್ ಪಡೆ ಭಾರಿ ಮೊತ್ತದ ರನ್ ಬೆನ್ನತ್ತಿ ದಾಖಲೆಯ ಜಯಭೇರಿ ಬಾರಿಸಿದೆ.
ಭಾರತ ನೀಡಿದ್ದ 322ರನ್'ಗಳ ಬೃಹತ್ ಗುರಿ ಬೆನ್ನತ್ತಿದ ಶ್ರೀಲಂಕಾ ಪಡೆ ಇನ್ನೂ ಎಂಟು ಎಸೆತಗಳು ಬಾಕಿಯಿರುವಂತೆಯೇ ಏಳು ವಿಕೆಟ್'ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಸೆಮಿಫೈನಲ್ ಪ್ರವೇಶಿಸುವ ತನ್ನ ಕನಸ್ಸನ್ನು ಆ್ಯಂಜಲೋ ಮ್ಯಾಥ್ಯೂಸ್ ಪಡೆ ಜೀವಂತವಾಗಿರಿಸಿಕೊಂಡಿದೆ.
ಗೆಲ್ಲಲೇಬೇಕಾದ ಒತ್ತಡದ ಸನ್ನಿವೇಶದಲ್ಲಿ ಗುರಿ ಬೆನ್ನತ್ತಿದ ಲಂಕಾ ಆರಂಭದಲ್ಲೇ ಆಘಾತವೆದುರಿಸಿತು. ತಂಡದ ಮೊತ್ತ ಕೇವಲ 11 ರನ್ ಗಳಿದ್ದಾಗ ಆರಂಭಿಕ ಆಟಗಾರ ನಿರೋಶನ್ ಡಿಕ್'ವಾಲ(08) ಭುವನೇಶ್ವರ್ ಕುಮಾರ್'ಗೆ ವಿಕೆಟ್ ಒಪ್ಪಿಸಿದರು. ಆದರೆ ಎರಡನೇ ವಿಕೆಟ್'ಗೆ ಜತೆಯಾದ ಧನುಷ್ಕಾ ಗುಣತಿಲಕ(76) ಕುಶಾಲ ಮೆಂಡಿಸ್(89) 159ರನ್'ಗಳ ಭರ್ಜರಿ ಜತೆಯಾಟ ನೀಡಿ ತಂಡಕ್ಕೆ ಭದ್ರ ಬುನಾದಿ ಒದಗಿಸಿದರು. ಆದರೆ ಈ ಇಬ್ಬರು ಬ್ಯಾಟ್ಸ್'ಮನ್'ಗಳು ರನೌಟ್ ಆಗಿ ಪೆವಿಲಿಯನ್ ಸೇರಿದರು. ಈ ವೇಳೆ ಟೀಂ ಇಂಡಿಯಾ ಮೇಲುಗೈ ಸಾಧಿಸುವ ಅವಕಾಶವಿತ್ತಾದರೂ, ಅದಕ್ಕೆ ಲಂಕಾ ಮಧ್ಯಮಕ್ರಮಾಂಕದ ಬ್ಯಾಟ್ಸ್'ಮನ್'ಗಳು ಅವಕಾಶ ನೀಡಲಿಲ್ಲ. ಕುಶಾಲ ಮೆಂಡೀಸ್(47 ರನ್) ಸ್ಫೋಟಕ ಬ್ಯಾಟಿಂಗ್ ಮಾಡಿ ಕೊನೆಯಲ್ಲಿ ಗಾಯಗೊಂಡಿದ್ದರಿಂದ ರಿಟೈರ್ಡ್ ಹರ್ಟ್ ಆದರು.
ಆದರೆ ಕೊನೆಯಲ್ಲಿ ನಿರಾತಂಕವಾಗಿ ಬ್ಯಾಟ್'ಬೀಸಿದ ನಾಯಕ ಆ್ಯಂಜಲೋ ಮ್ಯಾಥ್ಯೂಸ್(52) ಹಾಗೂ ಅಸೀಲಾ ಗುಣರತ್ನೆ ಯಶಸ್ವಿಯಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಭುವನೇಶ್ವರ್ ಕುಮಾರ್ ಹೊರತು ಪಡಿಸಿ ಯಾವೊಬ್ಬ ಬೌಲರ್ ಕೂಡಾ ಲಂಕಾ ಬ್ಯಾಟ್ಸ್'ಮನ್'ಗಳನ್ನು ಬಲಿ ಪಡೆಯಲು ಸಫಲವಾಗಲಿಲ್ಲ.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಶಿಖರ್ ಧವನ್ ಭರ್ಜರಿ ಶತಕ(125) ಹಾಗೂ ರೋಹಿತ್ ಶರ್ಮಾ(78) ಮತ್ತು ಎಂ.ಎಸ್. ಧೋನಿ(63) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 321ರನ್'ಗಳ ಸವಾಲಿನ ಮೊತ್ತ ಕಲೆಹಾಕಿತು. ಲಂಕಾ ಬೌಲರ್'ಗಳನ್ನು ಮನಬಂದಂತೆ ದಂಡಿಸಿದ ಶಿಖರ್ ಧವನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೂರನೇ ಹಾಗೂ ವೃತ್ತಿಜೀವನದಲ್ಲಿ ಒಟ್ಟಾರೆ 10ನೇ ಶತಕ ದಾಖಲಿಸಿದರು. ಇನ್ನು ಉತ್ತಮ ಬ್ಯಾಟ್ ಬೀಸಿದ ರೋಹಿತ್ ಶರ್ಮಾ ಹಾಗೂ ಧೋನಿ ತಲಾ ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾದರು. ಇನ್ನು ಕೆಳಕ್ರಮಾಂಕದಲ್ಲಿ ಅಬ್ಬರಿಸಿದ ಕೇದಾರ್ ಜಾಧವ್ ಕೇವಲ 13 ಎಸೆತಗಳಲ್ಲಿ 25ರನ್ ಬಾರಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
ಶ್ರೀಲಂಕಾ ಪರ ಮಾಲಿಂಗ ಎರಡು ವಿಕೆಟ್ ಪಡೆದರೆ, ಸುರಂಗ ಲಕ್ಮಲ್, ನುವಾನ್ ಪ್ರದೀಪ್ ಮತ್ತು ತಿಸಾರ ಪೆರೇರಾ ತಲಾ ಒಂದು ವಿಕೆಟ್ ಪಡೆದರು.
ಸಮಯೋಚಿತ ಆಟವಾಡಿದ ಕುಶಾಲ್ ಮೆಂಡೀಸ್ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್:
ಭಾರತ : 321/6
ಶಿಖರ್ ಧವನ್ : 125
ರೋಹಿತ್ ಶರ್ಮಾ : 78
ಲಸಿತ್ ಮಾಲಿಂಗ : 70/2
ಶ್ರೀಲಂಕಾ : 322/3
ಕುಸಾಲ್ ಮೆಂಡೀಸ್ : 89
ಧನುಷ್ಕಾ ಗುಣತಿಲಕ : 76
ಭುವನೇಶ್ವರ್ ಕುಮಾರ್ : 54/1
