ಮಾಸ್ಕೋ(ಅ.05): ರಷ್ಯಾ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ ಮೇಲಿನ 2 ವರ್ಷದ ನಿಷೇಧ ಶಿಕ್ಷೆ 15 ತಿಂಗಳಿಗೆ ಕಡಿತಗೊಂಡ ಸುದ್ದಿ ಬಿತ್ತರವಾಗುತ್ತಲೇ ಅವರನ್ನು ಜರೆದು ಒಪ್ಪಂದ ಕಡಿದುಕೊಂಡಿದ್ದ ಕೆಲ ಬ್ರಾಂಡೆಡ್ ಕಂಪನಿಗಳು ಗಕ್ಕನೇ ಎದ್ದು ಕೂತಿದ್ದು, ಶರಪೋವಾ ಹಿಂದೆ ಬಿದ್ದಿವೆ.
ನಿಷೇಧಿತ ಉದ್ದೀಪನಾ ಮದ್ದು ಸೇವನೆಯನ್ನು ಸ್ವತಃ ಶರಪೋವಾ ಒಪ್ಪಿಕೊಂಡ ಬೆನ್ನಲ್ಲೇ ಅವರೊಂದಿಗೆ ಜಾಹೀರಾತು ನಂಟು ಕಳೆದುಕೊಂಡಿದ್ದ ಪೋಶ್‌ರ್, ಟ್ಯಾಗ್ ಹ್ಯುಯೆರ್ ಸೇರಿದಂತೆ ಹಲವಾರು ಕಂಪನಿಗಳು ತಮ್ಮ ಉತ್ಪನ್ನಗಳಿಗೆ ಪುನಃ ಅವರ ರಾಯಭಾರತ್ವ ಪಡೆಯಲು ಮುಂದಾಗಿವೆ.
ನಿಷೇಧಿತ ಮೆಲ್ಡೋನಿಯಂ ಸೇವಿಸುತ್ತಿದ್ದುದು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ, ಶರಪೋವಾ ಮೇಲೆ ಅಂತಾರಾಷ್ಟ್ರೀಯ ಉದ್ದೀಪನಾ ನಿಗ್ರಹ ದಳ (ವಾಡಾ) 2 ವರ್ಷಗಳ ನಿಷೇಧ ಹೇರಿತ್ತು. ಅದರ ವಿರುದ್ಧ ಶರಪೋವಾ ಸಿಎಎಸ್ ಮೊರೆ ಹೋಗಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿದ್ದ ಸಿಎಎಸ್, ಮಂಗಳವಾರ ತೀರ್ಪು ನೀಡಿ, ಅವರ ನಿಷೇಧದ ಅವಧಿಯನ್ನು 15 ತಿಂಗಳುಗಳಿಗೆ ಇಳಿಸಿತ್ತು. ಇದರಿದಾಗಿ, ಮುಂದಿನ ವರ್ಷ ಏ. 26ರಿಂದ ಅವರು ಪುನಃ ವೃತ್ತಿಪರ ಟೆನಿಸ್ಗೆ ಮರಳುವುದು ಖಾತ್ರಿಯಾಗಿದೆ.
ಏತನ್ಮಧ್ಯೆ, ಈ ಹಿಂದೆ ನಿಷೇಧದ ನಂತರವೂ ಶರಪೋವಾ ಅವರನ್ನು ಬೆಂಬಲಿಸಿದ್ದ ನೈಕ್, ಮಿನರಲ್ ವಾಟರ್ ಕಂಪನಿ ಇವಿಯನ್ ಮುಂತಾದ ಕಂಪನಿಗಳು ಸಿಎಎಸ್ ಆದೇಶವನ್ನು ಹರ್ಷದಿಂದ ಸ್ವಾಗತಿಸಿವೆ.
