ಪರ್ಲ್ ತಂಡದ ಪರ ಬೌಲಿಂಗ್ ಆರಂಭಿಸಿದ ಆಕಾಶ್ ಮೊದಲ ಓವರ್‌ನಲ್ಲಿ 2, ಎರಡನೇ ಓವರ್‌'ನಲ್ಲಿ 2 ಹಾಗೂ 3ನೇ ಓವರ್‌'ನಲ್ಲಿ 2 ವಿಕೆಟ್ ಪಡೆದರು. ನಾಲ್ಕನೇ ಓವರ್‌'ನಲ್ಲಿ 4 ವಿಕೆಟ್ ಪಡೆದ ಆಕಾಶ್ 10 ವಿಕೆಟ್ ಪೂರೈಸಿದರು. ವಿಶೇಷ ಎಂದರೆ, ಕೊನೆ 3 ಎಸೆತಗಳಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಸಹ ಮಾಡಿದರು.
ಜೈಪುರ(ನ.09): ಕ್ರಿಕೆಟ್'ನಲ್ಲಿ ಯಾವುದೂ ಅಸಾಧ್ಯವಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ರಾಜಸ್ಥಾನ ಮೂಲದ 15 ವರ್ಷದ ಎಡಗೈ ವೇಗಿ ಆಕಾಶ್ ಚೌಧರಿ, ಇಲ್ಲಿ ನಡೆದ ದೇಸಿ ಟಿ20 ಪಂದ್ಯವೊಂದರಲ್ಲಿ ಒಂದೂ ರನ್ ನೀಡದೆ 10 ವಿಕೆಟ್ ಕಬಳಿಸಿದ್ದಾರೆ.
ಟಿ20ಯಲ್ಲಿ 5 ವಿಕೆಟ್ ಗೊಂಚಲು ಪಡೆಯುವುದೇ ದೊಡ್ಡ ಸಾಧನೆ. ಹೀಗಿದ್ದಾಗ, ಒಬ್ಬನೇ ಬೌಲರ್ 10 ವಿಕೆಟ್ ಕಬಳಿಸುವುದು, ಅದೂ ಒಂದೂ ರನ್ ಬಿಟ್ಟುಕೊಡದೆ. ಈ ರೀತಿಯ ದಾಖಲೆಯನ್ನು ಕ್ರಿಕೆಟ್ ಜಗತ್ತು ಬಹುಶಃ ಇದೇ ಮೊದಲ ಬಾರಿಗೆ ನೋಡುತ್ತಿದೆ. ದಿವಂಗತ ಭವೆರ್ ಸಿಂಗ್ ಟಿ20 ಪಂದ್ಯಾವಳಿಯಲ್ಲಿ ಪರ್ಲ್ ಅಕಾಡೆಮಿ ತಂಡವನ್ನು ಪ್ರತಿನಿಧಿಸಿದ್ದ ಆಕಾಶ್, ದಿಶಾ ಕ್ರಿಕೆಟ್ ಅಕಾಡೆಮಿ ವಿರುದ್ಧ 10 ವಿಕೆಟ್ ಸಾಧನೆ ಮಾಡಿದರು. ಮೊದಲು ಬ್ಯಾಟಿಂಗ್ ಮಾಡಿದ ಪರ್ಲ್ ತಂಡ 156 ರನ್ ಗಳಿಸಿತ್ತು. ಬಳಿಕ ದಿಶಾ ಕ್ರಿಕೆಟ್ ಅಕಾಡೆಮಿ ಕೇವಲ 32 ರನ್'ಗಳಿಗೆ ಆಲೌಟ್ ಆಯಿತು.
4 ಓವರ್, 0 ರನ್, 10 ವಿಕೆಟ್: ಪರ್ಲ್ ತಂಡದ ಪರ ಬೌಲಿಂಗ್ ಆರಂಭಿಸಿದ ಆಕಾಶ್ ಮೊದಲ ಓವರ್ನಲ್ಲಿ 2, ಎರಡನೇ ಓವರ್'ನಲ್ಲಿ 2 ಹಾಗೂ 3ನೇ ಓವರ್'ನಲ್ಲಿ 2 ವಿಕೆಟ್ ಪಡೆದರು. ನಾಲ್ಕನೇ ಓವರ್'ನಲ್ಲಿ 4 ವಿಕೆಟ್ ಪಡೆದ ಆಕಾಶ್ 10 ವಿಕೆಟ್ ಪೂರೈಸಿದರು. ವಿಶೇಷ ಎಂದರೆ, ಕೊನೆ 3 ಎಸೆತಗಳಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಸಹ ಮಾಡಿದರು.
2002ರಲ್ಲಿ ರಾಜಸ್ಥಾನದ ಭರತ್'ಪುರ್'ನಲ್ಲಿ ಜನಿಸಿದ ಆಕಾಶ್, ಜಹೀರ್ ಖಾನ್'ರ ದೊಡ್ಡ ಅಭಿಮಾನಿ. ಸದ್ಯ ರಾಜಸ್ಥಾನ ಅಂಡರ್-16 ತಂಡಕ್ಕೆ ಕಾಲಿಡಲು ಪ್ರಯತ್ನಿಸುತ್ತಿರುವ ಆಕಾಶ್, ಮುಂದೊಂದು ದಿನ ಭಾರತ ತಂಡವನ್ನು ಪ್ರತಿನಿಧಿಸುವ ಕನಸಿದೆ ಎಂದು ಹೇಳಿಕೊಂಡಿದ್ದಾರೆ.
